Tuesday, November 24, 2026

ಪ್ರಾಯೋಗಿಕ ಆವೃತ್ತಿ

ಛಿದ್ರವಾದ ಜೆಡಿಎಸ್ ಭದ್ರಕೋಟೆ :ಕಾಂಗ್ರೆಸ್ ಬೆನ್ನಿಗೆ ನಿಂತ ಒಕ್ಕಲಿಗರು


ಮಂಡ್ಯ ಜಿಲ್ಲೆ ಹಾಸನಕ್ಕಿಂತ ಹೆಚ್ಚು ಜೆಡಿಎಸ್ ಪಕ್ಷಕ್ಕೆ ಭದ್ರಕೋಟೆಯಾಗಿತ್ತು.ಹಾಸನ ಮತ್ತು ಮಂಡ್ಯ ನಮಗೆ ಎರಡು ಕಣ್ಣುಗಳಿದ್ದಂತೆ ಎಂದು ಹೇಳುತ್ತಿದ್ದ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಹೇಳಿಕೆ ಕೇವಲ ಬಾಯಿ ಮಾತಾಗಿತ್ತು.ಹಾಸನದ ಅಭಿವೃದ್ಧಿ ನೋಡಿದರೆ ಮಂಡ್ಯ ಸಾಕಷ್ಟು ಹಿಂದಿದೆ ಎಂಬುದು ಒಕ್ಕಲಿಗ ಸಮುದಾಯಕ್ಕೆ ನಿಧಾನವಾಗಿಯಾದರೂ ಅರಿವಿಗೆ ಬಂದಿದೆ.ಕೇವಲ ರಾಜಕೀಯಕ್ಕಾಗಿ ಮಂಡ್ಯ ಹೆಸರು ಬಳಸಿಕೊಳ್ಳುತ್ತಿದ್ದ ದೇವೇಗೌಡ ಹಾಗೂ ಕುಮಾರಸ್ವಾಮಿ ಮಾತಿಗೆ ಮಂಡ್ಯದ ಮತದಾರರು ಕ್ಯಾರೇ ಎನ್ನದೆ ಕಾಂಗ್ರೆಸ್ ನತ್ತ ಮುಖ ಮಾಡಿರುವುದು ಫಲಿತಾಂಶಗಳಿಂದ ಸಾಬೀತಾಗಿದೆ.

ಉರೀಗೌಡ-ನಂಜೇಗೌಡ
ಬಿಜೆಪಿ, ಸಂಘಪರಿವಾರ ಟಿಪ್ಪು ಕೊಂದದ್ದು ಒಕ್ಕಲಿಗ ಸಮುದಾಯದ ಉರೀಗೌಡ ಮತ್ತು ನಂಜೇಗೌಡ ಎಂಬ ಸುಳ್ಳನ್ನು ನೂರಾರು ಬಾರಿ ಹೇಳಿ ಬಿಜೆಪಿ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಹೊರಟಿತು.ಅದಕ್ಕಾಗಿ ಒಕ್ಕಲಿಗ ಸಮುದಾಯದ ಸಿ.ಟಿ.ರವಿ ಹಾಗೂ ಅಶ್ವಥ್ ನಾರಾಯಣ್ ಅವರನ್ನು ಮುಂದಕ್ಕೆ ಬಿಟ್ಟಿತು.ಜಿಲ್ಲೆಯಲ್ಲಿ ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯದ ಅನ್ಯೋನ್ಯತೆಗೆ ಬೆಂಕಿ ಹಚ್ಚಿ ಬಿಜೆಪಿ ಕಡೆಗೆ ಒಕ್ಕಲಿಗ ಮತ ಸೆಳೆಯುವ ಸಂಚು ಇದರ ಹಿಂದಿತ್ತು.

ಈ ಬಗ್ಗೆ ಸಿನಿಮಾ ಮಾಡಲು ಬಿಜೆಪಿ ಸಚಿವ ಮುನಿರತ್ನ ಮುಂದಾದಾಗ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಧ್ಯೆ ಪ್ರವೇಶಿಸಿ ಇತಿಹಾಸದಲ್ಲಿ ಇರದ ವ್ಯಕ್ತಿಗಳನ್ನು ವೋಟ್ ಬ್ಯಾಂಕ್ ಗಾಗಿ ಸೃಷ್ಟಿ ಮಾಡಿ ಒಕ್ಕಲಿಗ ಮತ್ತು ಮುಸ್ಲಿಮರ ನಡುವೆ ದ್ವೇಷ ಹುಟ್ಟು ಹಾಕಬೇಡಿ ಎಂದು ಹೇಳಿದರು.
ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ಈ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡಲೇ ಇಲ್ಲ.ಹಾಗೇ ಮಾತನಾಡುವುದು ಹಿಂದುತ್ವದ ವಿರುದ್ಧ,ಇದರಿಂದ ಒಕ್ಕಲಿಗ ಸಮುದಾಯ ಸಿಟ್ಟಿಗೇಳಬಹುದು ಎಂಬ ಉದ್ದೇಶದಿಂದ ಕುಮಾರಸ್ವಾಮಿ ದೊಡ್ಡ ದನಿಯಲ್ಲಿ ಉರೀಗೌಡ-ನಂಜೇಗೌಡರ ಬಗ್ಗೆ ದನಿಯೇತ್ತಲೇ ಇಲ್ಲ.ಈ ಭಾಗದ ಒಕ್ಕಲಿಗ ಸಮುದಾಯಕ್ಕೆ ಭೂಮಿ ನೀಡಿದ ಟಿಪ್ಪು ವಿರುದ್ಧ ಉರೀಗೌಡ-ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳ ಪಾತ್ರ ಸೃಷ್ಟಿಸಿದ ಬಿಜೆಪಿ ವಿರುದ್ಧ ದೇವೇಗೌಡ ಹಾಗೂ ಕುಮಾರಸ್ವಾಮಿ ಮಾತನಾಡದೆ ಇದ್ದದ್ದು ಒಕ್ಕಲಿಗ ಸಮುದಾಯದ ಅಸಮಾಧಾನಕ್ಕೆ ಕಾರಣವಾಯಿತು.ಅಲ್ಲದೆ ಮುಸಲ್ಮಾನ ಸಮುದಾಯ ಜೆಡಿಎಸ್ ಕಡೆ ತಿರುಗಿ ನೋಡದಂತೆ ಮಾಡಿತು.

