✍️ ಗಿರೀಶ್ ತಾಳಿಕಟ್ಟೆ
ಎಂಬತ್ತರ ದಶಕದ ಕನ್ನಡ ಸಿನಿಮಾಗಳಲ್ಲಿ ಬಹುಪಾಲು ಒಂದು ಕಾಮನ್ ಸೀನ್ ಇರುತ್ತಿತ್ತು… ಅವೆಲ್ಲ ವ್ಯವಸ್ಥೆಯ ವಿರುದ್ದದ ರೆಬೆಲ್ ಶೈಲಿಯ ಸಿನಿಮಾಗಳು. ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಥರದ ಸ್ಟಾರ್ ನಟರುಗಳು ಪ್ರವರ್ಧಮಾನಕ್ಕೆ ಬಂದಿದ್ದೇ ಅಂಥಾ ಆ್ಯಂಗ್ರಿ ಯಂಗ್ ಮ್ಯಾನ್ ಪಾತ್ರಗಳಿಂದ. ಸೀನ್ ಏನು ಅಂದ್ರೆ.. ಒಂದು ನ್ಯಾಯಬೆಲೆ ಅಂಗಡಿ ಮುಂದೆ ಜನ ರೇಷನ್ನಿಗಾಗಿ ಸಾಲುಗಟ್ಟಿ ನಿಂತಿರುತ್ತಾರೆ. ಆದರೆ ಅಂಗಡಿಯವ ಬಾಗಿಲಿಗೆ ‘ನೋ ಸ್ಟಾಕ್’ ಬೋರ್ಡು ತಗುಲಿಹಾಕಿ ಒಳಗೊಳಗೇ ಕಾಳಸಂತೆ ವ್ಯವಹಾರ ಮಾಡುತ್ತಿರುತ್ತಾನೆ. ಆಗ ಎಂಟ್ರಿಕೊಡುವ ಹೀರೊ, ದಢಾರನೆ ಬಾಗಿಲನ್ನು ಒದ್ದು, ಒಳನುಗ್ಗಿ, ಅಕ್ಕಿಮೂಟೆಗಳು ಸ್ಟಾಕ್ ಇರೋದನ್ನು ಕಂಡು, ಅಂಗಡಿಯವನ ಕಾಲರ್ ಹಿಡಿದು ಧಮಕಿ ಹಾಕುತ್ತಾನೆ. ಅವನಿಗೂ, ಅಂಗಡಿಯವನ ಚೇಲಾಗಳಿಗೂ ಒಂದು ಡಿಶುಂ ಡಿಶುಂ ಫೈಟು ನಡೆಯುತ್ತೆ. ಹೀರೋ ಗೆಲ್ಲುತ್ತಾನೆ. ಜನ, ಹೀರೊಗೆ ಜೈಕಾರ ಹಾಕುತ್ತಾರೆ. ಅಂಗಡಿಯವ ತಪ್ಪಾಯ್ತು ಅಂತ ಅಕ್ಕಿ ವಿತರಣೆಗೆ ತೊಡಗುತ್ತಾನೆ.

ವಿಷಯ ಏನಪ್ಪಾ ಅಂದ್ರೆ, ಇವತ್ತು ನಾವು ಅದೇ ದೃಶ್ಯವನ್ನು ಕಾಣುತ್ತಿದ್ದೇವೆ. ಹಲವು ಲಕ್ಷ ಮೆಟ್ರಿಕ್ ಟನ್ನುಗಟ್ಟಲೆ ಅಕ್ಕಿ ಸರ್ಕಾರಿ ಗೋದಾಮುಗಳಲ್ಲಿ ಕೊಳೆಯುತ್ತಾ ಬಿದ್ದಿದ್ದರೂ, ಸನ್ಮಾನ್ಯ ಬಾದ್ಶಾ ಅವರು ನೋ ಸ್ಟಾಕ್ ಬೋರ್ಡು ನೇತುಹಾಕಿಕೊಂಡು ಕೂತಿದ್ದಾರೆ.
ಹೀರೋ ಬರುತ್ತಾನೋ, ವಿಲನ್ನುಗಳಿಗೆ ಹೊದೆಯುತ್ತಾನೋ ಅನ್ನೋದು ಬೇರೆ ಮಾತು, ಆದ್ರೆ ನಮ್ಮನ್ನು, ಅಂದರೆ ದೇಶವನ್ನು ಈ ಜನ ಅನಾಮತ್ತು ಎಂಬತ್ತರ ದಶಕಕ್ಕೆ, ಅರ್ಥಾತ್ ನಲವತ್ತು ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿರುವುದು ಇದರಿಂದ ಸಾಬೀತಾಗುತ್ತೆ!
ಸೈಫೈ ಸಿನಿಮಾದ ಟೈಮ್ ಮಷೀನ್ ಇಲ್ಲದೆಯೂ ನಮ್ಮನ್ನು ಹಿಂದಕ್ಕೆ ಕೊಂಡೊಯ್ದ ಇವತ್ತಿನ ಬಾದ್ಶಾ ಅವರಿಗೆ ಒಂದು ಸಲಾಂ ಹೇಳಲೇಬೇಕು….




