Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸರ್ಕಾರದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ರಕ್ಷಣೆ ಇಲ್ಲ – ನೆಟ್ಟಾ ಡಿಸೋಜ

ರಾಷ್ಟೀಯ ಹಾಗೂ ಅಂತರಾಷ್ಟೀಯ ಕೀಡಾಕೂಟಗಳಲ್ಲಿ ಪದಕ ಗೆದ್ದು ಕೊಟ್ಟು ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿಪಟುಗಳಿಗೆ ಬಿಜೆಪಿ ಸರ್ಕಾರದಲ್ಲಿ ರಕ್ಷಣೆ ಇಲ್ಲದಂತಾಗಿದೆ ಎಂದು ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ನೆಟ್ಟಾ ಡಿಸೋಜ ಕಿಡಿಕಾರಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯ ನಡೆಸಿರುವ ಬಿಜೆಪಿ ಸಂಸದ ಹಾಗೂ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್‌ಸಿಂಗ್ ವಿರುದ್ಧ ಎಫ್‌ಐಆರ್ ಸಹ ದಾಖಲಿಸಲಿಲ್ಲ. ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ ದಾಖಲಿಸಿದ್ದಾರೆ. ಸ್ಥಳಕ್ಕೆ ತಾವು ಖುದ್ಧು ಭೇಟಿ ನೀಡಿ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ನೀಡಿದ್ದೇನೆ ಎಂದು ವಿವರಿಸಿದರು.

ಬೇಟಿ ಪಡಾವೋ, ಬೇಟಿ ಬಚಾವೋ ಎಂಬುದು ಹಾಸ್ಯಾಸ್ಪದ
ಹೆಣ್ಣು ಮಕ್ಕಳ ರಕ್ಷಣೆಗಾಗಿ ಬೇಟಿ ಪಡಾವೋ, ಬೇಟಿ ಬಚಾವೋ ಆಂದೋಲನ ರೂಪಿಸಿದ್ದೇವೆ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು, ನೊಂದ ಕ್ರೀಡಾಪಟುಗಳು ಸಂಸತ್ ಭವನದಿಂದ ಕೇವಲ ಆರೇಳು ಕಿ.ಮೀ. ದೂರದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ, ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಸಚಿವರಾಗಲೀ, ಕ್ರೀಡಾ ಸಚಿವರಾಗಲೀ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಆರೋಪಿ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ರಕ್ಷಣೆಗೆ ನಿಂತಿದ್ದಾರೆ ಎಂದು ಕಿಡಿಕಾರಿದರು.

ಕ್ರೀಡಾಪಟುಗಳು ತಮ್ಮ ತರಬೇತಿ ಬಿಟ್ಟು ಒಂದು ದಿನ ಪ್ರತಿಭಟನೆ ಮಾಡಿದರೆ 10 ದಿನ ಹಿಂದಕ್ಕೆ ಹೋದಂತಾಗುತ್ತದೆ. ಹಾಗಾಗಿ ನಿತ್ಯ ತರಬೇತಿಯ ಜತೆಗೆ ಪ್ರತಿಭಟನೆಯನ್ನೂ ಮಾಡುತ್ತಿದ್ದಾರೆ. ಅವರಿಗೆ ನಾವು ನೈತಿಕ ಬೆಂಬಲ ನೀಡಿದ್ದೇವೆ, ಆದರೆ, ಈ ಬಗ್ಗೆ ಯಾವುದೇ ಮಾಧ್ಯಮಗಳು ಪ್ರಸಾರ ಮಾಡಿಲ್ಲ ಹಾಗೂ ಸತ್ಯವನ್ನು ಹೊರತರುವ ಕೆಲಸ ಮಾಡಿಲ್ಲ. ಹಲವು ಮಾಧ್ಯಮಗಳು ಕೇಂದ್ರ ಸರ್ಕಾರಕ್ಕೆ ಮಾರಾಟವಾಗಿರುವುದರಿಂದ ವಿರೋಧ ಪಕ್ಷಗಳು ಆಡಳಿತರೂಢ ಸರ್ಕಾರದ ವಿರುದ್ಧ ಹೋರಾಟ ಮಾಡಿದರೂ ಬಿತ್ತರವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ದನಿಯೆತ್ತಿಲ್ಲ
ಕುಸ್ತಿ ಕ್ರೀಡೆಯಲ್ಲಿ ಭಾರತಕ್ಕೆ ಪದಕ ತಂದಿರುವ ಈ ಹೆಮ್ಮೆಯ ಹೆಣ್ಣು ಮಕ್ಕಳ ವಿಚಾರದಲ್ಲಿ ಕೇಂದ್ರ ಸರ್ಕಾರ ತಾಳಿರುವ ನಿಲುವು ಖಂಡನೀಯ. ಪದಕ ತಂದಾಗ ಸ್ವತಃ ಪ್ರಧಾನಮಂತ್ರಿ ಅವರೇ ಇವರೆಲ್ಲ ನಮ್ಮ ಮಕ್ಕಳು, ಪದಕ ತಂದು ಭಾರತದ ಗೌರವ ಹೆಚ್ಚಿಸಿದ್ದಾರೆ ಎಂದೆಲ್ಲ ಹೇಳಿದ್ದರು‌. ಆದರೆ ಅದೇ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೂ ಆ ಬಗ್ಗೆ ಮಾತನಾಡದೆ ಸುಮ್ಮನಿದ್ದಾರೆ.ಭೇಟಿ ಬಚಾವೋ ಭೇಟಿ ಪಡಾವೋ,ಖೇಲೋ ಇಂಡಿಯಾ ಎನ್ನುವ ಪ್ರಧಾನ ಮಂತ್ರಿಯವರು ಈ ಹೆಣ್ಣು ಮಕ್ಕಳ ಬಗ್ಗೆ ಯಾಕೆ ದನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

