Thursday, November 19, 2026

ಪ್ರಾಯೋಗಿಕ ಆವೃತ್ತಿ

ಅಪ್ಪಂದಿರ ದಿನಕ್ಕಾಗಿ…..ನಾನು, ಅಪ್ಪ ಮತ್ತು ತಿರುಪತಿ ಫುಲ್‌ಮೀಲ್ಸ್ ಪ್ರಸಂಗ

✍️ ಗಿರೀಶ್ ತಾಳಿಕಟ್ಟೆ

ಬಡತನಕ್ಕೆ ಹಣವಿಲ್ಲವೆಂಬ ಕೊರಗೊಂದನ್ನು ಬಿಟ್ಟರೆ, ಖುಷಿಪಡಲು ಅಲ್ಲಿಯೂ ಸಾಕಷ್ಟು ಕಾರಣಗಳು ಸಿಗುತ್ತವೆ. ಅದರಲ್ಲೂ ಅಪ್ಪ, ತುಸು ತಮಾಷೆ ಸ್ವಭಾವದವರಾಗಿದ್ದರೆ ಮುಗಿದೇಹೋಯ್ತು, ನಮ್ಮ ಬಾಲ್ಯದ ಖುಷಿಗಳಿಗೆ ಲೆಕ್ಕವೇ ಇರುವುದಿಲ್ಲ. ಅದೃಷ್ಟಕ್ಕೆ, ನನ್ನಪ್ಪ ಅಂತಹ ತಮಾಷೆ ಜೀವಿ. ಹೊರಜಗತ್ತಿಗೆ ಹೇಗೋ ಗೊತ್ತಿಲ್ಲ, ಮಕ್ಕಳಾದ ನಮ್ಮನ್ನು ನಗಿಸಲಿಕ್ಕಾಗಿ ತನ್ನನ್ನು ತಾನು ಜೋಕರ್ ಮಾಡಿಕೊಳ್ಳುವುದರಲ್ಲೂ ಅವರಿಗೆ ಅದೆಂತದೋ ನೆಮ್ಮದಿ. ಮಕ್ಕಳ ನಗು, ತಂದೆಯಾದವನಿಗೆ ಸಿಗುವ ಅತಿದೊಡ್ಡ ಸಂತೃಪ್ತಿ ಅನ್ನೋದು ನಾನೇ ಸ್ವತಃ ತಂದೆಯಾಗಿ ನನ್ನ ಮಕ್ಕಳೊಟ್ಟಿಗೆ ಸಮಯ ಕಳೆಯುವಾಗ ಅರ್ಥವಾಯಿತು. ಅಷ್ಟರಲ್ಲಾಗಲೆ ಅಪ್ಪ, ಅಜ್ಜನಾಗಿದ್ದ.

ಆದರೆ ಈ ಘಟನೆ ನಡೆದಿದ್ದು, ಅಪ್ಪನಿನ್ನೂ ಅಪ್ಪನಾಗಿದ್ದಾಗ, ನಾನಿನ್ನೂ ಮಗುವಾಗಿದ್ದಾಗ. ಬಹುಶಃ ನಾನು ಐದನೇ ಕ್ಲಾಸು ಓದುತ್ತಿರುವ ವಯಸ್ಸಿನವ. ಮನೆದೇವರು ತಿರುಪತಿ ತಿಮ್ಮಪ್ಪನ ಯಾತ್ರೆಗೆ ಹೋಗಿಬರೋದು ಅಂತ ಒಂದು ಬೇಸಿಗೆ ರಜೆಯಲ್ಲಿ ನಿಶ್ಚಯವಾಯಿತು. ಪಕ್ಕದ ನಾಲ್ಕೈದು ಕಿಲೋಮೀಟರು ದೂರದ ಪಟ್ಟಣಕ್ಕೆ ಸಂತೆಗೆ ಹೋಗಿಬರೋದೆ ದೊಡ್ಡ ಫಜೀತಿಯ ಕಾಲ. ಅಂತದ್ದರಲ್ಲಿ ದೂರದ ತಿರುಪತಿಗೆ ಹೋಗುತ್ತೇವೆಂದರೆ, ಅದೂ ರೈಲಿನಲ್ಲಿ! ನಮ್ಮ ಖುಷಿ ಅದಿನ್ನೆಷ್ಟು ಲಂಬಿಸಿರಬೇಡ. ಆದರೆ ಅಪ್ಪನ ಜೇಬಿನಲ್ಲಿ ಕಾಸಿಲ್ಲ, ಹೊರಗಡೆ ಸಾಲ ಹುಟ್ಟುವ ಪರಿಸ್ಥಿತಿಯೂ ಇಲ್ಲ. ಆದರೂ ನಮ್ಮ ಖುಷಿಗಾಗಿ ಹೇಗೋ ಸಾಹಸ ಮಾಡಿ ಹಣ ಹೊಂದಿಸಿ, ಪ್ರಯಾಣ ಹೊರಟೇಬಿಟ್ಟೆವು.

