ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಪರವಾಗಿ ಪ್ರಚಾರ ನಡೆಸಲು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಮೇ.5ರಂದು ಮಂಡ್ಯನಗರಕ್ಕೆ ಆಗಮಿಸಲಿದ್ದಾರೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 11 ಗಂಟೆಗೆ ಕೆ.ಆರ್.ಪೇಟೆಯಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸುವ ಹೆಚ್.ಡಿ.ಕೆ., ಮಧ್ಯಾಹ್ನ 12 ಗಂಟೆಗೆ ಶ್ರೀರಂಗಪಟ್ಟಣ ವಿಧಾನಸಭೆ ವ್ಯಾಪ್ತಿಯ ತಗ್ಗಹಳ್ಳಿ ಗ್ರಾಮದಲ್ಲಿ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ಮಂಡ್ಯನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲು ಕಟ್ಟಡ) ಆವರಣದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಭಾಗವಹಿಸಿದರು. ನಂತರ ಮಧ್ಯಾಹ್ನ 3 ಗಂಟೆಗೆ ಮಳವಳ್ಳಿಯಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಭಾಗವಹಿಸುವರು ಎಂದರು.
ಮೇ 6 ರಂದು ಹೆಚ್.ಡಿ.ದೇವೇಗೌಡ
ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರ ಪರ ಪ್ರಚಾರ ನಡೆಸಲು ಮೇ.6ರಂದು ಹೆಚ್.ಡಿ.ದೇವೇಗೌಡ ಅವರು ಮಂಡ್ಯಕ್ಕೆ ಆಗಮಿಸಲಿದ್ದು, ಗುತ್ತಲು ಹಾಗೂ ಕೆರಗೋಡು ಭಾಗದಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಭಾಗವಹಿಸುವರು ಎಂದರು.
ಸಮೀಕ್ಷೆ ಆಧಾರದ ಮೇಲೆ ರಾಮಚಂದ್ರುಗೆ ಟಿಕೆಟ್
ಪಕ್ಷವು ನಡೆಸಿದ ಸಮೀಕ್ಷೆ ಆಧಾರದ ಮೇಲೆ ಮಂಡ್ಯ ಕ್ಷೇತ್ರ ಜೆಡಿಎಸ್ ಬಿ. ಫಾರಂ ಅನ್ನು ಬಿ.ಆರ್.ರಾಮಚಂದ್ರು ಅವರಿಗೆ ನೀಡಲಾಗಿದೆ. ನಮ್ಮ ಪಕ್ಷದ ಟಿಕೆಟ್ ಮಾರಾಟ ಮಾಡಿಕೊಳ್ಳುವ ಸ್ಥಿತಿಗೆ ನಾವು ತಲುಪಿತಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ರಾಮಚಂದ್ರು ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ. ಚುನಾವಣೆಯಲ್ಲಿ ಎಲ್ಲರಿಗೂ ಸ್ಪರ್ಧೆ ಮಾಡುವ ಹಕ್ಕಿದೆ. ಆದರೆ ನಮ್ಮ ಪಕ್ಷ ರಾಮಚಂದ್ರು ಅವರಿಗೆ ಟಿಕೆಟ್ ನೀಡಿದ್ದು, ಅವರ ಗೆಲುವಿಗಾಗಿ ನಾವು ಶ್ರಮಿಸುತ್ತೇವೆಂದರು.
ಗೋಷ್ಠಿಯಲ್ಲಿ ನಗರಸಭಾಧ್ಯಕ್ಷ ಹೆಚ್.ಎಸ್.ಮಂಜು, ಜೆಡಿಎಸ್ ಮಂಡ್ಯ ನಗರಾಧ್ಯಕ್ಷ ಗೌರೀಶ್, ಮುಖಂಡರಾದ ಮೋಹನ್, ಮಂಜುಳಾ ಉದಯಶಂಕರ್ ಹಾಗೂ ವತ್ಸಲಾ ಪ್ರಕಾಶ್ ಉಪಸ್ಥಿತರಿದ್ದರು.




