ಜನತಾ ಶಿಕ್ಷಣ ಸಂಸ್ಥೆ (ಪಿಇಟಿ) ಅಂತಹ ದೊಡ್ಡ ಸಂಸ್ಥೆಯನ್ನು ಕಟ್ಟಿದ ನಮ್ಮ ತಾತ ಕೆ.ವಿ. ಶಂಕರಗೌಡರು ಹಾಗೂ ನಮ್ಮ ತಂದೆ ಸಚ್ಚಿದಾನಂದ ಅವರು ನನಗೆ ಆಸ್ತಿ ಮಾಡಿ ಕೊಟ್ಟಿಲ್ಲ. ನಮ್ಮ ಕುಟುಂಬಕ್ಕೆ ಜನರೇ ಆಸ್ತಿ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯ್ ಆನಂದ್ ತಿಳಿಸಿದರು.
ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಟಗೌಡನಹಳ್ಳಿ , ಉಪ್ಪರಕನಹಳ್ಳಿ, ಮಲ್ಲಘಟ್ಟ, ಚೋಕನಹಳ್ಳಿ, ಕರಡಿ ಕೊಪ್ಪಲು, ಹಬ್ಬದ ಮಾರನಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.
ನಮ್ಮ ತಾತ ಕೆ.ವಿ.ಶಂಕರಗೌಡರು 1952 ರಲ್ಲಿ ಪಿಇಎಸ್ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿದರು. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ನೆಲೆಸಿದ್ದಾರೆ. ಸಾವಿರಾರು ಮಂದಿ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ತಾತ ಕೆ. ವಿ. ಶಂಕರಗೌಡ ಹಾಗೂ ತಂದೆ ಸಚ್ಚಿದಾನಂದನವರು ನನಗೆ ಯಾವುದೇ ಆಸ್ತಿಯನ್ನು ಮಾಡಿಲ್ಲ ನಮ್ಮ ಕುಟುಂಬಕ್ಕೆ ಜನರೇ ಆಸ್ತಿ. ನಮ್ಮ ತಾತ, ತಂದೆಯವರ ಆಶಯದಂತೆ ಜನರಿಗೆ ಸೇವೆ ಸಲ್ಲಿಸಲು ಬಂದಿದ್ದೇನೆ ಎಂದರು.

ಅಳಬೇಡಿ ನಾವಿದ್ದೇವೆ
ಮಲ್ಲಾಘಟ್ಟ ಗ್ರಾಮದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಕೆ.ಎಸ್.ವಿಜಯ್ ಆನಂದ್ ಕಣ್ಣೀರು ಹಾಕಿದರು.ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯೊಬ್ಬರು ಕೆ.ಎಸ್.ವಿಜಯ್ ಆನಂದ್ ಅವರಿಗೆ ನೀವು ಅಳಬೇಡಿ.ನಿಮ್ಮ ತಾತ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಲ್ಲಿ ನಮ್ಮ ಮಕ್ಕಳು ಓದಿ ವಿದ್ಯಾವಂತರಾಗಿದ್ದಾರೆ.ನಗು ನಗುತಾ ಬನ್ನಿ, ನಿಮಗೆ ನಾವು ಮತ ನೀಡುತ್ತೇವೆ ಎಂದರು.
ಆಗ ವಿಜಯ್ ಆನಂದ್ ಪ್ರಚಾರ ವಾಹನದಿಂದ ಬಂದು ಮಹಿಳೆಗೆ ಕೈ ಮುಗಿದು ಕಣ್ಣೀರು ಸುರಿಸಿ ಕಾಲಿಗೆ ಬಿದ್ದಾಗ,ಅವರು ತಲೆ ಮುಟ್ಟಿ ಆಶೀರ್ವದಿಸಿದರು.
ಒಂದು ಅವಕಾಶ ಕೊಡಿ
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ನಾನು,ಎಚ್.ಎನ್. ಯೋಗೇಶ್, ಮುದ್ಧನಘಟ್ಟ ಮಹಾಲಿಂಗೇಗೌಡ ಆಕಾಂಕ್ಷಿಗಳಾಗಿದ್ದೆವು. ಆದರೆ ಪಕ್ಷಕ್ಕಾಗಿ ದುಡಿದ ನಮಗೆ ಟಿಕೆಟ್ ನೀಡದೆ ನಮ್ಮ ಕ್ಷೇತ್ರಕ್ಕೆ ಸೇರದ ಪಕ್ಕದ ಕ್ಷೇತ್ರದ ವ್ಯಕ್ತಿಗೆ ಟಿಕೆಟ್ ನೀಡಿ ಅಭ್ಯರ್ಥಿಯಾಗಿ ಮಾಡಿದ್ದಾರೆ. ಇದರಿಂದ ನಮಗೆ ಬಹಳ ಬೇಸರವಾಗಿ, ನಾವೆಲ್ಲ ಸೇರಿ ಒಗ್ಗಟ್ಟಾಗಿ ಅಭ್ಯರ್ಥಿ ಹಾಕೋಣ ಎಂದು ಶಾಸಕ ಎಂ ಶ್ರೀನಿವಾಸ್ ರವರ ನೇತೃತ್ವದಲ್ಲಿ ಚರ್ಚೆ ಮಾಡಿದವು. ಅದರಂತೆ ಸ್ವಾಭಿಮಾನಿ ಪಡೆಯಿಂದ ನಾನು ಅಭ್ಯರ್ಥಿಯಾಗಿದ್ದೇನೆ. ನನಗೆ ವಾಸ ಮಾಡಲು ಸ್ವಂತ ಮನೆ ಇಲ್ಲ. ನೀವೇ ನನ್ನ ಆಸ್ತಿ, ಕ್ಷೇತ್ರದ ಜನತೆ ಒಂದು ಅವಕಾಶ ನೀಡಿದರೆ ನಿಮ್ಮ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದರು.