ಜೊತೆಗೆ ನಮ್ಮ ಅತ್ತೆ-ಮಾವನ ಕುಟುಂಬವೂ ಬಂದಿತ್ತು. ವಾಸ್ತವದಲ್ಲಿ ನಮ್ಮನ್ನು ಯಾತ್ರೆಗೆ ಹೊರಡಿಸಿದ್ದೇ ಅವರು. ಮಾವ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಸಾಕಷ್ಟು ಅನುಕೂಲಸ್ತರೇ ಇದ್ದರು. ಅನುಕೂಲಸ್ತರ ಜೊತೆ ಹೋದಾಗ ನಮ್ಮ ಬಡತನವನ್ನು ತೋರಿಸಿಕೊಳ್ಳಲಿಕ್ಕಾಗುವುದಿಲ್ಲ. ಅದು ಸ್ವಾಭಿಮಾನವೋ, ಬಿಗುಮಾನವೋ ಅಥವಾ ಬಡವರ ಪಾಲಿನ ಸಂದಿಗ್ಧತೆಯೋ ತಿಳಿಯದು; ಒಟ್ಟಿನಲ್ಲಿ, ಅವರಿಗೆ ಸರಿಸಮನಾಗಿ ಅಲ್ಲದಿದ್ದರೂ, ತಕ್ಕಮಟ್ಟಿಗಾದರೂ ನಾವು ಉದಾರಿಗಳಂತೆ ಖರ್ಚು ಮಾಡಬೇಕಾಗುತ್ತೆ. ಆದಾಗ್ಯೂ ಅಪ್ಪ ದಾರಿಯುದ್ದಕ್ಕೆ ಬಹಳ ಮಿತವಾಗಿಯೇ ಖರ್ಚು ಮಾಡಿಕೊಂಡು ಬಂದರು.

ಅವತ್ತು ಮಧ್ಯಾಹ್ನ ಗೋವಿಂದರಾಯಸ್ವಾಮಿಯ ದರ್ಶನಕ್ಕೆ ಹೋಗುವ ಮುನ್ನ ನಮ್ಮ ಮಾವ, ’ಯಾವುದಾದರು ಹೊಟೇಲಿನಲ್ಲಿ ಊಟ ಮಾಡಿಕೊಂಡೇ ಹೋಗೋಣ. ದರ್ಶನ ಎಷ್ಟೊತ್ತಾಗುತ್ತೋ ಏನೋ, ಮಕ್ಕಳು ಅಷ್ಟು ಕಾಲ ಹಸಿದುಕೊಂಡಿರಲ್ಲ ಎಂದರು. ಅಪ್ಪನ ಲೆಕ್ಕಾಚಾರವೇ ಬೇರೆಯಿತ್ತು. ದರ್ಶನ ಮುಗಿಸಿಕೊಂಡರೆ, ದೇವಸ್ಥಾನದ ಧರ್ಮಛತ್ರಗಳಲ್ಲಿ ಊಟದ ವ್ಯವಸ್ಥೆಯಿದ್ದರೆ, ಅಲ್ಲೇ ಊಟ ಮಾಡಬಹುದು, ಊಟದ ಖರ್ಚು ಮಿಕ್ಕುತ್ತೆ ಅನ್ನೋದು ಅವರ ಎಣಿಕೆ. ಆದರೆ ಹಾಗಂತ, ತಂಗಿ ಗಂಡನ, ಅದೂ ಪೊಲೀಸ್ ಭಾವನ ಸಲಹೆಯನ್ನು ಅಷ್ಟು ಸುಲಭಕ್ಕೆ ತಳ್ಳಿಹಾಕಲಿಕ್ಕಾಗುತ್ತಾ? ಸರಿ, ಒಂದು ಅನುಕೂಲಕರ ಹೊಟೇಲ್ ಹುಡುಕಿ ಹೊರಟೆವು.

