ವರದಿ : ವಿ.ಎಸ್.ಪ್ರಭು
ಮೇ.7 ರ ಭಾನುವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಾಗಮಂಗಲ ಕ್ಷೇತ್ರಕ್ಕೆ ಆಗಮಿಸಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾಗಮಂಗಲ ಕ್ಷೇತ್ರದ ಶಾಸಕ, ಜೆಡಿಎಸ್ ಅಭ್ಯರ್ಥಿ ಸುರೇಶ್ಗೌಡ ತಿಳಿಸಿದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ವ್ಯಾಪ್ತಿಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬಳ್ಳೇಕೆರೆ, ಕೌಡ್ಲೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಬಳಿಕ ಅವರು ಮಾತನಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದ ಶಾಸಕನಾಗಿ ಮತ್ತೊಮ್ಮೆ ಗೆಲುವು ಸಾಧಿಸಲು ಕ್ಷೇತ್ರದ ಜನತೆ ಆಶೀರ್ವದಿಸಲಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ಹಮ್ಮಿಕೊಂಡಿರುವುದಾಗಿ ಹೇಳಿದರು.
ರೈತಸಂಘದ ದರ್ಶನ್ ಪುಟ್ಟಣ್ಣಯ್ಯರವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿರಬಹುದು. ಆದರೆ ನನ್ನ ಕ್ಷೇತ್ರದಲ್ಲಿ ಮೂಲ ರೈತ ಸಂಘಟನೆಯ ಕಾರ್ಯಕರ್ತರು ನನಗೆ ಬೆಂಬಲ ನೀಡುವ ನಿರ್ಧಾರ ಮಾಡಿದ್ದಾರೆಂದರು.
ರೈತರ ಪರವಾಗಿ ನಿಜವಾದ ಚಿಂತನೆ ಹಾಗೂ ಕಾರ್ಯಗತ ಮಾಡುವ ಪಕ್ಷ ಹಾಗೂ ರೈತರ ಸಾಲ ಮನ್ನಾ ಮಾಡಿದ ಪಕ್ಷ ಜೆಡಿಎಸ್ ಪಕ್ಷವಾಗಿದ್ದು, ಇದು ಪ್ರತಿಯೊಬ್ಬ ರೈತರಿಗೂ ಗೊತ್ತಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿ ರವರ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 1999 2004 ರವರೆಗೆ ಏನು ಅಭಿವೃದ್ಧಿ ಮಾಡಿದ್ದಾರೆಂದು ಚಲುವರಾಯಸ್ವಾಮಿ ತಿಳಿಸಲಿ, ಅವರು ಹೋದ ಕಡೆಯಲೆಲ್ಲ ಹೇಳುವ ಕೆಲವು ಕೆಲಸಗಳು ಆಗಿರುವುದು ಎಚ್. ಡಿ. ಕುಮಾರಸ್ವಾಮಿರವರು ಮುಖ್ಯಮಂತ್ರಿ ಯಾಗಿದ್ದಾಗ. ಆಗ ಅವರು ಸಚಿವರಾಗಿದ್ದರು ಮತ್ತು ಜೆಡಿಎಸ್ ಪಕ್ಷದಲ್ಲಿದ್ದರು ಎಂದು ಅವರು ನೆನಪು ಮಾಡಿಕೊಳ್ಳಲಿ ಎಂದರು.
ಇನ್ನೂ 50% ಅಭಿವೃದ್ಧಿ ಕೆಲಸಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಆಗಲು ಮತ್ತೊಂದು ಬಾರಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ವೇಳೆ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಿದರಕೋಟೆ ಕುಶ, ಗ್ರಾ.ಪಂ. ಮಾಜಿ ಸದಸ್ಯ ಸುಶೀಲ್, ಮುಖಂಡರಾದ ಕೃಷ್ಣೇಗೌಡ, ಇಂದುಕುಮಾರ್, ಪುಟ್ಟಸ್ವಾಮಿ, ಪ್ರದೀಪ್, ಗಂಗಾಧರ್ಗೌಡ, ಕರೀಗೌಡ, ಸೀನಪ್ಪ ಇತರರಿದ್ದರು.