ನನ್ನ ಪರವಾಗಿ ಯಾವ ದೊಡ್ಡ ನಾಯಕರು ಜೊತೆಗಿಲ್ಲ. ಮತದಾರರೇ ನನ್ನ ನಾಯಕರಾಗಿದ್ದು, ಮಂಡ್ಯ ಅಭಿವೃದ್ಧಿಗೆ ಒಂದು ಅವಕಾಶ ನೀಡಬೇಕು.ನನ್ನ ರಾಜಕೀಯ ಗುರು ಎಂ.ಶ್ರೀನಿವಾಸ್ ನಾಯಕತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ನನ್ನ ಕ್ರಮ ಸಂಖ್ಯೆ 14 ಆಗಿದ್ದು,ವಜ್ರದ ಗುರುತಿಗೆ ನಿಮ್ಮ ಮತ ನೀಡಬೇಕು ಎಂದು ಮನವಿ ಮಾಡಿದರು.

ಹಿಂದೆ ಸರಿಯುವ ಮಾತೇ ಇಲ್ಲ
ನಾನು ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಮಾಧ್ಯವೊಂದರಲ್ಲಿ ಬಂದಿದೆ.ನನ್ನ ವಿರೋಧಿಗಳು ನಾನು ಕಣದಿಂದ ಹಿಂದೆ ಸರಿಯುತ್ತಾನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.ನಾನು ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾನು ಯಾವ ಕಾರಣಕ್ಕೂ ಜೆಡಿಎಸ್ ಅಭ್ಯರ್ಥಿ ಜೊತೆ ಕೈಜೋಡಿಸುವುದಿಲ್ಲ. ಮೇ 10 ಚುನಾವಣೆಯ ಮುಗಿಯವ 5 ಗಂಟೆವರೆಗೂ ನಾನು ಕಣದಲ್ಲಿರುತ್ತೇನೆ.ನನ್ನನ್ನು ಹಿಂದೆ ಸರಿಸಲು ಯಾರಿಂದಲೂ ಸಾಧ್ಯವಿಲ್ಲ.ನಿಮ್ಮ ಮನೆಯ ಮಗ,ಸಹೋದರ ಎಂದು ತಿಳಿದು ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ವಿಜಯ್ ಆನಂದ್ ಯೋಗ್ಯ
ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ನನ್ನ ಸ್ಥಾನ ತುಂಬಲು ಕೆ.ವಿ. ಶಂಕರಗೌಡ ಕುಟುಂಬದ ಕುಡಿ ವಿಜಯ್ ಆನಂದ್ ಯೋಗ್ಯ ಅಭ್ಯರ್ಥಿ. ಜಾತ್ಯತೀತ ಜನತಾದಳದ ಅಭ್ಯರ್ಥಿಗಿಂತ ಹೆಚ್ಚಿನ ಮತವನ್ನು ವಿಜಯ್ ಆನಂದ್ ಅವರಿಗೆ ನೀಡಿ ಅವರನ್ನು ಗೆಲ್ಲಿಸುವ ಮೂಲಕ ಹಣ ಬಲ ದೊಡ್ಡದೋ ಜನಬಲ ದೊಡ್ಡದೋ ಎಂಬುದನ್ನು ಕ್ಷೇತ್ರದ ಜನತೆ ತೋರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲೋಕೇಶ್,ಬಸರಾಳು ತಿಮ್ಮೇಗೌಡ,ಹೆಚ್. ಎನ್. ಯೋಗೇಶ್, ಮುದ್ದನಘಟ್ಟ ಮಹಾಲಿಂಗೇಗೌಡ, ವಿಶಾಲ್ ರಘು, ಭೈರವ, ಸಾತನೂರು ಶಿವಕುಮಾರ್ ಸೇರಿದಂತೆ ಮತ್ತಿತರರಿದ್ದರು.