ಅಲ್ಲೊಂದು ಕಡೆ ಕನ್ನಡದಲ್ಲಿ ಬೋರ್ಡ್ ಇತ್ತು (ತಿರುಪತಿ ಆಂಧ್ರದಲ್ಲಿರುವುದಾದರೂ, ಅಲ್ಲಿಗೆ ಕರ್ನಾಟಕದ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ಅಲ್ಲಿ ಕನ್ನಡದಲ್ಲಿ ವ್ಯವಹಾರ ನಡೆಯುವುದೂ ಸಹಜ). ಬೋರ್ಡ್‌ನಲ್ಲಿ ಅಪ್ಪನಿಗೆ ತುಂಬಾ ಇಷ್ಟವಾದದ್ದು ’ಒಂದು ಟಿಕೇಟಿಗೆ ಒಬ್ಬರಿಗೆ ಹೊಟ್ಟೆ ತುಂಬಾ ಊಟ’ ಅನ್ನೋ ಒಕ್ಕಣೆ, ಅರ್ಥಾತ್ ಫುಲ್‌ಮೀಲ್ಸ್! ಮಾವನ ಅಭಿಪ್ರಾಯಕ್ಕೂ ಕಾಯದೆ, ಅಪ್ಪ ಅವಸರದಲ್ಲಿ ನಮ್ಮನ್ನೆಲ್ಲ ಹೊಟೇಲಿನೊಳಕ್ಕೆ ನುಗ್ಗಿಸಿದರು. ಕೌಂಟರಿನಲ್ಲಿ ಟಿಕೇಟು ಖರೀದಿಸಿ, ಒಳಹೋಗಿ ಅದನ್ನು ಅಡುಗೆ ಭಟ್ಟನಿಗೆ ತೋರಿಸಿದರೆ ಅವನು ಒಂದು ತಟ್ಟೆ ಕೊಡುತ್ತಿದ್ದ. ಆ ತಟ್ಟೆ ಹಿಡಿದು, ಯಾವುದಾದರು ಟೇಬಲ್ ಮುಂದೆ ಕುಳಿತರೆ ನಿಮಗೆ ಫುಲ್‌ಮೀಲ್ಸ್ ಸರಬರಾಜುಗುತ್ತಿತ್ತು. ಮಾವ, ಅವರ ಕುಟುಂಬಕ್ಕೆ ತಲಾ ಒಬ್ಬೊಬ್ಬರಿಗೆ ಒಂದು ಟಿಕೇಟು ಕೊಂಡರೆ, ಅಪ್ಪ ಕೇವಲ ಎರಡು ಟಿಕೇಟು ಕೊಳ್ಳುವುದಕ್ಕೆ ಮುಂದಾದರು. ಕೇಳಿದರೆ, ’ಸ್ವಾಮಿಯ ದರ್ಶನ ಆಗೋವರೆಗೂ ನಾವು ಊಟ ಮಾಡಲ್ಲ, ಮಕ್ಕಳಿಬ್ಬರಿಗೆ ಕೊಡಿಸ್ತೀವಿ’ ಅಂತ ಅಪ್ಪ-ಅಮ್ಮ ಸಬೂಬು ಹೇಳಿದರು. ವಾಸ್ತವದಲ್ಲಿ ಹಣದ ಸಮಸ್ಯೆ ಅವರನ್ನು ಹಾಗೆ ಮಾಡಿಸಿತ್ತು. ನನಗೆ ಹಣದ ಸಮಸ್ಯೆ ಅರ್ಥವಾಗುವ ವಯಸ್ಸಲ್ಲ ಅದು, ಆದರೆ ಹೊಟ್ಟೆಯಿನ್ನೂ ಹಸಿದಿರಲಿಲ್ಲ. ಹಾಗಾಗಿ ನನಗೂ ಊಟ ಬೇಡ ಅಂತ ಹಠ ಮಾಡಿದೆ. ಹಾಗಾಗಿ ಅಪ್ಪ ಒಂದೇ ಟಿಕೇಟು ಕೊಂಡು, ಅಣ್ಣನಿಗೆ ಊಟ ಮಾಡಿಸಿದರು.

