Friday, November 20, 2026

ಪ್ರಾಯೋಗಿಕ ಆವೃತ್ತಿ

ಇದ್ರಿಶ್ ಪಾಷಾ ಕೊಲೆ ಪ್ರಕರಣ : ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ದ ಮರು ತನಿಖೆಗೆ ಆಗ್ರಹ

ಕನಕಪುರ ತಾಲ್ಲೂಕಿನ ಸಾತನೂರಿನ ಬಳಿ ಕೊಲೆಯಾದ ಜಾನುವಾರು ಸಾಗಿಸುವ ಲಾರಿ ಚಾಲಕ ಇದ್ರೀಸ್ ಪಾಷಾ ಹತ್ಯೆ ಆರೋಪಿಗಳಾದ ಪುನೀತ್ ಕೆರೆಹಳ್ಳಿ ಮತ್ತಾತನ ನಟೋರಿಯಸ್ ಗ್ಯಾಂಗ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದು ಆಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿರುವ ಸಿಪಿಐಎಂ ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಕೂಡಲೇ ಕಾಂಗ್ರೆಸ್ ಸರಕಾರ ಇದ್ರಿಸ್ ಪಾಷಾ ಹತ್ಯೆ ಪ್ರಕರಣದ ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಬಿಜೆಪಿ ಸರಕಾರದ ನಿರ್ದೇಶನದಂತೆ ಪೊಲೀಸರು ದುರ್ಬಲ ತನಿಖಾ ವರದಿ ಸಲ್ಲಿಸಿರುವ ಕಾರಣದಿಂದಲೇ ಇಷ್ಟು ಬೇಗ ಜಾಮೀನು ದೊರಕಿದೆ. ಆದರೆ ಕಾಂಗ್ರೆಸ್ ಸರ್ಕಾರ ಇಷ್ಟಕ್ಕೆ ಬಿಡಬಾರದು, ಆತನ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ  ಮಂಡ್ಯದ ಗುತ್ತಲು ನಿವಾಸಿ ಇದ್ರಿಶ್ ಪಾಷಾ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಜೀವಾವಧಿ, ಮರಣ ದಂಡನೆಯಂತಹ ಶಿಕ್ಷೆ ವಿಧಿಸಲ್ಪಡುವ ಕೊಲೆಯಂತಹ ಗಂಭೀರ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯ ಅವಧಿಗೆ (90 ದಿನ) ಮೊದಲು ಆರೋಪಿಗಳಿಗೆ ಜಾಮೀನು ದೊರಕಲು ಸಾಧ್ಯವೇ ಇಲ್ಲ. ಇದ್ರಿಸ್ ಪಾಷಾ ಕೊಲೆ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಗ್ಯಾಂಗ್‌ಗೆ 50 ದಿನದಲ್ಲೇ ಜಾಮೀನು ದೊರಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಅಚ್ಚರಿ ಮಾತ್ರ ಅಲ್ಲ, ಆಘಾತಕಾರಿಯಾದದ್ದು. ಪ್ರಕರಣದ ಪೊಲೀಸ್ ತನಿಖಾಧಿಕಾರಿ, ಸರಕಾರಿ ಅಭಿಯೋಜಕರ ಕರ್ತವ್ಯ ನಿರ್ವಹಣೆಯ ಕುರಿತು ಗಂಭೀರ ಅನುಮಾನಗಳು, ಪ್ರಶ್ನೆಗಳು ಎದ್ದಿವೆ. ಇದ್ರಿಸ್ ಪಾಷಾ ಕೊಲೆ ಪ್ರಕರಣ ಮಾತ್ರ ಅಲ್ಲ, ಬಂಧನ, ತನಿಖೆ, ಜಾಮೀನು ದೊರಕುವಿಕೆಯ ಅಂಶಗಳ ಕುರಿತೂ ತನಿಖೆ ನಡೆಯಬೇಕಿದೆ. ಹೊಸ ಸರಕಾರ ಈ ಕುರಿತು ದಕ್ಷ ಅಧಿಕಾರಿಯ ನೇತೃತ್ವದಲ್ಲಿ ಮರು ತನಿಖೆಗೆ ಆದೇಶ ಹೊರಡಿಸಬೇಕಿದೆ. ಇಂತಹ ಮಾದರಿಗಳು ಮರುಕಳಿಸಬಾರದು‌. ಕೊಲೆಗಡುಕರು, ಅವರ ರಕ್ಷಕರು ಜೈಲು ಸೇರಬೇಕು ಎಂದು‌ ಒತ್ತಾಯಿಸಿದ್ದಾರೆ.

ಗೋರಕ್ಷಣೆಯ ಹೆಸರಿನ ಗೂಂಡಾಗಳಿಂದ ಹತ್ಯೆಯಾದ ಇದ್ರಿಶ್ ಪಾಷಾ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸಿಪಿಐಎಂ ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ. ಈ ಹಿಂದಿನ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ವಿರೋಧಿಯಾಗಿತ್ತು, ಹಾಗಾಗಿ ಕನಿಷ್ಠ ಇದ್ರಿಶ್ ಕುಟುಂಬಕ್ಕೆ ಒಂದು ಸಾಂತ್ವನ ಹೇಳುವ ಕೆಲಸವನ್ನೂ ಆ ಸರ್ಕಾರ ಮಾಡಲಿಲ್ಲ. ಅದಕ್ಕೆ ರಾಜ್ಯದ ಜನತೆ ಪಾಠವನ್ನು ಕಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈಗಿನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ರಿಶ್ ಕುಟುಂಬದವರನ್ನು ಬೇಟಿ ಮಾಡಬೇಕು, ಅವರಿಗೆ ಸಾಂತ್ವನ ಹೇಳಬೇಕು. ಇದ್ರಿಶ್ ಪಾಷಾನ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು ಮತ್ತು ಪ್ರವೀಣ್ ನೆಟ್ಟಾರನ ಹೆಂಡತಿಗೆ ಸರ್ಕಾರಿ ಕೆಲಸ ಕೊಡುವ ಮಾದರಿಯಲ್ಲೇ ಇದ್ರಿಶ್ ಪಾಷಾನ ಹೆಂಡತಿಗೂ ಸರ್ಕಾರಿ ಕೆಲಸ ನೀಡಬೇಕೆಂದು ಒತ್ತಾಯಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