ಕುಸಿದ ಮತ ಬ್ಯಾಂಕ್
ಜೆಡಿಎಸ್ ವರಿಷ್ಠ ರಾದ ದೇವೆಗೌಡ ಹಾಗೂ ಕುಮಾರಸ್ವಾಮಿ ಮಾತು ಮಂಡ್ಯದ ಒಕ್ಕಲಿಗ ಸಮುದಾಯದ ಮತದಾರರಿಗೆ ವೇದವಾಕ್ಯವಾಗಿತ್ತು.ಜೆಡಿಎಸ್ ಪಕ್ಷದಿಂದ ಯಾರೇ ನಿಂತರೂ ಗೆಲುವು ಸಾಧ್ಯ ಎಂಬ ಮನಸ್ಥಿತಿ ಜಿಲ್ಲೆಯಲ್ಲಿತ್ತು.ಜಿಲ್ಲೆಗೆ ಅಂತಹ ಹೇಳಿ ಕೊಳ್ಳುವಂತ ಅಭಿವೃದ್ಧಿ ಕಾರ್ಯ ಮಾಡದಿದ್ದರೂ ಕೂಡ ಒಕ್ಕಲಿಗ ಸಮುದಾಯ ಜೆಡಿಎಸ್ ಜೊತೆಗೆ ಇತ್ತು.ಇದಕ್ಕೆ ಕಳೆದ ಬಾರಿ ಎಲ್ಲಾ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ದೊಡ್ಡ ಅಂತರದಲ್ಲೇ ಆರಿಸಿ ಬಂದಿದ್ದರು.

ಆದರೆ ಗೆದ್ದು ಸಿಎಂ ಆದ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಎಂಟು ಸಾವಿರ ಕೋಟಿ ಬಜೆಟ್ ನಲ್ಲಿ ನೀಡಿದ್ದೇನೆ ಎಂದು ಹೇಳಿದ್ದಷ್ಟೇ ಭಾಗ್ಯ.ನಯಾ ಪೈಸೆ ಕೂಡ ಬರಲಿಲ್ಲ.ಅದಾದ ನಂತರ ಲೋಕಸಭಾ ಚುನಾವಣೆ ಬಂತು. ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕರ ಸಿಟ್ಟಿಗೆ ನಿಖಿಲ್ ಕುಮಾರಸ್ವಾಮಿ ಬಲಿಯಾದರು.

ಎರಡು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸೋತು ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದ ನಂತರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬೇರುಗಳು ಸಡಿಲಗೊಳ್ಳಲಾರಂಭಿಸಿದವು. ಜಿಲ್ಲಾ ನಾಯಕರಾಗಿ ಉದಯಿಸಿದ ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ಅವರು ಜೋಡೆತ್ತುಗಳಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದರು.ಅದಕ್ಕೆ ಸಾಕ್ಷಿಯಾಗಿ ಈ ಬಾರಿ ಕೆ.ಆರ್.ಪೇಟೆ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳನ್ನು ಜೆಡಿಎಸ್ ಕಳೆದುಕೊಂಡಿದೆ.

ಹೆಚ್.ಡಿ.ಕುಮಾರಸ್ವಾಮಿ ಅವರು ತೆಗೆದುಕೊಂಡ ಕೆಲವು ತಪ್ಪು ನಿರ್ಣಯಗಳು, ಟಿಕೆಟ್ ಹಂಚಿಕೆಯಲ್ಲಿನ ಸಮಸ್ಯೆಗಳು ಎಲ್ಲಾ ಸೇರಿ ಜೆಡಿಎಸ್ ತನ್ನ ಭದ್ರಕೋಟೆಯನ್ನು ತಾನೇ ಕೈಯಾರೇ ಕಳೆದುಕೊಂಡಿದೆ ಎಂದರೆ ತಪ್ಪಾಗಲಾರದು.

ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಒಕ್ಕಲಿಗ ಪಾಳೇಪಟ್ಟು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಕಡೆ ಸರಿದಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.ಮುಂದೆಯೂ ಹೀಗೆ ಎಡಬಿಡಂಗಿ ನಿಲುವು ತಾಳಿದರೆ ಜಿಲ್ಲೆಯಲ್ಲಿ ಜೆಡಿಎಸ್ ನೇಪಥ್ಯಕ್ಕೆ ಸರಿಯಲಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