ಹೊಟೇಲಿಂದ ಬಂದು ಸ್ವಾಮಿಯ ದರ್ಶನಕ್ಕೆ ಕ್ಯೂ ನಿಂತೆವು. ಭರ್ಜರಿ ಜನಜಂಗುಳಿ. ಹೊರಬರುವ ವೇಳೆಗೆ ಇಳಿ ಸಂಜೆಯಾಗಿತ್ತು. ಆಗ ನನಗೆ ಹೊಟ್ಟೆ ಕೆರೆಯಲು ಶುರುವಾಯಿತು. ಊಟಕ್ಕಾಗಿ ಗೋಳಾಡತೊಡಗಿದೆ. ಧರ್ಮಛತ್ರದಲ್ಲಿ ಪ್ರಸಾದ ಶುರುವಾಗುವುದಕ್ಕೆ ಇನ್ನೂ ಸಾಕಷ್ಟು ಸಮಯವಿತ್ತು. ಅಲ್ಲಿಯವರೆಗು ನನ್ನನ್ನು ನಿಭಾಯಿಸಲು ಅಪ್ಪ ಮಾಡಿದ ಯಾವ ಕಸರತ್ತುಗಳಿಗೂ ನಾನು ಬಗ್ಗಲಿಲ್ಲ. ನನ್ನ ಗೋಳಾಟ ನೋಡಿ ನಮ್ಮತ್ತೆ, ’ಹೋಗಣ್ಣ, ಮಗೂನ ಕರ‍್ಕೊಂಡ್ ಹೋಗಿ ಹೊಟೇಲಲ್ಲಿ ಊಟ ಮಾಡಿಸಿಕೊಂಡು ಬಾ. ನಾವು ಇಲ್ಲೇ ಅಂಗಡಿಗಳಲ್ಲಿ ಮನೆಗೆ ಬೇಕಾದ ಸರಂಜಾಮು ತಗೋತಾ ಇರ್ತೀವಿ’ ಅಂದರು. ಈಗ ಅಪ್ಪನಿಗೆ ಮತ್ತೆ ಉಭಯ ಸಂಕಟ. ಅವರ ಮುಂದೆ ನಿರಾಕರಿಸುವಂತಿಲ್ಲ. ಅವರನ್ನೆಲ್ಲ ಅಲ್ಲೇ ಬಿಟ್ಟು, ನನ್ನನ್ನು ಕರೆದುಕೊಂಡು ಹೊರಟರು; ಮತ್ತದೇ ಫುಲ್‌ಮೀಲ್ಸ್ ಹೊಟೇಲು ಹುಡುಕಿಕೊಂಡು!

ದೇವಸ್ಥಾನದಿಂದ ಆ ಹೊಟೇಲ್ ತುಸು ದೂರದಲ್ಲಿತ್ತು. ಆದರೆ ಅಪ್ಪನಿಗೆ ಆ ಹೊಟೇಲೆ ಬೇಕಾಗಿತ್ತು. ದಾರಿಯಲ್ಲಿ ಸಿಕ್ಕ ಹೊಟೇಲುಗಳ ಬಗ್ಗೆ ನಾನು ಪ್ರಸ್ತಾಪಿಸಿದಾಗಲೆಲ್ಲ, ’ಇಲ್ಲಿ ಊಟ ಸರಿ ಇರಲ್ಲ. ಅಲ್ಲಿಗೇ ಹೋಗೋಣ’ ಅಂತ ಹೇಳಿ ಕೊನೆಗೂ ಆ ಹೊಟೇಲು ತಲುಪಿದೆವು. ಯಥಾ ಪ್ರಕಾರ ಅಪ್ಪ, ಕೌಂಟರಿನಲ್ಲಿ ಒಂದು ಟಿಕೇಟು ಖರೀದಿಸಿ, ಅಡುಗೆ ಭಟ್ಟನಿಗೆ ಕೊಟ್ಟು ತಟ್ಟೆ ತಂದು, ಅದಾಗಲೇ ಆಸೀನನಾಗಿದ್ದ ನನ್ನ ಮುಂದಿರಿಸಿದರು. ಸಪ್ಲೇಯರ್ ಬಂದು ಮೊದಲ ಸುತ್ತಿನ ಊಟ ಬಡಿಸಿಹೋದ. ಎರಡು ವೆರೈಟಿ ಪಲ್ಯ, ಅಗುಳಗುಳಾಗಿದ್ದ ಅನ್ನ, ಘಮಗುಟ್ಟುತ್ತಿದ್ದ ಆಂದ್ರಶೈಲಿ ಸಾಂಬಾರು…. ಆಹಾ ಭರ್ಜರಿ ಭೋಜನ! ಮನೆಯಲ್ಲಿ ಅನ್ನ ಮಾಡುತ್ತಿದ್ದುದೇ ಅಪರೂಪ. ಶನಿವಾರ ಪೂಜೆಯ ನೈವೇದ್ಯಕ್ಕೆ ಅಂತ, ಸೊಸೈಟಿ ಅಕ್ಕಿಯಲ್ಲೆ ಅಮ್ಮ ಬೆಲ್ಲದನವನ್ನು ಪ್ರಸಾದವಾಗಿ ಮಾಡುತ್ತಿದ್ದಳು. ಅದನ್ನು ತಿನ್ನಲು ನನಗೂ, ಅಣ್ಣನಿಗೂ ಪೈಪೋಟಿ. ಚಿಕ್ಕವನಾಗಿದ್ದರಿಂದ ನನಗೇ ಒಂದೆರಡು ತುತ್ತು ಜಾಸ್ತಿ ಪಾಲು ಸಿಗುತ್ತಿತ್ತು. ಅದು ಹೊರತುಪಡಿಸಿದರೆ, ಹಬ್ಬ ಹರಿದಿನ ಅಥವಾ ಯಾರಾದರೂ ನೆಂಟರಿಷ್ಟರು ಬಂದಾಗಷ್ಟೇ ಅನ್ನ ಎಂಬ ಅಪರೂಪದ ಅಡುಗೆ ಮಾಡುತ್ತಿದ್ದುದು. ಅಂತದ್ದರಲ್ಲಿ, ಅಷ್ಟು ರಸವತ್ತಾದ ಊಟವನ್ನು ಕಣ್ತುಂಬ ನೋಡುವುದಕ್ಕೇ ಖುಷಿಯಾಗಿ ಹೋಗಿದ್ದೆ. ಹೊಟ್ಟೆ ತುಸು ಜಾಸ್ತಿಯೇ ಹಿಗ್ಗಿ ಅಣಿಯಾಗಿತ್ತು. ಒಮ್ಮೆ ಅನ್ನ ಮುಗಿಸಿ, ಮತ್ತೊಮ್ಮೆ ಹಾಕಿಸಿಕೊಂಡೆ. ಆದರೆ ಎರಡನೇ ಸಲದ ಅನ್ನವನ್ನು ಅರ್ಧ ತಿನ್ನುವ ವೇಳೆಗೆ ಹೊಟ್ಟೆ ಬಿರಿಯತೊಡಗಿತು. ಕೈ ನಿಧಾನಗೊಂಡವು. ಸೊಂಟವನ್ನು ನುಲಿದಾಡಲಾರಂಭಿಸಿದೆ.

