ನಾನು ಮೂರನೇ ಬಾರಿ ಮುಖ್ಯಮಂತ್ರಿ ಆಗಲು ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಿ ಎಂದು ಕೇಳುತ್ತಿಲ್ಲ.ಈ ರಾಜ್ಯದ ಬಡವರ,ರೈತರ ಕಣ್ಣೀರು ಒರೆಸಲು ಒಂದು ಬಾರಿ ಪೂರ್ಣಾಧಿಕಾರ ಕೊಡಿ, ರಾಜ್ಯದ ಎಲ್ಲಾ ಸಮುದಾಯದ ಜನರ ಹಿತ ಕಾಪಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಡ್ಯ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು(ಕಲ್ಲುಕಟ್ಟಡ) ಆವರಣದಲ್ಲಿ ಶುಕ್ರವಾರ ನಡೆದ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪಂಚರತ್ನ ಯೋಜನೆಗಳ ಅನುಷ್ಠಾನಕ್ಕೆ ಪೂರ್ಣಾವಧಿಯ ಅಧಿಕಾರ ಕೊಡಿ ಎಂದು ರಾಜ್ಯದ ಜನರ ಬಳಿ ಮನವಿ ಮಾಡಿದ್ದೇನೆ.ಜೆಡಿಎಸ್ ಬೆಂಬಲಿಸುವ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬವು ಯಾವುದೇ ಸಾಲವಿಲ್ಲದೆ ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸುತ್ತೇನೆ. ಒಮ್ಮೆ ನನ್ನನ್ನು ಪರೀಕ್ಷಿಸಿ ನೋಡಲು ಬಹುಮತ ನೀಡಿ.ಇಲ್ಲದಿದ್ದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುತ್ತೇನೆ. ಮತ್ತೆ ನಾನೆಂದೂ ಮತಕ್ಕಾಗಿ ಜನರ ಬಳಿಗೆ ಹೋಗುವುದಿಲ್ಲ ಎಂದರು.
ರಾಜ್ಯದ ಅಭಿವೃದ್ಧಿ
ರಾಜ್ಯದ ಹಾಗೂ ಜನರ ಅಭಿವೃದ್ಧಿಗಾಗಿ ಪಂಚರತ್ನ ಯೋಜನೆಯ ಅನುಷ್ಠಾನಕ್ಕೆ ಹೊರಟಿದ್ದೇನೆ.ಎಲ್ಲಾ ಸಮುದಾಯದ ಜನರಿಗಾಗಿ ಪಂಚರತ್ನ ಯೋಜನೆ ಜಾರಿಗೆ ಮುಂದಾಗಿದ್ದೇನೆ.ಬಡವರ,ರೈತರ ಮಕ್ಕಳಿಗೂ ಉತ್ತಮ ಶಿಕ್ಷಣವನ್ನು ಉಚಿತವಾಗಿ ನೀಡುತ್ತೇನೆ.ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಿ ಜನತಿಗೆ ಉಚಿತ ಆರೋಗ್ಯ ಸೇವೆ ನೀಡುತ್ತೇನೆ.25-30 ಲಕ್ಷ ಖರ್ಚಾಗುವ ಚಿಕಿತ್ಸೆಗೆ ಸರ್ಕಾರದ ವತಿಯಿಂದಲೇ ಹಣ ಕೊಡಿಸುತ್ತೇನೆ.ಭೂಮಿ ಇಲ್ಲದ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ಎರಡು ಸಾವಿರ ರೂ.ಕೊಡುತ್ತೇನೆ ಎಂದರು.
