ಶಿವಸುಂದರ್
ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದು ಪ್ರಜಾಪ್ರಭುತ್ವದ ಬಗ್ಗೆ ಮತ್ತು ದೇಶದ ಜನರ ಬಗ್ಗೆ ಕಾಳಜಿ ಇರುವವರೆಲರಲ್ಲೂ ಒಂದು ಹೊಸ ಉತ್ಸಾಹ ಹಾಗೂ ಭರವಸೆ ಹುಟ್ಟಿಸಿದೆ.
ಕರ್ನಾಟಕದ ಚುನಾವಣಾ ಪರಿಣಾಮಗಳು ಬಿಜೆಪಿಯ ಹಾಗೂ ವಿರೋಧ ಪಕ್ಷಗಳ ಹಲವಾರು ರಾಜಕೀಯ ನಡೆಗಳನ್ನು ಬದಲಿಸಿವೆ. ಅಥವಾ ಪುನರಾವಲೋಕನಕ್ಕೆ ಒಳಪಡಿಸಿವೆ. ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನಲ್ಲಿದ್ದ ಒಡಕು ಇದೇ ಕಾರಣದಿಂದಾಗಿ ವಿಭಜನೆಯ ಮಟ್ಟಕ್ಕೆ ಹೋಗದೆ ತಾತ್ಕಾಲಿಕ ತೇಪೆಗೆ ಸಿದ್ಧವಾಗಿದೆ. ಪಕ್ಕದ ತೆಲಂಗಾಣದಲ್ಲಿ ಆಡಳಿತರೂಢ ಬಿಆರ್ಎಸ್ ಪಕ್ಷವನು ತೊರೆದು ಬಿಜೆಪಿ ಸೇರಲು ಸಿದ್ಧವಿದ್ದ ಹಲವು ಎಂಎಲ್ಎ ಗಳು ಮತ್ತು ನಾಯಕರು ತಾತ್ಕಾಲಿಕವಾಗಿ ತಮ್ಮ “ಮತಾಂತರ” ವನ್ನು ಮುಂದೂಡಿದ್ದಾರೆ. ಮತ್ತೊಂದೆಡೆ 2024 ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂಬ ಹುಮ್ಮಸ್ಸು ವಿರೋಧಿ ಪಾಳಯದಲ್ಲಿ ಕಾಣುತ್ತಿದ್ದು ಇದೇ ಜೂನ್ 23 ರಂದು ಪಾಟ್ನಾದಲ್ಲಿ ಬಹುಪಾಲು ವಿರೋಧ ಪಕ್ಷಗಳು ಒಟ್ಟು ಸೇರಿ ಬೃಹತ್ ಜನಸಭೆ ಮಾಡುತ್ತಿವೆ.
ಕರ್ನಾಟಕದೊಳಗೆ ಸೋತ ಬಿಜೆಪಿ ಇನ್ನೂ ಸಂಘಟನಾತ್ಮಕವಾಗಿ ಚೇತರಿಸಿಕೊಂಡ ಸೂಚನೆಗಳು ಕಂಡುಬರುತ್ತಿಲ್ಲ. ಇನ್ನೂ ವಿರೋಧ ಪಕ್ಷದ ನಾಯಕನ ಅಯ್ಕೆಯಾಗದಿರುವುದು ಮಾತ್ರವಲ್ಲದೆ, ಗ್ಯಾರಂಟಿಗಳ ಹೊಡೆತವನ್ನು ಎದುರಿಸುವುದು ಹೇಗೆ ಎಂಬುದು ಬಿಜೆಪಿಗೆ ಅತ್ಯಂತ ತೊಡಕಿನ ಸಮಸ್ಯೆಯಾಗಿರುವಂತಿದೆ. ಹೋಲಿಕೆಯಲ್ಲಿ ನೋಡಿದರೆ ಜೆಡಿಎಸ್ ಬಿಜೆಪಿಗಿಂತ ಬೇಗ ಚೇತರಿಸಿಕೊಂಡು ಪ್ರಮುಖ ವಿರೋಧ ಪಕ್ಷದ ರೀತಿಯಲ್ಲಿ ವರ್ತಿಸುತ್ತಿದೆ ಮತ್ತು ತನ್ನ ಮುಂದಿನ ಪಯಣವನ್ನು ಬಿಜೆಪಿಯ ಜೊತೆಗೆ ಮುಂದುವರೆಸುವ ಸೂಚನೆಗಳನ್ನು ನೀಡುತ್ತಿದೆ!
ಈ ಎಲ್ಲಾ ಬೆಳವಣಿಗೆಗಳು ಸಂವಿಧಾನದ ಉಳಿವಿನ ದೃಷ್ಟಿಯಿಂದ ಸಕಾರಾತ್ಮಕವೇ ಆದರೂ ಈ ಬೆಳವಣಿಗೆಗಳು ಹಾಗೂ ಕಾಂಗ್ರೆಸ್ಸಿನ ಚುನಾವಣಾ ಗೆಲುವುಗಳು ಬಿಜೆಪಿಯ ಹಿನ್ನಡೆಯನ್ನು ಶಾಶ್ವತಗೊಳಿಸಬಲ್ಲದೇ?
ಅಥವಾ
ಈ ಚುನಾವಣಾ ಸೋಲು ಸಂಘಪರಿವಾರದ ರಾಜಕೀಯ ಮತ್ತು ಸೈದ್ಧಾಂತಿಕ ಸೋಲನ್ನಾಗಿಸಬಲ್ಲದೇ?
ವಿರೋಧ ಪಕ್ಷಗಳ ವಿಜಯಗಳಿಗೆ ಬಿಜೆಪಿ-ಆರೆಸ್ಸೆಸ್ಸಿನ ಸೈದ್ಧಾಂತಿಕ -ರಾಜಕೀಯವನ್ನು , ಸಂಘಟನಾತ್ಮಕ ಶಕ್ತಿಯನ್ನು ಸೋಲಿಸಿ ಸಂವಿಧಾನವನ್ನು ಮತ್ತು ಜನರನ್ನು ಗೆಲ್ಲಿಸುವ ಶಕ್ತಿಯಾಗಲೀ ಉದ್ದೇಶವಾಗಲೀ ಇದೆಯೇ?
ಬಿಜೆಪಿ ಚುನಾವಣೆ ಸೋತಿದೆ- ಸಾಂಸ್ಕೃತಿಕವಾಗಿ-ಸಾಮಾಜಿಕವಾಗಿ ಸೋತಿದೆಯೇ?

ಈ ಗೆಲುವು ವಿಧಾನಸಭೆಯಲ್ಲಿನ ಶಾಸನಾತ್ಮಕ ಅಧಿಕಾರದಿಂದ ಬಿಜೆಪಿಯನ್ನು ದೂರವಿರಿಸಿದೆ. ಆದರೆ ವಿರೋಧ ಪಕ್ಷದಂಥ ಅಷ್ಟೆ ಮುಖ್ಯವಾದ ಸ್ಥಾನದಲ್ಲಿ ಬಿಜೆಪಿಯನ್ನು ಕೂರಿಸಿದೆ. ಹಾಗೂ ಬಿಜೆಪಿ ತನ್ನ ಸಂಘ ಶಕ್ತಿಯ ಮೂಲಕ ವಿರೋಧ ಪಕ್ಷದ ಸ್ಥಾನವನ್ನು ಯಾವಾಗಲೂ ಅಧಿಕಾರಕ್ಕೆ ಚಿಮ್ಮುಹಲಗೆಯನ್ನಾಗಿಯೇ ಬಳಸುತ್ತಾ ಬಂದಿದೆ. ಎಲ್ಲಿಯತನಕ ಬಿಜೆಪಿ ವಿರೋಧ ಪಕ್ಷವಾಗಿಯೂ ಅಪ್ರಸ್ತುತವಾಗುವುದಿಲ್ಲವೂ ಅಲ್ಲಿಯವರೆಗೆ ಬಿಜೆಪಿಗೆ ಮತ್ತದರ ದ್ವೇಷ ರಾಜಕಾರಣಕ್ಕೆ ಸೋಲಿರುವುದಿಲ್ಲ.
