Thursday, November 19, 2026

ಪ್ರಾಯೋಗಿಕ ಆವೃತ್ತಿ

ಅಕ್ಕಿ ನಿರಾಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ‘ಕೈ’ ಪ್ರತಿಭಟನೆ ; ಬಿ.ಸೋಮಶೇಖರ್

ರಾಜ್ಯದಲ್ಲಿ 10ಕೆ.ಜಿ. ಅಕ್ಕಿ ನೀಡಿದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನಪ್ರಿಯತೆ ಬರುತ್ತದೆಂಬ ಒಂದೇ ಕಾರಣಕ್ಕೆ ಅಕ್ಕಿ ನಿರಾಕರಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಜೂ.20ರ ಮಂಗಳವಾರ ಮಂಡ್ಯ ನಗರದಲ್ಲಿ ಜಿಲ್ಲಾ  ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಂದು ಮಾಜಿ ಸಚಿವ ಬಿ.ಸೋಮಶೇಖರ್ ತಿಳಿಸಿದರು.

ಬಡಜನರಿಗೆ ವಿತರಿಸುವ ಅಕ್ಕಿಯನ್ನು ನೀಡದೆ ರಾಜಕೀಯ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ರಾಜ್ಯದ ಎಲ್ಲಾ ಸಂಸದರು ರಾಜೀನಾಮೆ ನೀಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ 10 ಕೆ.ಜಿ. ಅಕ್ಕಿ ನೀಡಿದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನಪ್ರಿಯತೆ ಬರುತ್ತದೆಂಬ ಒಂದೇ ಕಾರಣಕ್ಕೆ ಅಕ್ಕಿ ಕೊಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಅಧಿಕಾರಿಗಳ ಮೂಲಕ ಹೇಳಿಸಿದೆ. ಈ ಹಿನ್ನೆಲೆಯಲ್ಲಿ ಜೂ. 20ರಂದು ಮಂಗಳವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅಕ್ಕಿಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡಬೇಕಿಲ್ಲ. ಅದಕ್ಕೆ ತಗುಲುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದು ಹೇಳಿದರೂ ಅಕ್ಕಿ ಇಲ್ಲ ಎಂಬ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಆರೋಪಿಸಿದರು. ಮಾರುಕಟ್ಟೆಯಲ್ಲಿ 34 ರೂ.ಗಳಿಗೆ ಉತ್ತಮ ಗುಣಮಟ್ಟದ ಅಕ್ಕಿ ದೊರೆಯುವುದಿಲ್ಲ. 60 ರಿಂದ 170 ರೂ. ನೀಡಿ ಬಡವರು ಅಕ್ಕಿ ಕೊಳ್ಳಲಾಗದು. ಇದರಿಂದಾಗಿ ನಾವು ಬಡವರಿಗೆ ಅಕ್ಕಿಯನ್ನೇ ನೀಡಬೇಕಾಗಿದೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ಪಠ್ಯಪುಸ್ತಕದಲ್ಲೂ ಧರ್ಮ ಮತ್ತು ಕೇಸರೀಕರಣ ಮಾಡಲು ಹೊರಟಿದ್ದರು. ಅದನ್ನು ಈಗಾಗಲೇ ನಮ್ಮ ಸರ್ಕಾರ ರದ್ದುಪಡಿಸಿ ಹೊಸ ಪಠ್ಯಪುಸ್ತಕ ವಿತರಣೆಗೆ ಕ್ರಮ ಕೈಗೊಂಡಿದೆ. ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ ಸರ್ಕಾರ ಕೈಗೊಂಡಿದ್ದ ಎಲ್ಲ ಜನವಿರೋಧಿ ನೀತಿಗಳು ವಾಪಸ್ಸು ಪಡೆಯುತ್ತಿದ್ದೇವೆ. ಈಗಾಗಲೇ ನಮ್ಮ ಸರ್ಕಾರ ಘೋಷಣೆ ಮಾಡಿದೆ. ಜನಪರವಾಗಿ ಆಡಳಿತ ನೀಡುವುದು ನಮ್ಮ ಉದ್ದೇಶ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಮಂಗಳವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಪಕ್ಷದ ಎಲ್ಲ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಯುವ ಅಧ್ಯಕ್ಷ ವಿಜಯಕುಮಾರ್, ಒಬಿಸಿ ವಿಭಾಗದ ಅಧ್ಯಕ್ಷ ಕೃಷ್ಣ, ನಗರಸಭಾ ಸದಸ್ಯ ನಯೀಂ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