ಸಬ್ಸಿಡಿ ಸಾಲ
ಪದವಿ ಓದುವ ಹೆಣ್ಣು ಮಕ್ಕಳಿಗೆ ಎಲೆಕ್ಟ್ರಿಕ್ ಸ್ಕೂಟರ್, ಸ್ವಾಭಿಮಾನದ ಬದುಕಿಗಾಗಿ ಯುವಜನರು ಆರಂಭಿಸುವ ಉದ್ದಿಮೆಗಳಿಗೆ ಶೇ.90ರಷ್ಟು ಸಾಲ-ಸಬ್ಸಿಡಿ,ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಹಣ್ಣು, ಹೂವು,ತರಕಾರಿ ವ್ಯಾಪಾರ ಮಾಡಲು ಸಬ್ಸಿಡಿ ಸಾಲ ನೀಡಲಾಗುವುದು.65 ವರ್ಷ ವಯಸ್ಸಾದ
ಹಿರಿಯ ನಾಗರಿಕರಿಗೆ ಮಾಸಿಕ 5೦೦೦ರೂ., ವಿಧವೆಯರು, ಪರಿತ್ಯಕ್ತರು, ಅವಿವಾಹಿತ ಹೆಣ್ಣು ಮಕ್ಕಳಿಗೆ ಮಾಸಿಕ 2500ರೂ.,ನಗರ,ಗ್ರಾಮೀಣ ಭಾಗದಲ್ಲಿ ಸೂರಿಲ್ಲದ ಕುಟುಂಬಕ್ಕೆ 5 ಲಕ್ಷ ವೆಚ್ಚದ ವಸತಿ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ, ಇದನ್ನು ನನಸು ಮಾಡಲು 2.50 ಲಕ್ಷ ಕೋಟಿ ರೂ. ಬೇಕು. ಇದನ್ನು ಕಾಂಗ್ರೆಸ್, ಬಿಜೆಪಿ ಜತೆಗೂಡಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜೆಡಿಎಸ್ಗೆ ಸಂಪೂರ್ಣ ಬಹುಮತ ಕೊಡಿ ಎಂದು ಕೋರಿದರು.

ಏಕಾಂಗಿ ಹೋರಾಟ
ಬಿಜೆಪಿ ಪರ ಪ್ರಧಾನ ಮಂತ್ರಿ, ಕೇಂದ್ರದ ಗೃಹ ಸಚಿವ, ರಕ್ಷಣಾ ಸಚಿವ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್,ಕಾಂಗ್ರೆಸ್ ಪರ ರಾಹುಲ್ಗಾಂಧಿ, ಪ್ರಿಯಾಕಾ ಗಾಂಧಿ,ರಾಜಸ್ಥಾನ ಸಿಎಂ ಅಶೋಕ್ ಗೆಹಲೋಟ್ ಸೇರಿದಂತೆ ಅನೇಕ ನಾಯಕರು ಬಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿಗಳ ಪರ ನಾನು ಏಕಾಂಗಿಯಾಗಿ ಪ್ರಚಾರ ನಡೆಸುತ್ತಿದ್ದೇನೆ.
ಮಂಡ್ಯದಲ್ಲಿ ಅತಿ ಹೆಚ್ಚು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಾಗ ಈ ದೇಶದ ಪ್ರಧಾನ ಮಂತ್ರಿ ಬರಲಿಲ್ಲ. ಮಂಡ್ಯ ಜಿಲ್ಲೆಯ ರೈತನೊಬ್ಬ ಕಬ್ಬಿನ ಗದ್ದೆಗೆ ಬೆಂಕಿ ಹಾಕಿ, ಅದರೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಾಗ ಪ್ರಧಾನಿ ಮೋದಿ,ಅಮಿತ್ ಷಾ,ಯೋಗಿ ಆದಿತ್ಯನಾಥ್ ಬರಲಿಲ್ಲ.ಇವರ್ಯಾರಿಗೂ ರೈತರ ಸಂಕಟ ತಿಳಿಯಲಿಲ್ಲವೇ? ಆಗ ರೈತರ ನೆರವಿಗೆ ಬಂದಿದ್ದು ಎಚ್.ಡಿ.ದೇವೇಗೌಡರು ಮಾತ್ರ ಎಂದರು.
ಯಾವ ಮುಖ ಹೊತ್ತು ಜನರ ಬಳಿಗೆ ಬರುತ್ತಿದ್ದಾರೆ
ಜೆಡಿಎಸ್-ಕಾಂಗ್ರೆಸ್ ಸರಕಾರದಲ್ಲಿ ಮಂಡ್ಯ ಜಿಲ್ಲೆಗೆ ಕೊಟ್ಟ ಅನುದಾನವನ್ನು ಬಿಜೆಪಿಯವರು ಲೇವಡಿ ಮಾಡಿ ಸದನದಲ್ಲಿ ಮಂಡ್ಯ ಬಜೆಟ್ ಎಂದು ವ್ಯಂಗ್ಯವಾಡಿದರು. ಮಂಡ್ಯದ ಅಭಿವೃದ್ಧಿಗೆ ನೀಡಿದ್ದ ಹಣ ವರ್ಗಾವಣೆ ಮಾಡಿ ಅಡ್ಡಿ ಪಡಿಸಿದರು. ಈಗ ಯಾವ ಮುಖ ಹೊತ್ತುಕೊಂಡು ಮಂಡ್ಯ ಜನರ ಬಳಿಗೆ ಮತ ಕೇಳಲು ಬರುತ್ತಿದ್ದಾರೆ. ಏನು ಕೊಡುಗೆ ಕೊಟ್ಟಿದ್ದಾರೆಂದು ಬಂದು ಮತ ಕೇಳುತ್ತಿದ್ದಾರೆ ಎಂದು ಬಿಜೆಪಿ ನಾಯಕರ ಬಗ್ಗೆ ಟೀಕಿಸಿದರು.
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಸಿಲಿಂಡರ್ ಕೊಡುವ ಭರವಸೆ ನೀಡಿದ ಮೇಲೆ ಬಿಜೆಪಿ ಮೂರು ಸಿಲಿಂಡರ್ ನೀಡುವುದಾಗಿ ಹೇಳಿದೆ. ಈ ಕೆಲಸವನ್ನು ಅಧಿಕಾರದಲ್ಲಿದ್ದಾಗ ಬಿಜೆಪಿ ಏಕೆ ಮಾಡಲಿಲ್ಲ.
ನಾನು 123 ಸ್ಥಾನಗಳ ಗುರಿಯಿಟ್ಟುಕೊಂಡು ಜನರ ಮುಂದೆ ನಿಂತಿದ್ದೇನೆ. ಈ ಬಾರಿ ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ 5 ವರ್ಷ ಪೂರ್ಣ ಅಧಿಕಾರ ಸಿಗಲಿದೆ.ಮಂಡ್ಯ ಜಿಲ್ಲೆಯ ಜನರು ಕೊಟ್ಟ ಬೆಂಬಲವನ್ನು ನನ್ನ ಕೊನೆ ಉಸಿರಿರುವವರೆಗೂ,ನನ್ನ ದೇಹ ಮಣ್ಣಿಗೆ ಹೋಗುವವರೆಗೂ ಮರೆಯುವುದಿಲ್ಲ. ಎರೆಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾಗಿದ್ದೇನೆ. ಕಳೆದ ಬಾರಿಯಂತೆ ಈ ಬಾರಿಯೂ ಏಳಕ್ಕೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ.ಮಂಡ್ಯ ಕ್ಷೇತ್ರದಲ್ಲಿ ರಾಮಚಂದ್ರ ಅಭ್ಯರ್ಥಿಯಲ್ಲ.ಕುಮಾರಸ್ವಾಮಿ ಅಭ್ಯರ್ಥಿ ಎಂದು ಭಾವಿಸಿ ರಾಮಚಂದ್ರು ಅವರನ್ನು ಭಾರೀ ಬಹುಮತದಿಂದ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಶಾಸಕ ಸಿ.ಎಸ್.ಪುಟ್ಟರಾಜು, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಅಭ್ಯರ್ಥಿ ಬಿ.ಆರ್.ರಾಮಚಂದ್ರು, ಪತ್ನಿ ಕಲ್ಪನಾ, ಸಹೋದರ ಬಿ.ಆರ್.ಸುರೇಶ್,ಮುಖಂಡರಾದ ಗೌರೀಶ್,ಹೇಮಂತ್,ನಗರಸಭಾ ಸದಸ್ಯ ನಾಗೇಶ್, ಗುತ್ತಿಗೆದಾರ ನಟರಾಜ್ ಮತ್ತಿತರರು ಭಾಗವಹಿಸಿದ್ದರು.