ಆಗ ಇದ್ದಕ್ಕಿದ್ದಂತೆ ನನ್ನ ಪಕ್ಕೆಲುಬನ್ನು ಏನೋ ತಿವಿದಂತಾಯ್ತು. ತಿರುಗಿ ನೋಡಿದೆ. ಪಕ್ಕದಲ್ಲಿ ಕೂತಿದ್ದ ಅಪ್ಪನ ಕೈ, ಟೇಬಲ್ಲಿನ ಕೆಳಗಿಂದ ನನ್ನನ್ನು ತಿವಿದಿತ್ತು. ನನ್ನನ್ನು ಕಳ್ಳಗಣ್ಣಿನಿಂದ ನೋಡುತ್ತಾ “ಊಟ ಸಾಕಾ? ಹೊಟ್ಟೆ ತುಂಬ್ತಾ?” ಅಂದರು. “ಹಾ, ಸಾಕಪ್ಪಜಿ” ಅಂದೆ. “ಮೇಲಕ್ಕೆ ಎದ್ದೇಳ್ಬೇಡ, ಸಪ್ಲೇಯರನ್ನ ಕರೀತೀನಿ, ಇನ್ನೂ ಎರಡು ಮೂರು ಸೌಟು ಅನ್ನ ಹಾಕಿಸ್ಕೋ” ಅಂದರು. ಮನೆಯಲ್ಲಿ ಊಟ ಮಾಡಲು ಹಠ ಮಾಡಿದಾಗ, ಬಲವಂತ ಮಾಡಿ ಊಟ ಮಾಡಿಸುವಂತೆ ಈಗಲೂ ಮಾಡುತ್ತಿದ್ದಾರೆ ಅಂದುಕೊಂಡು, “ನನಿಗೆ ಊಟ ಸಾಕು. ಇದುನ್ನೇ ತಿನ್ನಕ್ಕಾಯ್ತಾ ಇಲ್ಲ. ನಾನು ಎದ್ದೇಳ್ತೀನಿ” ಎಂದು ಮೇಲಕ್ಕೇಳಲು ಹೋದೆ. ಆದರೆ ನನ್ನ ದೇಹ ಒಂದಿಂಚೂ ಕದಲಲಿಲ್ಲ. ಅಪ್ಪನ ಎಡಗೈ ನನ್ನನ್ನು ಬಲವಾಗಿ ಹಿಡಿದು ಕೂರಿಸಿತ್ತು! “ರಗಳೆ ಮಾಡಬೇಡ, ಹೇಳಿದಷ್ಟು ಮಾಡು” ಅಂತ ಸೂಕ್ಷ್ಮ ದನಿಯಲ್ಲಿ ಗದರಿದರು. ಅಪ್ಪನ ವರ್ತನೆ ಯಾಕೋ ವಿಚಿತ್ರ ಅನ್ನಿಸಿತು. ಅವರು ಹೇಳಿದಂತೆಯೇ ತಟ್ಟೆಯಲ್ಲಿ ಕೈಯಾಡಿಸುತ್ತಾ, ಊಟ ಮಾಡುವವನಂತೆ ನಟಿಸಿ ಕೂತೆ.

