ನೂತನ ಕಾಂಗ್ರೆಸ್ ಸರ್ಕಾರವು ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಹಿತ ಕಾಯಲು ಕಾರ್ಖಾನೆಗೆ ಇದೇ ಪ್ರಥಮ ಬಾರಿಗೆ ಒಂದೇ ಬಾರಿಗೆ 50ಕೋಟಿ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ, ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಮಂಡ್ಯ ಶಾಸಕ ರವಿಕುಮಾರ್‌ಗೌಡ ಹಾಗೂ ಜಿಲ್ಲೆಯ ಎಲ್ಲಾ ಶಾಸಕರಿಗೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮೈಸೂರು ಸಕ್ಕರೆ ಕಾರ್ಖಾನೆ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್. ಕೃಷ್ಣ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಲಿನಲ್ಲಿ ಸುಮಾರು 5 ಲಕ್ಷ ಟನ್ ಒಪ್ಪಿಗೆ ನೋಂದಾಯಿಸಿದ್ದು, ಕಬ್ಬು ಕಟಾವು ಆಳು ತರಲು ಈಗಾಗಲೇ ಕಳೆದ ಸಾಲಿನ ಬಾಕಿ ₹ 72 ಲಕ್ಷ ಕಬ್ಬು ಕಟಾವು ಮೇಸ್ತ್ರಿ ಬಳಿ ಇದ್ದು, ಇನ್ನು 2ಕೋಟಿ ಹಣ ನೀಡಿ ಕಬ್ಬು ಕಟಾವು ಗ್ಯಾಂಗ್‌ಗಳನ್ನು ತರಬೇಕು. ಅಲ್ಲದೆ ತಕ್ಷಣದಲ್ಲೇ ಕಾರ್ಖಾನೆ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ಕಾರ್ಖಾನೆಯಲ್ಲಿ ಡಿಸ್ಟಿಲರಿಗಳು ಶಿಥಿಲಗೊಂಡಿದ್ದು, ಕೇವಲ ಸಕ್ಕರೆ ಘಟಕ ಪ್ರಾರಂಭವಾದರೆ ಕಾರ್ಖಾನೆಗೆ ಲಾಭವಾಗುವುದಿಲ್ಲ. ಇದರ ಜೊತೆಗೆ ಎಥನಾಲ್ ಘಟಕವನ್ನು ಪ್ರಾರಂಭಿಸಲು ಅಗತ್ಯ ಹಣಕಾಸಿನ ನೆರವು ನೀಡಬೇಕು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ 41 ಕೋಟಿ ನೀಡಬೇಕಿದ್ದು ಹಾಗೂ ಆಹಾರ ನಾಗರೀಕ ಸರಬರಾಜು ಇಲಾಖೆಗೆ 19ಕೋಟಿ ಹಣವನ್ನು ನೀಡಬೇಕಿದ್ದು, ಇದನ್ನು ಮುಂದಿನ ಬಜೆಟ್‌ನಲ್ಲಿ, ತೀರುವಳಿ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಭ್ರಷ್ಟಾಚಾರ ತನಿಖೆಗೆ ಆಗ್ರಹ
ಈ ಹಿಂದೆ ಮೈಷುಗರ್ ಅಧ್ಯಕ್ಷನಾಗಿದ್ದ ನಾಗರಾಜಪ್ಪನವರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಲೋಕಾಯುಕ್ತದಿಂದ ತಿಳಿದು ಬಂದಿದ್ದು, ಈ ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ವಿ.ಸಿ.ನಾಲೆ ವ್ಯಾಪ್ತಿಯಲ್ಲಿ 40 ರಿಂದ 50 ಲಕ್ಷ ಟನ್ ಕಬ್ಬು ಬೆಳೆದಿದ್ದು, ಈ ಕಬ್ಬು ಈಗಾಗಲೇ ನೀರಿಲ್ಲದೆ ಒಣಗುತ್ತಿದ್ದು, ಈ ಕೂಡಲೇ ವಿ.ಸಿ.ನಾಲೆಗೆ ನೀರು ಹರಿಸುವುದರ ಮುಖಾಂತರ ರೈತರನ್ನು ಕಾಪಾಡಬೇಕು ಎಂದ ಅವರು, 2004 ರಲ್ಲಿ ಇದೇ ಚಲುವರಾಯಸ್ವಾಮಿ ಉಸ್ತುವಾರಿ ಸಚಿವರಾಗಿದ್ದರು, ಆಗ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಮೈಷುಗರ್ ಗೆ ಮೊದಲ ಕಂತಾಗಿ 5 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಈಗ ಅದೇ ನಾಯಕರು ಕಾರ್ಖಾನೆ ಪ್ರಾರಂಭ ಮಾಡುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಸಂಘದ ಸಹ ಕಾರ್ಯದರ್ಶಿ ಎಂ.ಎಸ್.ಚನ್ನೇಗೌಡ, ನಿರ್ದೇಶಕ ಸಿ.ಶಂಕರೇಗೌಡ, ಎಂ.ಎಲ್.ತುಳಸೀಧರ್ ಸೇರಿದಂತೆ ಮತ್ತಿತರರಿದ್ದರು.




