Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ನಗರದ ಅಭಿವೃದ್ಧಿಗೆ ಕೈ ಜೋಡಿಸಿ : ಶಾಸಕ ಗಣಿಗ ರವಿಕುಮಾರ್

ಮಂಡ್ಯ ನಗರ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದು, ನಗರದ ಅಭಿವೃದ್ಧಿಗೆ ಎಲ್ಲರೂ ನನ್ನೊಂದಿಗೆ ಕೈ ಜೋಡಿಸಬೇಕೆಂದು ಶಾಸಕ ಗಣಿಗ ರವಿಕುಮಾರ್ ಮನವಿ ಮಾಡಿದರು.

ಮಂಡ್ಯ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ನಗರ ಅಭಿವೃದ್ಧಿಯಲ್ಲಿ 50 ವರ್ಷ ಹಿಂದುಳಿದಿದೆ. ನಗರ ಪ್ರದೇಶದಲ್ಲಿರುವ ಜನರಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸುವ ಮೂಲಕ ಅಭಿವೃದ್ಧಿ ಮಾಡಬಹುದು. ನೀವು ಬಡವರ, ಜನಸಾಮಾನ್ಯರ ಸೇವೆ ಮಾಡಿದರೆ, ನಾನು ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ. ನನ್ನ ಹತ್ತಿರ ಜನರು ಬರುವುದನ್ನು ಕಡಿಮೆಯಾಗ ಬೇಕಾದರೆ, ನೀವು ಅವರ ಕೆಲಸಗಳನ್ನು ಮಾಡಿಕೊಡಬೇಕು. ನೀವು ಜನರ ಕೆಲಸ ಮಾಡಿದರೆ ಮಂಡ್ಯ ಅಭಿವೃದ್ಧಿಯಲ್ಲಿ ಬದಲಾವಣೆ ಮಾಡಬಹುದು. ಇದಕ್ಕೆ ನೀವೆಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ನಗರದ ಜನತೆ ನನ್ನ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡು ಆಯ್ಕೆ ಮಾಡಿದ್ದಾರೆ. ಅವರ ಆಶಯಗಳನ್ನು ಪೂರ್ಣಗೊಳಿಸಲು ನನ್ನ ಜೊತೆ ನೀವೆಲ್ಲರೂ ಕೈಜೋಡಿಸಬೇಕು. ನಾನು ಯಾವುದೇ ಅಕ್ರಮ ಮಾಡಿ ಎನ್ನುವುದಿಲ್ಲ, ಅಭಿವೃದ್ಧಿ ಕಾರ್ಯಗಳಿಗಾಗಿ ನನ್ನನ್ನು ದಿನದ 24 ಗಂಟೆಯೂ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು ಎಂದರು.

ಮೂಲಭೂತ ಸೌಕರ್ಯ ನೀಡಿ
ಮಂಡ್ಯ ನಗರದ ಕೆರೆಯಂಗಳದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ಒಳಚರಂಡಿ, ಬೀದಿ ದೀಪ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲದಿರುವ ಬಗ್ಗೆ ಶಾಸಕ ರವಿಕುಮಾರ್ ಪ್ರಶ್ನೆ ಮಾಡಿದರು‌.
ಇದಕ್ಕೆ ಗೃಹ ಮಂಡಳಿಯ ಎಇ ಆಯಿಷಾ ಪ್ರತಿಕ್ರಿಯೆ ನೀಡಿ, ಮಂಡ್ಯ ಕೆರೆಯಂಗಳ, ಸ್ವರ್ಣಸಂದ್ರ, ಹೊಸಹಳ್ಳಿಯಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಮನೆಗಳಿದ್ದು ಸ್ವರ್ಣಸಂದ್ರ, ಹೊಸಹಳ್ಳಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಚಿಕ್ಕ ಮಂಡ್ಯದ ಕೆರೆಯಂಗಳದಲ್ಲಿ ಗೃಹ ಮಂಡಳಿ ನಿರ್ಮಿಸಿರುವ ಮನೆಗಳಿಗೆ ಒಳಚರಂಡಿ,ಕುಡಿಯುವ ನೀರಿನ ಸಂಪರ್ಕ, ಬೀದಿ ದೀಪ ಟ್ರಾನ್ಸ್ಫಾರ್ಮರ್ ಎಲ್ಲವನ್ನು ಮಾಡಲಾಗಿದ್ದು,ನಗರಸಭೆಯಗೆ ಹಸ್ತಾಂತರ ಮಾಡಲಾಗಿದೆ. ಹಲವು ಬಾರಿ ಟ್ರಾನ್ಸ್‌ಫಾರ್ಮರ್ ಮತ್ತು ವಿದ್ಯುತ್ ವೈರ್ ಗಳನ್ನು ಕಳವು ಮಾಡಿದ್ದಾರೆ ಎಂದರು.

