Friday, November 20, 2026

ಪ್ರಾಯೋಗಿಕ ಆವೃತ್ತಿ

”ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ” ಎಂದು ಮೋದಿಯ ಕಾಲೆಳೆದ ಸಿದ್ದರಾಮಯ್ಯ

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ! ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ! ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ! ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ! – ನರೇಂದ್ರ ಮೋದಿಯವರೇ ನಿಮ್ಮ ಇಂದಿನ ಭಾಷಣ ಕೇಳಿ ಬಸವಣ್ಣನವರ ಈ ವಚನ ನೆನಪಾಯಿತು. ಇದು ನಿಮ್ಮ ನಡೆ-ನುಡಿಗೆ ಹೇಳಿ ಮಾಡಿಸಿದಂತಿದೆ ಎಂದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿಯವರ ಕಾಲೆಳೆದಿದ್ದಾರೆ.

“>

ಸೋನಿಯಾ ಗಾಂಧಿಯವರನ್ನು ಜರ್ಸಿ ಕೌ, ಬಾರ್ ಡಾನ್ಸರ್, ಕಾಂಗ್ರೆಸ್ ಕಿ ವಿಧವಾ ಇನ್ನೂ ಏನೇನೋ ಅಂದವರು ನೀವೇ ಅಲ್ಲವೇ? ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ತಾನೆ ಸೋನಿಯಾಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿಲ್ಲವೇ? ನಿಮ್ಮ ರಕ್ತದ ಕಣಕಣದಲ್ಲಿಯೂ ದ್ವೇಷಾಸೂಯೆಯ ವಿಷ ಇಲ್ಲವೇ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. 

ನರೇಂದ್ರ ಮೋದಿಯವರೇ ನಿಮ್ಮ ಇಡೀ ರಾಜಕೀಯ ಬದುಕೇ ಒಂದು ಸುಳ್ಳಿನ ಕೋಟೆ. ಅದು ಮುರಿದು ಬೀಳುವ ಕಾಲ ಬಂದಿದೆ. ಕಾಂಗ್ರೆಸ್ ನಿಮ್ಮನ್ನು 91 ಬಾರಿ ನಿಂದಿಸಿದೆ ಎನ್ನುವುದು ನಿಮ್ಮ ಇತ್ತೀಚಿನ ಸುಳ್ಳು. ನಮ್ಮ ಪಕ್ಷದ ನಾಯಕರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನಿಂದಿಸುವುದೇ ನಿಮ್ಮ ಮತ್ತು ನಿಮ್ಮ ಪಕ್ಷದ ನಾಯಕರ ದಿನಚರಿ ಅಲ್ಲವೇ ? 

ಬಂಜಾರ ಸಮುದಾಯ ಮತ್ತು ಕಾಂಗ್ರೆಸ್ ಸಂಬಂಧಕ್ಕೆ ಹುಳಿ ಹಿಂಡುವ ನಿಮ್ಮ ಕುತಂತ್ರ ಫಲ ನೀಡಲಾರದು. ಬಂಜಾರರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಿದ್ದು ಕಾಂಗ್ರೆಸ್ ಪಕ್ಷ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಭೂ ಸುಧಾರಣೆ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿಯನ್ನು ತಂದಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ ಎನ್ನುವುದು ನಿಮಗೆ ತಿಳಿದಿಲ್ಲವೇ ನರೇಂದ್ರ ಮೋದಿಯವರೇ ಎಂದಿದ್ದಾರೆ.

ಲಿಂಗಾಯತ ಸಮುದಾಯದಲ್ಲಿ ಎರಡನೇ ತಲೆಮಾರಿನ ನಾಯಕರೇ ಇರಬಾರದೆಂದು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಸಂಜಯ ಪಾಟೀಲ್, ಸೊಗಡು ಶಿವಣ್ಣ ಹೀಗೆ ಸಾಲು ಸಾಲು ನಾಯಕರಿಗೆ ಈ ಬಾರಿ ಟಿಕೆಟ್ ನೀಡದೆ ಅವರ ರಾಜಕೀಯ ಜೀವನವನ್ನೇ ಮುಗಿಸುವ ಹುನ್ನಾರ ಮಾಡಿರುವವರು ನೀವೇ ಅಲ್ಲವೇ ? ಎಂದು ಕಿಡಿಕಾರಿದ್ದಾರೆ.

ರಾಜ್ಯದ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ನಿಮ್ಮ ಕುತಂತ್ರಿ ಬುದ್ದಿಯನ್ನು ರಾಜ್ಯದ ಲಿಂಗಾಯತರು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ನಿಮ್ಮ ಇಡೀ ಭಾಷಣದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿ.ಎಸ್.ಯಡಿಯೂರಪ್ಪನವರ ಹೆಸರನ್ನು ಒಮ್ಮೆಯೂ ಎತ್ತಲಿಲ್ಲ ಯಾಕೆ? ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾಲದಲ್ಲಿಯೇ ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದಿರಿ, ಅವರನ್ನು ಎರಡೆರಡು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದಿರಿ, ಅವರ ಮಗನಿಗೆ ಕನಿಷ್ಠ ಶಾಸಕನನ್ನಾಗಿ ಮಾಡಲಿಲ್ಲ, ಸಚಿವರನ್ನಾಗಿ ಮಾಡಲಿಲ್ಲ. ಈಗ ಐಟಿ, ಇಡಿ, ಸಿಬಿಐ ಮೂಲಕ ಬಾಯಿಮುಚ್ಚಿಸಿ ಕೂರಿಸಿರುವವರು ನೀವೇ ಅಲ್ಲವೇ ಎಂದು ಪ್ರಶ್ನಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