ಆಗ ಅಪ್ಪ, ಪಕ್ಕದ ಟೇಬಲಿನ್ನವರಿಗೆ ಅನ್ನ ಬಡಿಸುತ್ತಿದ್ದ ಸಪ್ಲೇಯರನ್ನು ಕರೆದು, “ಮಗೂಗೆ ಇನ್ನೊಂದ್ ಸ್ವಲ್ಪ ಅನ್ನವಂತೆ ಹಾಕಿ” ಅಂದ್ರು. ಅವ ತುಸು ಅನುಮಾನದಿಂದ ನೋಡಿ, “ಇನ್ನೂ ತಟ್ಟೆಯಲ್ಲಿ ಅನ್ನ ಐತಲ್ವಾ. ಖಾಲಿ ಮಾಡ್ಲಿ ಆಮೇಲೆ ಹಾಕ್ತೀನಿ” ಅಂತ ಲೆಕ್ಕಾಚಾರವಾಗಿ ಮಾತಾಡಿದ. “ಯೋ, ಎಷ್ಟ್ ಸಲ ಅಂತ ಅಲ್ಲಿಗೂ ಇಲ್ಲಿಗೂ ಓಡಾಡ್ತೀಯ. ಈಗ ಹೆಂಗೂ ಬಂದಿದೀಯಲ್ವಾ, ಹಾಕಿ ಹೋಗು. ಆಮೇಲೆ ಖಾಲಿಯಾದ್ಮೇಲೆ ಕರುದ್ರೆ, ಅರ್ಧಗಂಟೆಯಾದ್ರೂ ಇತ್ತಕಡೆ ಬರಲ್ಲ ನೀವು. ನಾವ್ ಅರ್ಜೆಂಟಾಗಿ ಹೋಗ್ಬೇಕು….” ಅಂತ ತುಸು ಜೋರಾಗಿ ಮಾತಾಡಿದರು. ಅಕ್ಕಪಕ್ಕದ ಗಿರಾಕಿಗಳು ಇತ್ತ ತಿರುಗಿದ್ದನ್ನು ನೋಡಿದ, ಸಪ್ಲೇಯರ್ ಮುಜುಗರದಿಂದ ನನ್ನ ತಟ್ಟೆಗೆ ಒಂದು ಸೌಟು ಅನ್ನ ಹಾಕಿದ. ನಾನು ಅವನ ಮುಖ ನೋಡುತ್ತಾ ಸುಮ್ಮನೇ ಕೂತಿದ್ದೆ. ಆಗ ಅಪ್ಪನ ಕೈ ಟೇಬಲ್ಲಿನ ಕೆಳಗಿಂದ ನನ್ನ ಸೊಂಟವನ್ನು ಮತ್ತೆ ತಿವಿಯಿತು. ಎಚ್ಚೆತ್ತುಕೊಂಡವನಂತೆ “ಇನ್ನೂ ಹಾಕಿ” ಅಂದೆ. ಅವನು ಅಸಹನೆಯಲ್ಲಿ ಮತ್ತೊಂದು ಸೌಟು ಹಾಕಿದ. “ಇನ್ನೂ ಹಾಕಿ” ಈ ಸಲ ಅಪ್ಪನ ಕೈಸನ್ನೆಗೆ ಕಾಯದೆ ನಾನೇ ಕೇಳಿದೆ. ಅವನು ಇನ್ನೊಂದು ಸೌಟು ಅನ್ನ ಸುರಿದು, ಅಲ್ಲಿ ನಿಲ್ಲದೆ ಸರಸರನೆ ನಡೆದುಹೋದ. ಅಪ್ಪನೇ, ಟೇಬಲ್ಲಿನ ಮೇಲಿದ್ದ ಬಕೇಟಿನಿಂದ ಸಾಂಬಾರು ಸುರಿದು, “ಉಣ್ಣು” ಅಂದರು. ನಾನು ಕಲೆಸುವ ಶಾಸ್ತ್ರ ಮಾಡುತ್ತಾ ಕಾಲಹರಣ ಮಾಡಿದೆ.

ಆಗ ಅಪ್ಪ, ಮೆಲ್ಲಗೆ ಸುತ್ತಲೂ ಕಣ್ಣಾಡಿಸಿ, ಜೋರು ದನಿಯಲ್ಲಿ “ಸಾಕಾ ಊಟಾ?” ಅಂದರು. ನನಗೆ ಸಾಕಾಗಿ ಯಾವುದೋ ಕಾಲವಾಗಿತ್ತು. “ಊಂ” ಅಂದೆ. “ಮತೆ, ಏನೋ ತಪ್ಪಲಿಗಟ್ಟಲೆ ತಿನ್ನೋನಂಗೆ ಆಸೆಗೆ ಅರ್ಧ ಇಷ್ಟು ಅನ್ನ ಹಾಕಿಸಿಕ್ಯಂಡಲ್ವಾ… ಈಗ ನೋಡು ಎಲ್ಲಾ ವೇಸ್ಟು. ಈ ಎಂಜಲನ್ನು ಯಾರು ತಿಂತಾರೆ?” ಅಂತ ಜೋರುದನಿಯಲ್ಲಿ ನನ್ನ ಮೇಲೆ ರೇಗಿದರು. ನನಗೆ ಅರ್ಥವಾಗಲಿಲ್ಲ. “ಸರಿ ಕೊಡು ಇತ್ಲಾಗೆ,” ಅಂತ ತಟ್ಟೆಯನ್ನು ತಮ್ಮ ಕಡೆಗೆ ಎಳೆದುಕೊಂಡು ಉಣ್ಣಲಾರಂಭಿಸಿದರು.

ಆಗ ಸಪ್ಲೇಯರ್ ದಢದಢ ಬಂದವನೇ, “ರ್ರೀ, ಏನ್ರೀ ಮಾಡ್ತಾ ಇದೀರಿ? ಒಂದೇ ಟಿಕೇಟು ತಗೊಂಡು, ನೀವ್ಯಾಕ್ರಿ ಊಟ ಮಾಡ್ತಾ ಇದೀರಿ” ಅಂತ ಅಪ್ಪನಿಗೆ ಜೋರು ಮಾಡಿದ. ಅಪ್ಪನೂ ಪಟ್ಟು ಬಿಡಲಿಲ್ಲ, “ಯೋ, ಮಗ ಎಂಜಲು ಮಾಡಿ ಬಿಟ್ಟಿರೋದನ್ನು ಏನು ಮಾಡ್ತೀಯ. ಬೇರೆ ಗಿರಾಕಿಗೆ ಬಡಿಸಕ್ಕಾಗುತ್ತಾ? ವೇಸ್ಟಾಗಿ ಚೆಲ್ಲಬೇಕು ತಾನೆ? ತಿನ್ನೋ ಅನ್ನನ ವೇಸ್ಟು ಮಾಡದು ಸರಿಯಲ್ಲ, ಅದ್ಕೆ ತಿಂತಾ ಇದೀನಿ. ಬ್ಯಾಡ ಅಂದ್ರೇಳು, ಇವಾಗ್ಲೂ ಎದ್ದೋಗ್ತೀನಿ. ಅನ್ನ ಚೆಲ್ಲಿದ ಪಾಪ, ನಿನಿಗೇ ಸುತ್ಕಳಲಿ” ಎಂದು ಎದುರುತ್ತರ ಕೊಟ್ಟರು. ಏನೇನೋ ಗೊಣಗಾಡುತ್ತಾ, ಧುಮುಗುಡುತ್ತಾ ಅವನು ಅಲ್ಲಿಂದ ಜಾಗ ಖಾಲಿ ಮಾಡಿದ. ಅಪ್ಪ, ತಟ್ಟೆ ಪೂರ್ತಿ ಖಾಲಿ ಮಾಡಿಯೇ ಅಲ್ಲಿಂದ ಮೇಲಕ್ಕೆದ್ದರು.