ಇದಕ್ಕೆ ಗಣಿಗ ರವಿಕುಮಾರ್, ನೀವು ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಿದರೆ ಜನರು ಗೃಹ ಮಂಡಳಿ ನಿವೇಶನವನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ನೀವು ಆ ರೀತಿ ಮಾಡಿಲ್ಲದ ಕಾರಣ ಹಲವು ಮನೆಗಳು ಮಾರಾಟವಾಗಿಲ್ಲ. ಉದ್ಯಾನವನ, ಬೀದಿ ದೀಪ, ಒಳಚರಂಡಿ ಎಲ್ಲವನ್ನು ನೀಡಿದರೆ ಜನರೇ ಮುಂದೆ ಬಂದು ನಿವೇಶನ ಖರೀದಿಸುತ್ತಾರೆ ಎಂದರು.

ಹಕ್ಕುಪತ್ರ ವಿತರಿಸಿ
ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 24 ಸ್ಲಂಗಳಿದ್ದು, ಇದರಲ್ಲಿ ಸರ್ಕಾರಿ ಜಾಗದಲ್ಲಿರುವ ಸ್ಲಂ ಗಳಿಗೆ ಕೂಡಲೇ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗಣಿಗ ರವಿಕುಮಾರ್ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ನಗರಸಭೆ ವ್ಯಾಪ್ತಿಯಲ್ಲಿ ಎಷ್ಟು ಸ್ಲಂಗಳು ಸರ್ಕಾರಿ ಪ್ರದೇಶದಲ್ಲಿವೆ. ಎಂಬ ಬಗ್ಗೆ ಪಟ್ಟಿ ಮಾಡಿ ನಾನು ಕೂಡ ಸ್ಲಂ ಗಳಿಗೆ ಭೇಟಿ ನೀಡುತ್ತೇನೆ. ಆದಷ್ಟು ಬೇಗ ಅವರಿಗೆ ಹಕ್ಕುಪತ್ರ ಕೊಡುವ ಕೆಲಸ ಮಾಡೋಣ ಎಂದರು.

ಇದಕ್ಕೆ ಸ್ಲಂ ಬೋರ್ಡ್ ಜೆಇ ನಾಗೇಂದ್ರ ಉತ್ತರಿಸಿ, ಮಂಡ್ಯ ನಗರ ವ್ಯಾಪ್ತಿಯಲ್ಲಿ ನಾಲ್ಕು ಸ್ಲಂಗಳು ಸರ್ಕಾರಿ ಜಾಗದಲ್ಲಿದ್ದು,ಗಾಡಿ ಕಾರ್ಖಾನೆ ಮತ್ತು ಶ್ರಮಿಕ ನಗರ ನಿವಾಸಿಗಳಿಗೆ ನಾಲ್ ಬಂದವಾಡಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಸರ್ಕಾರಿ ಜಾಗದಲ್ಲಿರುವ ಉಳಿಕೆ ಸ್ಲಂಗಳಲ್ಲೂ ಹಕ್ಕುಪತ್ರ ನೀಡಲು ಪಟ್ಟಿ ತಯಾರಿಸುತ್ತೇವೆ ಎಂದರು.

ಹಾಲಹಳ್ಳಿ ಸ್ಲಂನಲ್ಲಿ ಮೀಟರ್ ಕಿತ್ತು ಹಾಕಿದ ಬಗ್ಗೆ ಪ್ರಸ್ತಾಪಿಸಿದ ಶಾಸಕರು, ಇನ್ನು 15 ದಿನಗಳಲ್ಲಿ ಎಲ್ಲರೂ ಮೀಟರ್ ಹಾಕಿಸಿಕೊಳ್ಳುವಂತೆ ನಾಳೆ ಕರಪತ್ರದ ಮೂಲಕ ಸೂಚನೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಯಾವುದೇ ಕಾರಣಕ್ಕೂ ಇನ್ನು 15 ದಿನ ಮೀಟರ್ ಹಾಕಿಸಿಕೊಳ್ಳುವವರ ಮನೆಯ ಸಂಪರ್ಕ ಕಡಿತಗೊಳಿಸಿದಂತೆ ಚೆಸ್ಕಾಂ ಮಹದೇವ್ ಅವರಿಗೆ ಸೂಚನೆ ನೀಡಿದರು.