ಅದರಲ್ಲೂ ಬಿಜೆಪಿ ಏಕೈಕ ಪರಿಣಾಮಕಾರಿ ವಿರೋಧ ಪಕ್ಷವಾದಷ್ಟು ಸಂವಿಧಾನಕ್ಕೆ ಮತ್ತು ಜನರ ನೆಮ್ಮದಿಯ ಬದುಕಿಗೆ ಸಂಚಕಾರ ತಪ್ಪುವುದಿಲ್ಲ.
ಏಕೆಂದರೆ ಬಿಜೆಪಿ ಇತರ ಪಕ್ಷಗಳಂತಲ್ಲ್ಲ. ಆರೆಸ್ಸೆಸ್-ಬಿಜೆಪಿ ಕೂಟಕ್ಕೆ ಅದರ ಅಂತಿಮ ಗುರಿಯಾದ ಬ್ರಾಹ್ಮಣಶಾಹಿ -ಬಂಡವಾಳಶಾಹಿ ಹಿಂದೂರಾಷ್ಟ್ರದ ಸಾಕಾರಕ್ಕೆ ಚುನಾವಣೆಯೂ ಕೂಡ ಒಂದು ಸಾಧನವೇ ಹೊರತು ಅದೇ ಎಲ್ಲವೂ ಅಲ್ಲ. ಕಳೆದ ನೂರು ವರ್ಷಗಳ ಅದರ ಇತಿಹಾಸವನ್ನು ಗಂಭೀರವಾಗಿ ಅಧ್ಯಯನ ಮಾಡಿದರೆ ಇದು ಸ್ಪಷ್ಟವಾಗುತ್ತದೆ.
ಅದು ಮೊದಲಿಗೆ ಜನರಲ್ಲಿ ಹಿಂದೂತ್ವದ ಹೆಸರಿನ ದ್ವೇಷದ ಅಮಲನ್ನು ಮತ್ತು ಬ್ರಾಹ್ಮಣ್ಯದ ಗುಲಾಮಗಿರಿಯ ಕೀಳರಿಮೆಯನ್ನು ಏಕಕಾಲದಲ್ಲಿ ಬೆಳೆಸುತ್ತಾ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆ ರೂಪಿಸಲು ಜನಸಂಘಟೆನೆ ಮತ್ತು ಪ್ರಭಾ ವಲಯಗಳನ್ನು ಬೆಳೆಸಿಕೊಂಡಿತು . ಮೊದಲು ಸಾಮಾಜಿಕ ಹಾಗೂ ಸಾಂಸ್ಕೃತಿಕ ಶಕ್ತಿ ಕಟ್ಟಿಕೊಳ್ಳುವುದು ಅದರ ಆಧಾರದಲ್ಲಿ ರಾಜಕೀಯ ಶಕ್ತಿಯನ್ನು ಸಂಚಯಿಸಿಕೊಳ್ಳುವುದು ಅದರ ವ್ಯೂಹತಂತ್ರ ಮತ್ತು ಯೋಜನೆ.
ಆದರೆ ಪ್ರಧಾನಧಾರೆ ರಾಜಕಾರಣದಲ್ಲಿ ಬಿಜೆಪಿಯ ಚುನಾವಣಾ ಶಕ್ತಿಯನ್ನು ಎದುರಾಗುವ ದುರ್ಬಲ ಕಾರ್ಯಕ್ರಮಗಳಿವೆಯೇ ವಿನಾ ಅದರ ಮೂಲ ಶಕ್ತಿಯಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಸೋಲಿಸುವ ಯೋಜನೆಯಾಗಲೀ ಅಥವಾ ಉದ್ದೇಶವಾಗಲೇ ವಿರೊಧ ಪಕ್ಷಗಳಿಗಿಲ್ಲ.
ಹಾಗೇ ನೋಡಿದರೆ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ವಲಯದಲ್ಲಿ ಅದರದ್ದು ಏಕಚಕ್ರಾಧಿಪತ್ಯ. ಈ ವಲಯದಲ್ಲಿ ಉಳಿದೆಲ್ಲಾ ವಿರೋಧ ಪಕ್ಷಗಳು ಅದರ ಸಾಮಂತರೇ
ಹೀಗಾಗಿ ಹಿಂದೂತ್ವದ ಹೆಜಿಮೊನಿ-ಅಧಿಪತ್ಯ ರಾಜಕೀಯವನ್ನು ಒಳಗೊಂಡಂತೆ ಇಡೀ ಸಾರ್ವಜನಿಕ ವಲಯದ ಮೇಲೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಅದನ್ನು ಎದುರಾಗಬಹುದಾದ ಎಡ ಮತ್ತು ಪ್ರಗತಿಪರ ಶಕ್ತಿಗಳು ದುರ್ಬಲಗೊಳ್ಳುತ್ತಾ ಸಾಗುತ್ತಿವೆ. ಬಲವಾದ ಸಮಗ್ರ ಪ್ರತಿರೋಧ ಮತ್ತು ಪರ್ಯಾಯವನ್ನು ಕಟ್ಟುವ ಬದಲು ಕಾಂಗ್ರೆಸ್ಸಿನಂಥ ಪಕ್ಷಗಳಲ್ಲಿ ಪರ್ಯಾಯವನ್ನು ಅರಸುತ್ತಿವೆ.
ಈ ಎಲ್ಲಾ ಕಾರಣಗಳಿಂದ ವಿರೋಧದಿಂದ- ಅಧಿಕಾರಕ್ಕೆ ಸುಲಭವಾಗಿ ನೆಗೆಯುವ ಬಿಜೆಪಿ ಚುನಾವಣೆಯ ಮೂಲಕ ರಾಜಕೀಯ ಅಧಿಕಾರ ಸಿಕ್ಕಾಗ ಅದನ್ನು ತನ್ನ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಶಕ್ತಿಗಳನ್ನು ಸಾಂಸ್ಥಿಕವಾಗಿ ಹೆಚ್ಚಿಸಿಕೊಂಡು ಸಮಾಜದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಾ ಬಂದಿದೆ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ, ನ್ಯಾಯಾಂಗದಲ್ಲಿ ಮತ್ತು ಕಾರ್ಯಾಂಗದಲ್ಲಿ ತನ್ನ ಪ್ರಭಾವಲಯವನ್ನು ಬೆಂಬಲಿಗರನ್ನು ಬೆಳೆಸಿಕೊಂಡಿದೆ. ಹೀಗಾಗಿ ಆಗಾಗ ಬಿಜೆಪಿ ತಾತ್ಕಾಲಿಕವಾಗಿ ಅಧಿಕಾರಕ್ಕೆ ಬರದಿದ್ದರೂ ಅದರ ಅಜೆಂಡಾಗಳನ್ನೇ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಇತರ ಪಕ್ಷಗಳೂ ಜಾರಿಗೊಳಿಸುವಂಥ ಅನಿವಾರ್ಯತೆಯನ್ನು ನಿರ್ಮಾಣ ಮಾಡಿದೆ. ಹೆಜಿಮೊನಿ ಎಂದರೆ ಇದೇ ಅಲ್ಲವೇ?