ಹೊಟೇಲಿನವರು ಅದೇನೇನು ಹಿಡಿಶಾಪ ಹಾಕಿದರೋ ಗೊತ್ತಿಲ್ಲ, ಮುಲಾಜಿಲ್ಲದೆ ಅವುಗಳನ್ನೆಲ್ಲ ಅಲ್ಲಿಯೇ ಬಿಟ್ಟು, ನಾವಿಬ್ಬರು ಸಂತೃಪ್ತತೆಯೊಂದಿಗೆ ಹೊಟೇಲಿನಿಂದ ಹೊರಬಿದ್ದಿವೆ. ಅಸಲಿಗೆ ನಾನು ಊಟ ಬೇಕೆಂದು ದೇವಸ್ಥಾನದ ಬಳಿ ಹಠ ಮಾಡಿದಾಗಲೇ ಅಪ್ಪನಿಗೂ ಹೊಟ್ಟೆ ಹಸಿದಿತ್ತಂತೆ. ಅಪ್ಪ ಅಲ್ಲಿಯೇ ಈ ಇಡೀ ಪ್ಲ್ಯಾನನ್ನು ತನ್ನ ತಲೆಯಲ್ಲಿ ಗುಣಿಸಿಕೊಂಡು, ಫುಲ್‌ಮೀಲ್ಸ್ ಹೊಟೇಲ್ ಹುಡುಕಿಕೊಂಡು ಬಂದಿದ್ದರು. ವಾಪಾಸ್ ನಡೆದುಹೋಗುವಾಗ ಅದನ್ನು ರಸವತ್ತಾಗಿ ಹೇಳಿ ನನ್ನಲ್ಲಿ ನಗೆಯುಕ್ಕಿಸಿದರು. ನಗುವಿನ ನಡುವೆಯೇ, “ಅಲ್ಲಪ್ಪಾಜಿ, ಇದನ್ನು ಮೊದ್ಲೇ ಹೇಳಿದ್ದ್ರೆ, ಅಮ್ಮನ್ನೂ ಕರಕೊಂಡು ಬರಬಹುದಿತ್ತಾ? ನಾನು ಇನ್ನೂ ಎರಡು ಸೌಟು ಜಾಸ್ತಿ ಹಾಕಿಸಿಕೊಳ್ತಿದ್ದೆ, ಅಮ್ಮನೂ ಊಟ ಮಾಡಬಹುದಿತ್ತಾ?” ಎಂದಾಗ, ನಗುವಿನ ಸರದಿ ಅಪ್ಪನದು. ಪಾಪಾ, ಅವತ್ತು ಅಮ್ಮನಿಗೆ ಧರ್ಮಛತ್ರದ ಪ್ರಸಾದವೇ ಗತಿಯಾಯ್ತು. ಅದೊಂದೇ ಬೇಸರದ ಸಂಗತಿ…

ಇವತ್ತಿಗೂ ನಮ್ಮ ಮನೆಯವರೆಲ್ಲ ಒಟ್ಟಿಗೇ ಕಲೆತಾಗ ಈ ಪ್ರಸಂಗವನ್ನು ನೆನಪಿಸಿಕೊಂಡು “ಭೂತಯ್ಯನ ಮಗ ಅಯ್ಯು ಸಿನಿಮಾದ ಹೊಟೇಲು ದೃಶ್ಯಕ್ಕೆ ಹೋಲಿಸಿಕೊಂಡು ನಗಾಡುತ್ತೇವೆ. ಅನ್ನ (ಊಟ), ಅಂದ್ರೆ ಸುಮ್ನೇನಾ? ಒಮ್ಮೊಮ್ಮೆ ಅನ್ನಕ್ಕಾಗಿ ಮನುಷ್ಯ ಏನೇನೋ ಕಸರತ್ತು ಮಾಡಬೇಕಾಗುತ್ತದೆ. ಹಸಿದವರಿಗೆ ಮಾತ್ರ ಅನ್ನದ ಬೆಲೆ ಗೊತ್ತಾಗುತ್ತೆ.

ಇವತ್ತು ಅಪ್ಪಂದಿರ ದಿನ. ಎಲ್ಲರಂತೆ ನಾನೂ, ಅಪ್ಪನ ಒಂದು ಫೋಟೊ ಹಾಕಿ ವಿಶ್ ಮಾಡಿ ಸುಮ್ಮನಾಗೋಣ ಅಂದುಕೊಂಡೆ. ಆದರೆ ನನ್ನ ಬದುಕಿನಲ್ಲಿ ಅಪ್ಪನೆಂಬ ವ್ಯಕ್ತಿತ್ವ ಯಾವ ಫೋಟೊ ಚೌಕಟ್ಟಿನೊಳಗೂ ತುರುಕಿ ಬಂಧಿಸಿಡಲಾರದಷ್ಟು ವಿಶಾಲ ಬಯಲು. ಹಾಗಾಗಿ ಅಪ್ಪ ಮತ್ತು ನನ್ನ ನಡುವೆ ನಡೆದ ಈ ತಮಾಷಿ ಪ್ರಸಂಗವನ್ನು ನಿಮ್ಮೊಟ್ಟಿಗೆ ಹಂಚಿಕೊಂಡೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