ವಿದ್ಯುತ್ ಕಂಬ ತೆರವುಗೊಳಿಸಿ
ಮಂಡ್ಯ ನಗರದ ಹಲವೆಡೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗಿರುವ ವಿದ್ಯುತ್ ಕಂಬಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಶಾಸಕ ರವಿಕುಮಾರ್ ಚೆಸ್ಕಾಂ ಏಇಇ ಮಹದೇವ್ ಅವರಿಗೆ ಸೂಚಿಸಿದರು.ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬಗಳು ಇರುವ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ.ಕೂಡಲೇ ರಸ್ತೆ ಮಧ್ಯೆ ಇರುವ, ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುವ ಎಲ್ಲಾ ಕಂಬಗಳನ್ನು ತೆರವುಗೊಳಿಸಿ, ಬಿರುಕು ಬಿಟ್ಟಿರುವ ಕಂಬಗಳನ್ನು ಬದಲಾಯಿಸಿ ಹೊಸ ಕಂಬಗಳನ್ನು ಹಾಕಬೇಕು ಎಂದು ಸೂಚನೆ ನೀಡಿದರು

ನೀರಿನ ಬಿಲ್ ಕಡಿಮೆ ಮಾಡಿ
ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಂಡ್ಯ ನಗರ ವ್ಯಾಪ್ತಿಯಲ್ಲಿ ನೀರಿನ ಬಿಲ್ ಕಡಿಮೆ ಮಾಡಬೇಕು ಎಂದು ಶಾಸಕ ರವಿಕುಮಾರ್ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಇಇ ಮೇಘನಾ, ಈ ಹಿಂದೆ ಪ್ರತಿ ತಿಂಗಳಿಗೆ ನೀರಿನ ದರ 120 ರೂ‌.ಇತ್ತು.ಈಗ ಅದನ್ನು 282 ರೂ. ಮಾಡಲಾಗಿದೆ. ಇದಕ್ಕೆ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ,ತಿಂಗಳಿಗೆ 220 ರೂ. ನಿಗದಿ ಮಾಡಿ ಇಲಾಖೆಯ ಅಧೀನ ಕಾರ್ಯದರ್ಶಿಯವರಿಗೆ ಕಳುಹಿಸಲಾಗಿದೆ.ಸರ್ಕಾರ ಅನುಮತಿ ನೀಡಿದರೆ ನೀರಿನ ಬಿಲ್ ಕಡಿಮೆಯಾಗಲಿದೆ ಎಂದರು.
ಮಂಡ್ಯ ನಗರದ ಉದ್ಯಾನವನಗಳು ಸೇರಿದಂತೆ ಪ್ರಮುಖ ರಸ್ತೆಯಲ್ಲಿರುವ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಹಳೆಯ ಮರಗಳನ್ನು ತೆರವುಗೊಳಿಸಬೇಕೆಂದು ಶಾಸಕ ರವಿಕುಮಾರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಫುಟ್ ಪಾತ್ ತೆರವುಗೊಳಿಸಿ
ಮಂಡ್ಯ ನಗರದ ವಿ.ವಿ ರಸ್ತೆ ಪೇಟೆ ಬೀದಿ ಸೇರಿದಂತೆ ಹಲವೆಡೆ ಪಾದಚಾರಿ ರಸ್ತೆ (ಪುಟ್ ಪಾತ್) ಅತಿಕ್ರಮಿಸಲಾಗಿದೆ. ನಗರದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ಪಾದಚಾರಿಗಳಿಗೆ ಅನುಕೂಲವಾಗುವಂತೆ ಪುಟ್ ಪಾತ್ ಅತಿಕ್ರಮಣ ತೆರವುಗೊಳಿಸ ಬೇಕೆಂದು ನಗರಸಭೆ ಆಯುಕ್ತ ಮಂಜುನಾಥ್ ಅವರಿಗೆ ಸೂಚಿಸಿದರು.

ಮಂಡ್ಯ ನಗರದ ಮಹಾವೀರ ವೃತ್ತದಲ್ಲಿರುವ ನಗರಸಭೆ ಅಂಗಡಿ ಮಳಿಗೆಗಳ ಜಾಗದಲ್ಲಿ ಬೃಹತ್ತಾದ ಕಟ್ಟಡ ಕಟ್ಟಿದರೆ, ನಗರಸಭೆಗೆ ಸಾಕಷ್ಟು ಆದಾಯ ಬರುತ್ತದೆ. ಪ್ರಮುಖ ಅಂಗಡಿಗಳು ಒಂದೇ ಕಟ್ಟಡದಲ್ಲಿ ಬರುವುದರಿಂದ ಉತ್ತಮ ಆದಾಯ ಬರುತ್ತದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಆಯುಕ್ತರಿಗೆ ಸೂಚಿಸಿದರು. ಮಂಡ್ಯ ನಗರದಲ್ಲಿ ಬೀದಿ ದೀಪ, ಒಳಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ನಗರದಲ್ಲಿ ಕಸ ಸಂಗ್ರಹಣೆ ಬಗ್ಗೆ ಸಾಕಷ್ಟು ದೂರುಗಳಿದ್ದು, ನಗರದ ಸ್ವಚ್ಛತೆಯ ದೃಷ್ಟಿಯಿಂದ ಕಸ ಸಂಗ್ರಹಣೆ ಉತ್ತಮವಾಗಿ ಆಗಬೇಕೆಂದು ತಾಕೀತು ಮಾಡಿದರು.

ಆಯುಕ್ತ ಮಂಜುನಾಥ್ ಮಾತನಾಡಿ, ಮಂಡ್ಯ ನಗರಸಭೆಯಲ್ಲಿ ಪೌರಕಾರ್ಮಿಕರ ಸಂಖ್ಯೆ ಕಡಿಮೆಯಿದೆ‌.ಇನ್ನಷ್ಟು ಪೌರ ಕಾರ್ಮಿಕರು ಬೇಕಾಗಿದೆ. ನಾವು ನಗರವನ್ನು ಸ್ವಚ್ಛವಾಗಿ ಇಡಲು ಸಾಕಷ್ಟು ಪ್ರಯತ್ನಿಸಿದ್ದೇವೆ, ಹಲವೆಡೆ ಕಸ ಹಾಕದಂತೆ ಬೋರ್ಡ್ ಹಾಕಿದ್ದರೂ, ಅಲ್ಲಿಯೇ ಜನರು ಕಸ ಹಾಕುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕಸ ಹಾಕಬೇಡಿ ಎಂದು ಬೋರ್ಡ್ ಹಾಕಿರುವ ಜಾಗದಲ್ಲೂ ಕಸ ಹಾಕಿದರೆ, ಅಂತಹ ಜನರನ್ನು ಗುರುತಿಸಿ ಅವರಿಗೆ ದಂಡ ಹಾಕಿದರೆ, ನಂತರ ಜನರೇ ನಿಧಾನವಾಗಿ ಬದಲಾವಣೆ ಆಗುತ್ತಾರೆ ಎಂದರು.

ನೋಟಿಸ್ ನೀಡಿ ಮಂಡ್ಯ ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಹೋಲ್ಡಿಂಗ್ಸ್ ಗಳನ್ನು ಹಾಕಲಾಗಿದೆ. ಹೀಗೆ ಅನಧಿಕೃತವಾಗಿ ಹಾಕುವವರಿಗೆ ನೋಟೀಸ್ ಜಾರಿ ಮಾಡಿ, ಕಾನೂನು ಪ್ರಕಾರ ಹಣ ಕಟ್ಟಿಸಿಕೊಂಡರೆ, ನಗರಸಭೆಗೂ ಆದಾಯ ಬರುತ್ತದೆ. ಹೀಗೆ ಬರುವ ಆದಾಯವನ್ನು ಇನ್ನಿತರ ಸಮಾಜಮುಖಿ ಕಾರ್ಯಗಳಿಗೆ ಬಳಸಬಹುದು ಎಂದು ಶಾಸಕ ರವಿಕುಮಾರ್ ಸಲಹೆ ನೀಡಿದರು.

ನಗರದ ವ್ಯಾಪ್ತಿಯಲ್ಲಿ ಸರಕು ಸೇವಾ ಪರವಾನಗಿಯನ್ನು ಬೇಗ ನೀಡಿದರೆ,ಇದರಿಂದಲೂ ನಗರಸಭೆಗೆ ಆದಾಯ ಬರುತ್ತದೆ. ಮಂಡ್ಯ ನಗರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಲವೆಡೆ ಸ್ಥಗಿತಗೊಂಡಿದೆ. ಸಾರ್ವಜನಿಕರಿಗೆ ಉತ್ತಮ ಶುದ್ಧ ಕುಡಿಯುವ ನೀರನ್ನು ನೀಡುವ ದೃಷ್ಟಿಯಿಂದ ಕೂಡಲೇ ಇವುಗಳನ್ನು ರಿಪೇರಿ ಮಾಡಿಸುವಂತೆ ನಗರಸಭೆ ಇಂಜಿನಿಯರ್ ರವಿಕುಮಾರ್ ಅವರಿಗೆ ಸೂಚಿಸಿದರು.

ನೀರು ನಿಲ್ಲದಂತೆ ಕ್ರಮವಹಿಸಿ
ಮಂಡ್ಯ ನಗರದ ಕಲ್ಲಹಳ್ಳಿ ಬಳಿ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಮಳೆ ನೀರು ಬಂದರೆ ರಸ್ತೆ ತುಂಬೆಲ್ಲ ನಿಲ್ಲುತ್ತದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಆಗಿದೆ. ಕೂಡಲೇ ಒಳಚರಂಡಿ ವ್ಯವಸ್ಥೆ ಮಾಡುವವರೆಗೂ ಅಲ್ಲಿ ನೀರು ನಿಲ್ಲದ ಹಾಗೆ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಗಣಿಗೆ ರವಿ ಕುಮಾರ್ ಸೂಚಿಸಿದರು. ಚಿಕ್ಕ ಮಂಡ್ಯ ರಸ್ತೆಯಲ್ಲಿ ಗುಂಡಿ ಬಿದ್ದಿದೆ,ಹೊಳಲು ರಸ್ತೆಯ ರೈಲ್ವೆ ಅಂಡರ್ ಪಾಸ್ ಬಳಿ ರಸ್ತೆ ಗುಂಡಿ ಬಿದ್ದಿದ್ದು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಂಡರ್ ಪಾಸ್ ನಿರ್ಮಿಸಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಹನಕೆರೆ ಬಳಿ ಅಂಡರ್ ಪಾಸ್ ನಿರ್ಮಿಸಬೇಕು. ಇಲ್ಲದಿದ್ದರೆ ನಾನೇ ಜನರೊಂದಿಗೆ ಸೇರಿ ಪ್ರತಿಭಟನೆ ಮಾಡಿ ರಸ್ತೆ ಬಂದ್ ಮಾಡಿಸುತ್ತೇನೆ ಎಂದು ಎನ್ ಹೆಚ್ ಎ ಐ ಅಧಿಕಾರಿ ಎಇ ಉಮಾಪತಿಯವರಿಗೆ ಎಚ್ಚರಿಕೆ ನೀಡಿದರು.

ಜನರಿಂದ ಟೋಲ್ ಸಂಗ್ರಹ ಮಾಡುವ ನೀವು ಮೊದಲು ಹನಕೆರೆ ಬಳಿ ಅಂಡರ್ ಪಾಸ್ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಿ. ಮಾಡದಿದ್ದರೆ ನಾನೇ ರಸ್ತೆಗೆ ಅಡ್ಡಲಾಗಿ ಕೂರುತ್ತೇನೆ. ಹೆದ್ದಾರಿ ರಸ್ತೆ ಸಮರ್ಪಕವಾಗಿ ನಿರ್ಮಾಣ ಮಾಡದೆ ಇರುವುದರಿಂದ ಪ್ರತಿದಿನ ಈ ರಸ್ತೆಯಲ್ಲಿ ಜನರು ಸಾಯುತ್ತಿದ್ದು, ಸಾವಿನ ಹೆದ್ದಾರಿ ಎಂದು ಜನರೇ ಮಾತನಾಡುತ್ತಿದ್ದಾರೆ. ನೀವು ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ನೀರು ನಿಂತು ಮಳೆ ನೀರು ನಿಂತು ಜನರು ದಾರುಣ ಸ್ಥಿತಿಯಲ್ಲಿ ಬದುಕುವಂತಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.

ಸಭೆಯಲ್ಲಿ ಡಿವೈಎಸ್ಪಿ ಶಿವಮೂರ್ತಿ,ನಗರಸಭೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