ವಿರೋಧ ಪಕ್ಷವಾಗಿ ಬಿಜೆಪಿ ಇನ್ನಷ್ಟು ಆಕ್ರಮಣಕಾರಿ-ಅಪಾಯಕಾರಿ
ಅಧಿಕಾರ ಕಳೆದುಕೊಂಡು ವಿರೋಧ ಪಕ್ಷವಾಗಿದ್ದಾಗ ಬಿಜೆಪಿ-ಆರೆಸ್ಸೆಸ್ ತನ್ನ ಸಾಮಾಜಿಕ ಮತು ಸಾಂಸ್ಕೃತಿಕ ಶಕ್ತಿಯನ್ನು ಬಳಸಿಕೊಂಡು ಆಳುವ ಸರ್ಕಾರದ ಬಗ್ಗೆ ಜನರಲ್ಲಿ ಸಹಜವಾಗಿ ಮೂಡುವ ಅಸಮಾಧಾನಗಳನ್ನು ಬಂಡವಾಳಶಾಹಿ-ಬ್ರಾಹ್ಮಣಶಾಹಿ ವಿರೋಧಿಯಾಗದಂತೆ ಹಿಂದೂತ್ವವಾದಿ ಸಂವಿಧಾನ ವಿರೋಧಿಯಾಗಿ ಮರುರೂಪಿಸುತ್ತಾ ಬಂದಿದೆ.
ಅದು ವಿರೋಧ ಪಕ್ಷವಾಗಿದ್ದಾಗಲೇ ಹೆಚ್ಚೆಚ್ಚು ಕೋಮು ಗಲಭೆಗಳನ್ನು ಹುಟ್ಟುಹಾಕಿದೆ. ವಿರೋಧ ಪಕ್ಷವಾಗಿದ್ದಾಗಲೇ ಆಡಾಳಿತ ರೂಢ ಅವಕಾಶವಾದಿ ಪಕ್ಷಗಳ ವಿರುದ್ಧ ಜನರಿಗಿರುವ ಅಸಮಾಧಾನಗಳನ್ನು ತನ್ನ ಫ಼್ಯಾಶಿಸ್ಟ್ ರಾಜಕಾರಣಕ್ಕೆ ಪೂರಕವಾಗಿ ದುಡಿಸಿಕೊಂಡಿದೆ. ಅದು ವಿರೋಧ ಪಕ್ಷವಾಗಿದ್ದಾಗಲೇ ದೇಶಾದ್ಯಂತ ತನ್ನ ಪ್ರಭಾವಲಯವನ್ನು ವಿಸ್ತರಿಸಿಕೊಳ್ಳುತ್ತಾ ಸಂವಿಧಾನ ವಿರೋಧಿ ಹಿಂದೂತ್ವ ರಾಜಕಾರಣ ಮಾನ್ಯಗೊಳ್ಳುವಂತೆ ಮಾಡಿದೆ. ಆ ಮೂಲಕ ಕಳೆದುಹೋದ ರಾಜಕೀಯ ಶಕ್ತಿಯನ್ನು ಮತ್ತೆ ಪಡೆದುಕೊಳ್ಳುತ್ತದೆ.
ಇದಕ್ಕೆ ಪ್ರಮುಖ ಕಾರಣ ವಿರೋಧ ಪಕ್ಷಗಳು ಕೂಡ ಸಾರದಲ್ಲಿ ಸಂವಿಧಾನ ವಿರೋಧಿಯಾದ ಮತ್ತು ಹಿಂದೂತ್ವದ ಸಾರವಾದ ಉಗ್ರ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ನೀತಿಗಳನ್ನೇ ಮಂದವಾಗಿ ಅನುಸರಿಸುತಾ ಬಂದಿರುವುದು.
ಹೀಗಾಗಿ ಒಟ್ಟಾರೆ ಪ್ರಧಾನಧಾರೆ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳು ಬ್ರಾಹ್ಮಣಶಾಹಿ-ಬಂಡವಾಳಶಾಹಿತ್ವದ ಉಗ್ರತೆಯನ್ನು ವಿರೋಧಿಸುತ್ತಿವೆಯೇ ವಿನಾ ಅದಕ್ಕೆ ಪರ್ಯಾಯವಾದ ಸಮಾಜವಾದಿ ಮತ್ತು ಸಮನಾತವಾದಿ ಸಾಂವಿಧಾನಿಕ ರಾಜಕಾರಣವನ್ನು ಮಾಡಲೇ ಇಲ್ಲ. ಈ ಧೋರಣೆಗಳೇ ರಾಜಕೀಯದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹಿಂದೂತ್ವ ರಾಜಕಾರಣಕ್ಕೆ ಮಾನ್ಯತೆ ಕೊಟ್ಟಿದ್ದು ಮಾತ್ರವಲ್ಲದೆ ಪರೋಕ್ಷವಾಗಿ ಪೋಷಿಸುತ್ತಾ ಬಂದಿವೆ.
1991 ರ ನಂತರದಲ್ಲಿ ಜಾರಿಯಾದ ಉದಾರೀಕರಣ-ಖಾಸಗೀಕರಣ-ಜಾಗತೀಕರಣ ಆರ್ಥಿಕ ನೀತಿಗಳ ಬಗ್ಗೆ, 1992 ರಲ್ಲಿ ಹಿಂದೂತ್ವವಾದಿಗಳು ಹಾಡುಹಗಲಲ್ಲೇ ಬಾಬ್ರಿ ಮಸೀದಿ ನಾಶದ ಮಾಡಿದ ಜಾಗದಲ್ಲಿ ಭವ್ಯ ರಾಮಮಂದಿರ ಕಟ್ಟುವ ಬಗ್ಗೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ನಾಶಮಾಡಿ ಮೇಲ್ಜಾತಿ ಬಲಾಢ್ಯರಿಗೆ ಕೊಟ್ಟಿರುವ EWS ಮೀಸಲಾತಿಯ ಬಗ್ಗೆ ಮತ್ತು ಜನಹೋರಾಟಗಳನ್ನು ಭಯೋತ್ಪಾದನೆ ಎಂದು ಪರಿಗಣಿಸುವ UAPA ಕಾಯಿದೆಗಳ ಬಗ್ಗೆ ರಾಜಕೀಯ ಪಕ್ಷಗಳಲ್ಲಿ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಕ್ರಮೇಣವಾಗಿರುವ ಏರ್ಪಟ್ಟಿರುವ ಸರ್ವಸಮ್ಮತಿಗಳು ಹಿಂದೂತ್ವದ ರಾಜಕಾರಣದ ಹೆಜಿಮೊನಿಯ ಕಣ್ಣಿಗೆ ರಾಚುವ ಕೆಲವು ಉದಾಹರಣೆಗಳು. ಬಿಜೆಪಿ ಅಧಿಕಾರಕ್ಕೆ ಬಂದರೊ, ಬರದಿದ್ದರೂ ಈ ರೀತಿಯಲ್ಲಿ ಸಂವಿಧಾನವನ್ನು ಕೆಡವುವ ಕೆಲಸ ನಿರಾತಂಕವಾಗಿ ನಡೆಯುತ್ತಿದೆ.
ಆದ್ದರಿಂದಲೇ ಬಿಜೆಪಿ ಚುನಾವಣೆಯಲ್ಲಿ ಸೋತು ತಾತ್ಕಾಲಿಕವಾಗಿ ವಿರೋಧ ಪಕ್ಷವಾಗಿ ಕೂತರು ಅದನ್ನು ಹಿಂದೂತ್ವದ ಸೋಲೆಂದು ಮಾತ್ರವಲ್ಲ ಬಿಜೆಪಿಯ ಸೋಲೆಂದೂ ಕೂಡ ಭಾವಿಸಲು ಆಗುವುದಿಲ್ಲ. ಏಕೆಂದರೆ 1980 ರ ನಂತರ ಬಿಜೆಪಿ ಕಾಂಗ್ರೆಸ್ಸಿನ ಮತ್ತು ಇತರ ಆಡಳಿತ ರೂಢ ಪಕ್ಷಗಳ ಮೃದು ಹಿಂದೂತ್ವವಾದಿ ಹಾಗೂ ಆಡಳಿತ ಆಸರೆಯಾಗಿಸಿಕೊಂಡು, ಅವನ್ನು ಹಿಂದೂತ್ವವಾದಿ ರಾಜಕಾರಣದ ಮೆಟ್ಟಿಲನ್ನಾಗಿ ಬಳಸಿಕೊಂಡು ಬೆಳೆಯುತ್ತಾ ಬಂದಿದೆ.