ಅಪ್ರಾಪ್ತ ಕುಸ್ತಿ ಪಟು ಸೇರಿದಂತೆ ಏಳು ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ಮಾಡಲು ಬಿಜೆಪಿ ಸರ್ಕಾರ ಬಿಡುತ್ತಿಲ್ಲ. ಅವರಿಗೆ ನಾನಾ ವಿಧದ ಕಿರುಕುಳ ನೀಡುತ್ತಿದೆ. ಪ್ರತಿಭಟನೆ ಜಾಗಕ್ಕೆ ಆರು ಕಿಲೋಮೀಟರ್ ದೂರದಲ್ಲಿರುವ ಪ್ರಧಾನಿಯವರು ಇದುವರೆಗೆ ಸಂತ್ರಸ್ತ ಕ್ರೀಡಾಪಟುಗಳನ್ನು ಭೇಟಿ ಭೇಟಿ ಮಾಡಿಲ್ಲ. ರಾಹುಲ್ ಗಾಂಧಿಯವರನ್ನು ಮೊಕದ್ದಮೆಯೊಂದರಲ್ಲಿ ಸಿಲುಕಿಸಿ ಅವರ ಸಂಸದ ಸ್ಥಾನ ವಜಾ ಮಾಡಲಾಗಿದೆ.ಆದರೆ ಲೈಂಗಿಕ ದೌರ್ಜನ್ಯವೆಸಗಿರುವ ತನ್ನದೇ ಪಕ್ಷದ ವ್ಯಕ್ತಿಯನ್ನು ರಕ್ಷಣೆ ಮಾಡುತ್ತಿದೆ.ಈಗಾಗಲೇ ಪ್ರಿಯಾಂಕ ಗಾಂಧಿಯವರು ಹಾಗೂ ನಾನು ಈ ಸಂತ್ರಸ್ತ ಹೆಣ್ಣು ಮಕ್ಕಳನ್ನು ಹೋಗಿ ಭೇಟಿ ಮಾಡಿ ಅವರ ಪರ ನಿಲ್ಲುವುದಾಗಿ ಘೋಷಣೆ ಮಾಡಿದ್ದೇವೆ. ಅವರಿಗೆ ನ್ಯಾಯ ಸಿಗುವವರೆಗೂ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುತ್ತದೆ ಎಂದರು.

ಮೈಷುಗರ್ ಸ್ಥಗಿತ
ಸಕ್ಕರೆ ಜಿಲ್ಲೆಯಾಗಿರುವ ಮಂಡ್ಯದಲ್ಲಿ ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಇತರೆ ಬೆಳೆಗಳಿಗೆ ಬೆಂಬಲ ಬೆಲೆಯನ್ನೂ ನೀಡುತ್ತಿಲ್ಲ. ಇದರಿಂದಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮೈಷುಗರ್ ಸರಿಯಾಗಿ ನಡೆಯದೆ ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿವೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ನಿಯಮಿತವಾಗಿ ಕಾರ್ಖಾನೆ ನಡೆಸುವುದರ ಜತೆಗೆ ರೈತರ ಬದುಕನ್ನು ಹಸನುಗೊಳಿಸಲು ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ
ರಾಜ್ಯ ಹಾಗೂ ಕೇಂದ್ರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಈ ಬಾರಿ ಕಾಂಗ್ರೆಸ್ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಎಐಸಿಸಿ ಮಹಿಳಾ ಘಟಕದ ಕಚೇರಿ ಕಾರ‍್ಯದರ್ಶಿ ಸೀಮಾ ಸಾದಿಕ್, ರಾಜ್ಯ ಉಪಾಧ್ಯಕ್ಷೆ ಶುಭದಾಯಿನಿ, ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ನಗರಸಭೆ ಮಾಜಿ ಅಧ್ಯಕ್ಷೆ ಹನ್ಸಿಯಾಬಾನು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