ನಗಣ್ಯವಾಗಿದ್ದ ಬಿಜೆಪಿಯನ್ನು ಮಾನ್ಯಗೊಳಿಸಿದ ಬಲ ಹಾಗೂ ನಡು ರಾಜಕಾರಣ
ಇತಿಹಾಸದ ಪಕ್ಷಿನೋಟ ಇದಕ್ಕೆ ಹಲವು ಪುರಾವೆಗಳನ್ನು ನೀಡುತ್ತದೆ.
1967-69 ರಲ್ಲಿ ಸ್ವಾತಂತ್ರ್ಯಾ ನಂತರದಲ್ಲಿ ಸತತ ಇಪ್ಪತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಬಗೆಗಿನ ಭ್ರಮನಿರಸನವು ಎಡಶಕ್ತಿಗಳಿಗೆ ಮಾತ್ರವಲ್ಲದೆ ಎಲ್ಲಾ ಬಗೆಯ ಬಲಪಂಥೀಯ ಮತ್ತು ನಡುಪಂಥೀಯ ಶಕ್ತಿಗಳಿಗೂ ಕಸುವು ತುಂಬಿತು. ವಾಸ್ತವದಲ್ಲಿ 1969 ರ ಚುನಾವಣೆಯಲ್ಲಿ 9 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು ಒಂದು ವಿದ್ಯಮಾನವಾದರೆ ಈಗಿನ ಬಿಜೆಪಿಯ ಮಾತ್ರು ಸಂಸ್ಥೆಯಾದ ಜನಸಂಘ ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಇತರ ಪಕ್ಷಗಳೊದನೆ ಅಧಿಕಾರಕ್ಕೊ ಬಂತು. ಇದೇ ಅಲೆಯಲ್ಲಿ ತೇಲುತ್ತಾ ಕರ್ನಾಟಕದಲ್ಲೂ ಜನಸಂಘ ಉಡುಪಿಯ ಪುರಸಭೆಯ ಅಧಿಕಾರವನ್ನು 1969 ರಲ್ಲಿ ಪಡೆದುಕೊಂಡಿತು.
1969 ರಲ್ಲಿ ಇಂದಿರಾಗಾಂಧಿ ಈಗಿನ ಕಾಂಗ್ರೆಸ್ಸಿಗಿಂತ ಹಲವಾರು ಪಟ್ಟು ಹೆಚ್ಚು ಪುರೋಗಾಮಿ ನೀತಿಗಳ ಭರವಸೆಯನ್ನು ನೀಡಿತ್ತು. 20 ಅಂಶಗಳ ಕಾರ್ಯಕ್ರಮ, ಭೂ ಸುಧಾರಣೆ, ಬ್ಯಂಕ್ ರಾಷ್ಟ್ರೀಕರಣ ಇತ್ಯಾದಿ. ಅದನ್ನು ನೋಡಿಯೇ ಆಗಿನ ಭಾರತ ಕಮ್ಯುನಿಸ್ಟ್ ಪಕ್ಷದ ಕುಮಾರ ಮಂಗಳಂ ಕಾಂಗ್ರೆಸ್ಸಿಗೆ ಬೇಶರತ್ ಬೆಂಬಲ ಕೊಡುವುದು ಮಾತ್ರವಲ್ಲ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಗಿ ಕಾಂಗ್ರೆಸ್ಸಿನೊಳಗಿನ ಎಡಶಕ್ತಿಗಳನ್ನು ಗಟ್ಟಿಗೊಳಿಸಬೇಕು ಎಂಬ ಸಿದ್ಧಾಂತವನ್ನು ಮಂಡಿಸಿದ್ದರು. ಆದರೆ 1972 ರ ಚುನಾವಣೆಯ ನಂತರ ಇಂದಿರಾ ಸರ್ಕಾರ ಅನುಸರಿಸಿದ್ದು ಭಾರತದ ಬೃಹತ್ ಉದ್ದಿಮೆಪತಿ ಟಾಟಾ ನೀಡಿದ TATA Memorandum ಅನ್ನೆ ಹೊರತು ಎಡ ಅಜೆಂಡಾಗಳನ್ನಲ್ಲ.
ಮತ್ತೊಬ್ಬ ಉದ್ಯಮಪತಿ ಬಿರ್ಲಾ 1969 ರ ಉದ್ಯಮಪತಿಗಳ ಸಮ್ಮೇಳನವೊಂದರಲ್ಲಿ :
” ಇಂದಿರಾ ಗಾಂಧಿಯವರು ಎಷ್ಟೆ ಸಮಾಜವಾದಿ ಪದಪುಂಜಗಳನ್ನು ಬಳಸಿದರೂ, ಕಾಂಗ್ರೆಸ್ ಪಕ್ಷವೇ ಜನಸಂಘಕ್ಕಿಂತ, ಸ್ವತಂತ್ರ ಪಾರ್ಟಿಗಿಂತ ಎಡ ರಾಜಕೀಯದ ವಿರುದ್ಧವಾಗಿರುವರೂ ಮತ್ತು ಉದ್ಯಮಪತಿಗಳ ಆಸಕ್ತಿಗಳ ಪರವಾಗಿರುವವರು ಎಂಬುದನ್ನು ಮರೆಯಬಾರದು” ಎಂದು ಸ್ಪಷ್ಟಪಡಿಸಿದ್ದರು.
ಆ ನಂತರದ ತುರ್ತುಸ್ಥಿತಿ ಎಲ್ಲರಿಗೂ ಗೊತ್ತಿರುವ ವಿಷಯ. 1980 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾಗಾಂಧಿ ಹಿಂದಿನ ತನ್ನ ಎಲ್ಲಾ ಸಮಾಜವಾದಿ ಭಾಷೆಗಳನ್ನು ಸಂಪೂರ್ಣವಾಗಿ ತೊರೆದರು. ಹಾಗೆ ನೋಡಿದರೆ ” ಹಿಂದೂ ಮತ್ತು ದೇಶ ಆತಂಕದಲ್ಲಿದೆ”, ” ಅದನ್ನು ಉಳಿಸಲು ಹಿಂದುಪರ ಬಲಿಷ್ಟ ರಾಜಕೀಯ ನಾಯಕತ್ವ ಬೇಕಿದೆ” ಎಂಬ ರಾಜಕೀಯವನ್ನು ಮೊದಲು ಕಾಶ್ಮೀರದಲ್ಲಿ ಹಾಗೂ ಪಂಜಾಬಿನಲ್ಲಿ ಸಾರ್ವಜನಿಕಗೊಳಿಸಿದ್ದೇ ಇಂದಿರಾಗಂಧಿಯವರು. ಅದನ್ನು ಕಂಡು ಆರೆಸ್ಸೆಸ್ ಆಗಿನ ಸರಸಂಘಚಾಲಕ ಬಾಳಸಾಹೇಬ್ ದೇವರಸ್ ತಮ್ಮ ಹಿಂದು ಅಜೆಂಡಾ ವನ್ನು ಬಿಜೆಪಿಗಿಂತ ಕಾಂಗ್ರೆಸ್ಸೆ ಚೆನ್ನಾಗಿ ಜಾರಿಗೆ ತರುತ್ತಿದೆಯೆಂದು 1984 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪರೋಕ್ಷ ಬೆಂಬಲವನ್ನೂ ಘೊಷಿಸಿದ್ದರು.
1985 ರಲ್ಲಿ ರಾಜೀವ್ ಗಾಂಧಿ ಬಾಬ್ರಿ ಮಸೀದಿಯ ಬೀಗವನ್ನು ತೆಗೆದು ಅಧಿಕೃತವಾಗಿ ರಾಮಮಂದಿರ ರಾಜಕಾರಣವನ್ನು ಉದ್ಗಾಟಿಸಿಬಿಟ್ಟರು. 985 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಶೇ. 49 ರಷ್ಟು ಓಟುಗಳು ಬಿದ್ದಿದ್ದರೆ ಬಿಜೆಪಿಗೆ ಕೇವಲ ಶೇ. 7 ರಷ್ಟು ಓಟುಗಳು ದಕ್ಕಿದ್ದವು. ಆದರೆ ಅ ನಂತರ ಬಿಜೆಪಿ ರಾಮಮಂದಿರ ರಾಜಕಾರಣವನ್ನು ಮೆಟ್ಟಿಲಾಗಿ ಮಾಡಿಕೊಂಡು ಸಮಾಜವನ್ನು ಮತೀಯವಾಗಿ ಧ್ರುವೀಕರಿಸಿಬಿಟ್ಟಿತು. ಇದಕ್ಕೆ ಕಾಂಗ್ರೆಸ್ಸಿನ ಮತ್ತು ಆ ನಂತರದ ಇತರ ಮಧ್ಯಮಮಾರ್ಗಿ ವಿರೋಧ ಪಕ್ಷಗಳ ರಾಜಿಕೋರ ಅವಕಾಶವಾದಿ ನೀತಿಗಳ ಅವಕಾಶ ಮಾಡಿಕೊಟ್ಟವು.
1991 ರ ನಂತರ ಕಾಂಗ್ರೆಸ್ ನೇತೃತ್ವದಲ್ಲೇ, ಇತರ ಎಲ್ಲಾ ಪಕ್ಷಗಳ ಸಮ್ಮತಿಯೊಂದಿಗೆ ಜಾರಿಯಾದ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಹಾಗೂ ಕಾರ್ಪೊರೇಟ್ ಪರ ಆರ್ಥಿಕ ವ್ಯವಸ್ಥೆ ಜನರನ್ನು ಮತ್ತಷ್ಟು ಅಸಹಾಕರನ್ನಾಗಿಸಿತು ಮತ್ತು ಅನಾಥರನ್ನಾಗಿಸಿತು. ಬಂಡಾವಾಳಶಾಹಿಗಳನ್ನು ಮತ್ತು ಬ್ರಾಹ್ಮಣಶಾಹಿಗಳನ್ನು ಬಲಿಷ್ಟಗೊಳಿಸಿತು. ಈ ಅತಂತ್ರದ ಪರಿಸ್ಥಿತಿಯಲ್ಲಿ ಬ್ರಾಹ್ಮಣಶಾಹಿ ಹಾಗೂ ಬಂಡವಾಳಾಶಾಹಿಯ ವಿರುದ್ಧ ಸಮರಶೀಲ ಹೋರಾಟ ಕಟ್ಟುತಾ ಜನರಲ್ಲಿ ವಿಶ್ವಾಸ ಮತ್ತು ಭರವಸೆ ಮೂಡಿಸಬೇಕಿದ್ದ ಸಮತಾವಾದಿ ಶಕ್ತಿಗಳು ಒಂದೋ ಸಮರಶೀಲ ಹೋರಾಟಕ್ಕೆ ಮುಂದಾಗದೆ ಅಪ್ರಸ್ತುತಗೊಳ್ಳುತ್ತಾ, ಅಮಾನ್ಯಗೊಳ್ಳುತ್ತಾ ಹೋದವು. ಅಥವಾ ಚುನಾವಣ ರಾಜಕಾರಣದ ರಾಜಿ-ಕಬೂಲಿಗಳಿಗೆ ಪಕ್ಕಾಗುತ್ತಾ ಅವಕಾಶವಾದಿಗಳಾಗಿ ಯಥಾಸ್ಥಿತಿವಾದಿಗಳಾಗಿಬಿಟ್ಟವು.
ಪ್ರತಿರೋಧ ಪಾಳಯದಲ್ಲಿದ್ದ ಈ ಶೂನ್ಯವನ್ನು ಸಂಘಪರಿವಾರ ತನ್ನ ದ್ವೇಷ ರಾಜಕಾರಣದ ಮೂಲ ತುಂಬಿತು. ದೇಶವನ್ನು ಸಂಪೂರ್ಣವಾಗಿ ದಾರಿ ತಪ್ಪಿಸಿತು
ಹಿಂದೂ ಮತ್ತು ದೇಶ ಆತಂಕದಲ್ಲಿದ್ದಾನೆ ಎಂಬ ಇಂದಿರಾಗಂಧಿಯವರ ಮೃದು ಹಿಂದೂತ್ವವಾದಿ ರಾಜಕಾರಣವನ್ನು ಮೊದಲು ವಾಜಪೇಯಿ ಮತ್ತು ಅದ್ವಾನಿ ಮತ್ತು ಆ ನಂತರ ನರೇಂದ್ರ ಮೋದಿ- ಆದಿತ್ಯನಾಥ್ ಉಗ್ರ ಹಿಂದೂ ರಾಷ್ಟ್ರ ರಾಜಕಾರಣವನ್ನಾಗಿ ಬೆಳೆಸಿಬಿಟ್ಟರು. ಹೀಗಾಗಿ ಮೂವತ್ತು ವರ್ಷಗಳ ನಂತರ ಶೇ. 49 ರಷ್ಟು ಓಟುಗಳನ್ನು ಪಡೆದಿದ್ದ ಕಾಂಗ್ರೆಸ್ 2019 ರ ಚುನಾವನೆಯಲ್ಲಿ ಶೇ. 19 ರಷ್ಟು ಮತಬೆಂಬಲವನ್ನು ಮಾತ್ರ ಪಡೆದುಕೊಂಡರೆ , 1985 ರಲ್ಲಿ ಕೇವಲ ಶೇ.7 ರಷ್ಟು ಮತಗಳನ್ನು ಮಾತ್ರ ಪಡೆದುಕೊಂಡಿದ್ದ ಬಿಜೆಪಿ 2019 ರಲ್ಲಿ ಶೇ. 37 ರಷ್ಟು ಮತಗಳನ್ನು ಪಡೆದುಕೊಂಡಿತು.
ಕರ್ನಾಟಕದಲ್ಲಿ 1989 ರಲ್ಲಿ ಕಾಂಗ್ರೆಸ್ಸಿಗೆ ಶೇ. 43.78 ರಷ್ಟು ಮತಗಳು ಮತ್ತು 178 ಸೀಟುಗಳು ದಕ್ಕಿದ್ದವು. ಬಿಜೆಪಿ ಕೇವಲ ಶೇ. 4.4 ರಷ್ಟು ಮತಗಳನ್ನು ಮತ್ತು 4 ಸೀಟುಗಳನ್ನು ಪಡೆದುಕೊಂಡಿತ್ತು. ಈ ಚುನಾವಣೆಯಲ್ಲೂ ಕೇವಲ 66 ಸೀಟುಗಳನ್ನು ಪಡೆದುಕೊಂಡಿದ್ದರೂ ಶೇ.36 ರಷ್ಟು ಓಟು ಶೇರುಗಳನ್ನು ಗಟ್ಟಿಮಾಡಿಕೊಡಿದೆ.
ಹಾಗೂ 1989-94, 94-99, 99-2004, 2004-06ರ ಅವಧಿಗಳಲ್ಲಿ ವಿರೋಧ ಪಕ್ಷವಾಗಿ ಇಡೀ ಕರ್ನಾಟಕದಲ್ಲಿ ಹಿಂದೆಂದೂ ಇಲ್ಲದಷ್ಟು ಮತೀಯ ಧ್ರುವೀಕರಣವನ್ನು ಮಾಡಿಬಿಟ್ಟಿತು. ಅದನ್ನು ಅಧಿಕಾರದಲ್ಲಿದ್ದ ಯಾವ ಪಕ್ಷಗಳು ಸಮರ್ಥವಾಗಿ ಹಿಮ್ಮೆಟಿಸಲಿಲ್ಲ. ಬಾಬಾಬುಡನ್ ದರ್ಗ ದಂಥ ವಿಷಯಗಳಲಿ ಕಾಂಗ್ರೆಸ್ಸಿನ ಮಂತ್ರಿಗಳೇ ಹಿಂದುತ್ವ ವಾದಿ ದತ್ತಪೀಠ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಅದಕ್ಕೆ ಮಾನ್ಯತೆ ತಂದುಕೊಟ್ಟರು. ಕರಾವಳಿಯಂತೂ ಕಂಗ್ರೆಸ್ಸಿನ ಕಾಲದಲ್ಲೂ ಅನಧಿಕೃತವಾಗಿ ಕಲ್ಲಡಕ ರಿಪಬ್ಲಿಕ್ ಆಗಿಯೇ ಮುಂದುವರೆದಿತ್ತು. 2008-13, 2019-23 ರಲ್ಲಿ ಅಧಿಕಾರಕೆ ಬಂದ ಬಿಜೆಪಿ ಸರ್ಕಾರ ಆರೆಸ್ಸೆಸ್ಸಿನ ಶಾಕಾ ಕಚೇರಿಯಾಗಿ ಕೆಲಸ ಮಾಡಿತು. 2013-18 ರ ನಡುವೆ ವಿರೋಧ ಪಕ್ಷವಾಗಿ ಅತಿ ಹೆಚ್ಚು ಕೋಮು ಗಲಭೆಗಳನ್ನು ಹುಟ್ಟುಹಾಕಿದ್ದು ಮಾತ್ರವಲ್ಲದೆ ಕಾಂಗ್ರೆಸ್ಸಿನ ಹಯಾಮಿನಲ್ಲೂ ಹಲವಾರು ಸರ್ಕಾರಿ ಸಂಸ್ಥೆಗಳನ್ನು ಅಧಿಕೃತವಾಗಿ ಕೇಸರೀಕರಿಸಿಬಿಟ್ಟಿತು. ಹೀಗಾಗಿ ಅತ್ಯಂತ ಹೀನಾಯವಾಗಿ ಸೋತರೂ ಅದಕ್ಕೀಗ ಶೇ. 36 ರಷ್ಟು ಓಟು ಶೇರು ಅಥವಾ ಸಾಮಾಜಿಕ ಶಕ್ತಿ ಇದೆ.
ಇದು ವಿರೋಧಪಕ್ಷವನಾಗಿಯೂ ಬಿಜೆಪಿಯನ್ನು ಅಪ್ರಸ್ತುತಗೊಳಿಸದಿದ್ದರೆ ಅಗುವ ಅಪಾಯ
ಎಡಗೈಯಲ್ಲಿ ಗ್ಯಾರಂಟಿಯ ಮುಲಾಮು, ಬಲಗೈಯಲ್ಲಿ ಕಾರ್ಪೊರೇಟ್ ಕತ್ತಿ?
ಈ ಚುನಾವಣೆಯಲ್ಲಿ ಬಿಜೆಪಿಯ ಹಿಂದೂತ್ವದ ನೀತಿ, ದ್ವೇಷ ರಾಜಕಾರಣ, ಕಾರ್ಪೊರೇಟ್ ಪರ ನೀತಿ, ಭ್ರಷ್ಟಾಚಾರ ಇತ್ಯಾದಿಗಳಿಂದ ಜನರಲ್ಲಿ ಉಂಟಾಗಿದ್ದ ಅಸಮಾಧಾನ ಹಾಗೂ ಕಾಂಗ್ರೆಸ್ ನೀಡಿದ ಭರವಸೆಗಳ ಗ್ಯಾರಂಟಿಗಳು, ದಮನಿತ ಸಮುದಾಯಗಳು ಅತ್ಯಂತ ವಿವೇಕಯುತವಾಗಿ ಮಾಡಿದ ಮತದಾನ ಈ ಎಲ್ಲಾ ಕಾರಣದಿಂದ ಬಿಜೆಪಿಯ ಸೀಟು ಶಕ್ತಿ ಕುಸಿದು ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ಸಿನ ಗ್ಯಾರಂಟಿಗಳು ಒಂದೊಂದಾಗಿ ಜಾರಿಯಾಗುತ್ತಿರುವುದರಿಂದ ಸದ್ಯಕ್ಕೆ ಬಿಜೆಪಿ ಸಮಯ ಕಾಯುತ್ತಿದೆ.
ಗ್ಯಾರಂಟಿಗಳು ಅರ್ಥಾತ್ ಜನಕಲ್ಯಾಣ ಕಾರ್ಯಕ್ರಮಗಳು ಪ್ರಜಾತಂತ್ರದ ಭಾಗ. ಸಂವಿಧಾನದಲ್ಲಿ ನೀಡಿರುವ ಭರವಸೆಗಳ ಈಡೇರಿಕೆಯೆಡೆಗಿನ ಹೆಜ್ಜೆ. ಮತ್ತು ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ದುರ್ಬಲ ಸಮುದಾಯಗಳನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲೀಕರಿಸುವ ಹೆಜ್ಜೆಗಳೆಂಬುದರಲ್ಲಿ ಸಂಶಯವಿಲ.
ಹಾಗೆ ನೋಡಿದರೆ ಯಶಸ್ವೀ ಪ್ರಜಾಪ್ರಭುತ್ವಗಳಾದ ನಾರ್ವೆ, ಸ್ವೇಡನ್, ಪಶ್ಚಿಮ ಯೋರೋಪಿನ ಬಹುಪಾಲು ದೇಶಗಳು, ಈ ಹಿಂದಿನ ಸಮಾಜವಾದಿ ದೇಶಗಳಲ್ಲೂ ಪ್ರಭುತ್ವವೇ ಜನರ ಶಿಕ್ಷಣ, ಆರೋಗ್ಯ, ವಸತಿ ಮತ್ತಿತರ ಎಲ್ಲಾ ವೆಚ್ಚಗಳನ್ನು ವಹಿಸಿಕೊಂಡಿದ್ದವು. ಅದನ್ನು ಮಾನವ ಸಂಪನ್ಮೂಲದ ಮೇಲೆ ಮಾಡಿರುವ ಬಂಡವಾಳ ಹೂಡಿಕೆಯೆಂದೇ ಭಾವಿಸಿದ್ದವು. ಅದಕ್ಕೆ ಹೋಲಿಸಿದಲ್ಲಿ ಈ ಗ್ಯಾರಂಟಿಗಳು ಏನೂ ಇಲ್ಲ. ಹೀಗಾಗಿ ಗ್ಯಾರಂಟಿಗಳಿಂದ ಆರ್ಥಿಕ ವಿನಾಶ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿರುವವರು ಆಶಾಧಭೂತಿಗಳು ಮತ್ತು ಜನವಿರೋಧಿಗಳು ಅಷ್ಟೆ.
ಆದರೆ ಆ ದೇಶಗಳಲ್ಲಿ ಅವಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಆ ದೇಶಗಳು ಶ್ರೀಮಂತರಿಗೆ ಆಸ್ತಿವಂತರಿಗೆ ಹೆಚ್ಚಿನ ತೆರಿಗೆ ಹಾಕುವ ಮೂಲಕ ಸಂಗ್ರಹಿಸುತ್ತಿದ್ದವು. ಮತ್ತು ಆ ದೇಶಗಳು ಒಂದು ಬಗೆಯಲ್ಲಿ ಸಾಮ್ರಾಜ್ಯ ಶಾಹಿ ದೇಶಗಳೂ ಆಗಿರುವುದರಿಂದ ಬಡದೇಶಗಳ ಸಂಪನ್ಮೂಲಗಳನ್ನು ಇಂದಿಗೂ ಬಗೆಬಗೆಯಲ್ಲಿ ಲೂಟಿ ಹೊಡೆಯುತ್ತಾ ತಮ ದೇಶದ ಆದಾಯವನ್ನು ಜಾಸ್ತಿ ಮಾಡಿಕೊಂಡು ಅದರ ಒಂದು ಭಾಗವನ್ನು ಜನರ ಜೊತೆ ಹಂಚಿಕೊಳ್ಳುತ್ತಿವೆ.
ಆದರೆ 1991 ರ ನಂತರದಲ್ಲಂತೂ ಭಾರತದ ಆರ್ಥಿಕತೆ ಸಂಪೂರ್ಣವಾಗಿ ಜನವಿರೋಧಿಯಾಗಿ ಕಾರ್ಪೊರೇಟ್ ಪರವಾಗಿ ಮಾರ್ಪಟ್ಟಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಶ್ರೀಮಂತರ ಮೇಲಿನ ತೆರಿಗೆ ಕಡಿಮೆಯಾಗಿ ಬಡಜನರನ್ನು ಸುಲಿಗೆ ಮಾಡುವ ಪರೊಕ್ಷ ತೆರಿಗೆ ಹೆಚ್ಚು ಮಾಡಿವೆ. ಜಿಎಸ್ಟಿ ಬಡಜನರ ತೆರಿಗೆ ಸುಲಿಗೆಯ ಪರಮ ದುಷ್ಟ ರೂಪ. ಅದನ್ನು ಎಲ್ಲಾ ಪಕ್ಷಗಳ ಒಪ್ಪಿಗೆಯಿಂದಲೇ ಜಾರಿ ಮಾಡಲಾಗಿದೆ. ಭಾರತದಲಿ ಶ್ರೀಮಂತರ ಮೇಲೆ ಆದಾಯ ಮತ್ತು ಕಾರ್ಪೊರೇಟ್ ತೆರಿಗೆ ವಿಧಿಸುವ ಪರಮಾಧಿಕಾರ ಕೇಂದ್ರದ್ದು. ರಾಜ್ಯಗಳಿಗೆ ಆ ಅಧಿಕಾರವಿಲ್ಲ. ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಮತ್ತು ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಗೆ ಪೂರಕವಾದ ಪರಿಸರ ಒದಗಿಸಬೇಕು ಎನ್ನುವುದೇ 1991 ರ ನಂತರ ಬಿಜೆಪಿ-ಕಾಂಗ್ರೆಸ್ ಎಲ್ಲಾ ಪಕ್ಷಗಳು ಅನುಸರಿಸುತ್ತಿರುವ ಆರ್ಥಿಕ ನೀತಿ.
ವಾಸ್ತವವಾಗಿ ಇಂಥಾ ಕಾರ್ಪೊರೇಟ್ ಪರ ನೀತಿಗಳ ಪ್ರಹಾರದಿಂದಲೇ ಬಡಜನರ ಬದುಕಿನ ಮೇಲೆ ಗಾಯಗಳಾಗುತ್ತಿವೆ. ಬಿಜೆಪಿ ಸರ್ಕಾರ ಇಂಥಾ ಕಾರ್ಪೊರೇಟ್ ಕತ್ತಿ ಹಿರಿದು ಗಾಯ ಮಾಡುತ್ತಿತ್ತೇ ವಿನಾ ಮುಲಾಮನ್ನು ಸವರುತ್ತಿರಲಿಲ್ಲ. ಬದಲಿಗೆ ಆ ಗಾಯಗಳಿಗೆ ಕಾರ್ಪೊರೇಟ್ ಗಳು ಕಾರಣವಲ. ಮುಸ್ಲಿಮರು ಎನ್ನುತ್ತಿತ್ತು.
ಆದರೆ ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಮೂಲಕ ಮುಲಾಮನ್ನೇನೋ ಸವರುತ್ತಿದೆ. ಅಷ್ಟರಮಟ್ಟಿಗೆ ಅದು ಬಿಜೆಪಿಗಿಂತ ವಾಸಿ. ಆದರೆ ಕಾಂಗ್ರೆಸ್ಸಿನ ಮತ್ತೊಂದು ಕೈಯಲ್ಲಿ ಕಾರ್ಪೊರೇಟ್ ಕತ್ತಿ ಇದೆ. ಅರ್ಥಾತ್ ಕಾಂಗ್ರೆಸ್ಸೂ ಕೂಡ ಬಡಜನರ ಬವಣೆಗಳಿಗೆ ಕಾರಣವಾಗಿರುವ ಕಾರ್ಪೊರೇಟ್ ಪರ ನೀತಿಗಳನ್ನೇ ಅನುಸರಿಸುತ್ತಿದೆ.
ಉದಾಹರಣೆಗೆ ಕರ್ನಾಟಕದ ಜಿಡಿಪಿಯ ಶೇ. 36 ರಷು ಭಾಗ ಬರುತ್ತಿರುವುದು ಬೆಂಗಳೂರಿನಲ್ಲಿ ಕೇಂದ್ರೀಕ್ರುತವಾಗಿರುವ ಬಂಡವಾಳಶಾಹಿ ಸೇವಾ ಕ್ಶೇತ್ರಗಳಿಂದ. ಕರ್ನಾಟಕದ ತೆರಿಗೆ ಆದಾಯ ಜಾಸ್ತಿಯಾಗಬೇಕೆಂದರೆ ಈ ಕಾರ್ಪೊರೇಟ್ ಬಂಡವಾಳಿಗರ ಸುಲಿಗೆ ಇನ್ನಷ್ಟು ಸುಗಮವಾಗಬೇಕು. ಅದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ರಾಜ್ಯ ಸರ್ಕಾರ ಬಡವರಿಂದ ಕಿತ್ತು (ಭೂಮಿ, ತೆರಿಗೆ ರಿಯಾಯತಿ, ವಿನಾಯತಿ ಇತ್ಯಾದಿಗಳನ್ನು )ಕೊಡಬೇಕು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗ್ಯಾರಂಟಿ ಗಳಿಗೆ ಸಂಪನ್ಮೂಲ ಕ್ರೂಡೀಕರಣಕ್ಕೆ ಈ ವಹಿವಾಟಿನ ಹೆಚ್ಚಳವನ್ನು ಒಂದು ಮಾರ್ಗವನ್ನಾಗಿ ಪರಿಗಣಿಸಿದ್ದಾರೆ. ಅಂದರೆ ಮುಲಾಮು ಮತ್ತು ಗಾಯ ಎರಡೂ ಹೆಚ್ಚಾಗಲಿದೆ.
ಹಾಗೆಯೇ ಗೃಹಜ್ಯೋತಿಯಡಿ ಮನೆಗಳಿಗೆ ವಿದ್ಯುತ್ ಶುಲ್ಕ ರದ್ದಾದರೂ, ವಿದ್ಯುತ್ ದರ ವನ್ನು ಎರಡು ಎರಡು ಪಟ್ಟು ಹೆಚ್ಚಿಸಿರುವುದರಿಂದ ಸಣ್ನಪುಟ್ಟ ಅಂಗಡಿಗಳಿಗೆ ಮತ್ತು ಸಣ್ಣಪುಟ್ಟ ಉದ್ಯಮಗಳ ಲಾಭದ ದರ ಕುಸಿದು ಮುಚ್ಚುವ ಹಂತಕೆ ಬರಲಿದೆ. ಫ಼್ಯಾಕ್ಟರಿಯ ಬೆಳಕು ಮುಚ್ಚಿ, ಮನೆಯ ಬೆಳಕು ಬೆಳಗುವುದು ಗೃಹಜ್ಯೋತಿ ಆಗುವುದಿಲ್ಲ.
ಅಂದರೆ ಗಾಯ ಮುಂದುವರೆಯಲಿದೆ.
ಆದರೆ ಸರ್ಕಾರದ ಆದೇಶಕ್ಕೆ ಒಳಪಡದ ಆದರೆ ದೈತ್ಯ ಖಾಸಗಿ ವಿದ್ಯುತ್ ವಿತರಣಾ ಕಂಪನಿಗಳ ಹಿತಾಸಕ್ತಿ ಕಾಯುವ KERC ಯಂಥ ಸಂಸ್ಥೆಗಳ ರಚನೆ ಮಾಡಿದ್ದೇ ಕಾಂಗ್ರೆಸ್ಸ್ ಪಕ್ಷ. ಎಲ್ಲಿಯತನಕ ಗಾಯ ಮಾಡುವ KERC ಯ ಕತ್ತಿಯನ್ನು ಕಿತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಗೃಹಜ್ಯೊತಿಯಂಥ ಮುಲಾಮಿಗೆ ಹೆಚ್ಚಿಗೆ ಅರ್ಥವಿರಲ್ಲ.
ಜನಚಳವಳಿಗಳು ಗ್ಯಾರಂಟಿಯಾಗಬೇಕಿದೆ
ಮತ್ತೊಂದು ಕಡೆ ಗ್ಯಾರಂಟಿ ಗಳಿಗಾಗಿ ಇತರ ಜನಪರ ಯೋಜನೆಗಳನ್ನು ಅಮಾನತ್ತಿನಲ್ಲಿಡುವ ಅಥವಾ ಹೊಸ ಯೋಜನೆಗಳನ್ನು ಜಾರಿ ಮಾಡದ ಪ್ರಸ್ತಾಪಗಳು ಚರ್ಚೆಯಲ್ಲಿವೆ. ಹಾಗೆಯೇ ರಾಜ್ಯದ ಸ್ವಂತ ಆದಾಯದ ಮೂಲಗಳಲ್ಲಿ ಒಂದಾದ ಅಬ್ಕಾರಿ ಮತ್ತು ಆಸ್ತಿ ತೆರಿಗೆಗಳನ್ನು ಗ್ರಾಮಮಟ್ಟದಲ್ಲೊ ಹೆಚ್ಚಿಸುವ ಪ್ರಸ್ತಾಪಗಳಿವೆ. ಏಕೆಂದರೆ ಗ್ಯಾರಂಟಿ ಗಳಿಗಾಗಿ 59,000 ಕೋಟಿಯಷ್ಟು ಹೆಚ್ಚುವರಿ ಸಂಪನ್ಮೂಲದ ಅಗತ್ಯವಿದೆ.
ಆದರೆ ಅದೇನೂ ದೊಡ್ಡದಲ್ಲ. ಅಶ್ಟನ್ನು ಬೆಂಗಳೂರಿನಲ್ಲಿ ಸ್ವೇವಾ ಕ್ಷೇತ್ರಗಳಿಂದ ಮತ್ತು ಸಾಫ಼್ಟ್ ವೇರ್ ರಫ಼್ತು ಉದ್ಯಮಗಳಿಂದ ಬಿಲ್ಯನೇರ್ ಗಳಾಗಿರುವ ಶ್ರೀಮಂತರ ಮೇಲೆ ಕೇವಲ ಶೇ.1 ರಷ್ಟು ತೆರಿಗೆಯನ್ನು ಹೆಚ್ಚು ಮಾಡಿದರೂ ಸಂಗ್ರಹಿಸಬಹುದು.
ಆದರೆ ಅಂಥಾ ಯೋಜನೆ ಕಾಂಗ್ರೆಸ್ಸಿಗೂ ಇಲ್ಲ. ರಾಜ್ಯ ಸರ್ಕಾರಗಳಿಗೆ ಅಂಥಾ ಅಧಿಕಾರವೂ ಇಲ್ಲ.
ಹೀಗಿರುವಾಗ ರಾಜ್ಯ ಸರ್ಕಾರ ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗೈಯಲ್ಲಿ ವಾಪಸ್ ಪಡೆಯುವ ಯೋಜನೆಗಳಿಗೆ ಮುಂದಾಗಬೇಕು. ಅದರಿಂದ ಉಂಟಾಗುವ ಅಸಮಾಧಾನದ ದುರ್ಲಾಭವನ್ನು ಸಂಪೂರ್ಣವಾಗಿ ಬಿಜೆಪಿ ಪಡೆಯುವ ಹುನ್ನಾರವನ್ನು ನಡೆಸುತ್ತಿದೆ. ಈ ಅಸಮಾಧಾನವನ್ನು ಕೋಮುವಾದೀಕರಿಸುವ ಪ್ರಯತ್ನಗಳನ್ನು ಮಾಡುತ್ತದೆ. ಈಗಾಗಲೇ ಗ್ಯಾರಂಟಿಗಳಿಗೆ ಶರತ್ತನ್ನು ವಿಧಿದುವ ಕಾಂಗ್ರೆಸ್ ಪಕ್ಷ ಹಜ್ ಗೆ 5000 ಕೋಟಿ ಕೊಟ್ಟಿದೆ ಎಂಬ ಸುಳ್ಳು ಪುಕಾರನ್ನು ಹಬ್ಬಿಸಿತ್ತು.
ಹೀಗಾಗಿ ಕಾಂಗ್ರೆಸ್ಸಿನ ನವ ಉದಾರಾವಾದಿ ಆರ್ಥಿಕತೆಯ ಚೌಕಟ್ಟು ಗ್ಯಾರಂಟಿ ಜಾರಿಯಲ್ಲಿ ಹುಟ್ಟುಹಾಕುವ ವೈರುಧ್ಯಗಳನ್ನು ಮತ್ತು ವೈಫ಼ಲ್ಯಗಳನ್ನು ಬಿಜೆಪಿ ತಮ್ಮ ಕೋಮುವಾದೀ ರಾಜಕಾರಣಕ್ಕೆ ಬಳಸಿಕೊಳ್ಳುತ್ತದೆ. ಜನರ ಅಸಮಾಧನದ ದುರ್ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತದೆ.
ಆದರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಅದನ್ನು ಪರಿಹರಿಸಲು ಸಹಜವಾಗಿಯೇ ಸಾಧ್ಯವಿಲ್ಲ.
ಅದಕ್ಕೆ ಪರಿಹಾರವಿರುವುದು ಆರ್ಥಿಕತೆ ಮತ್ತು ಸಮಾಜ ನವ ಉದಾರವಾದೀ ಚೌಕಟ್ಟನ್ನು ಮೀರಿ ಮತ್ತಷ್ಟು ಪ್ರಜಾತಂತ್ರೀಕರಣಗೊಳ್ಳುವುದರಲ್ಲಿ ಮಾತ್ರ.
ಜನರ ಅಸಮಾಧಾನಗಳು ಕೋಮುವಾದೀಕರಣಗೊಳ್ಳದೆ ಇನ್ನಷ್ಟು ಪ್ರಜಾತಾಂತ್ರೀಕರಣದೆಡೆಗೆ ಕೊಂಡೊಯ್ಯುವುದು ಜನಚಳವಳಿಗಳಿಗೆ ಮಾತ್ರ ಸಾಧ್ಯ. ಆಗ ಮಾತ್ರ ಜನರ ಅಸಮಾಧಾನ ಬಿಜೆಪಿಗೆ ಲಾಭವಾಗುವುದು ತಪ್ಪುತ್ತದೆ.
ಆ ಕಾರಣದಿಂದಾಗಿಯೇ ಜನಚಳವಳಿಗಳೂ ಗ್ಯಾರಂಟಿಯಾಗಬೇಕಿದೆ.
ಅಲ್ಲವೇ?




