✍️ ಗಿರೀಶ್ ತಾಳಿಕಟ್ಟೆ
ಕವಿ
ಪದಗಳ
ನಯ-ನಾಜೂಕುಗಳಲ್ಲಿ
ಮಾತ್ರವೇ
ಹುಟ್ಟುತ್ತಾನಾದರೆ,
ಅವನು
ಆ ಪದಗಳ
ನಡುವೆಯೇ
ಉಸಿರುಗಟ್ಟಿ
ಸತ್ತುಹೋಗಲಿ;
ಬೆಂಕಿಯಲ್ಲಿ
ಬೇಯುತ್ತಿರುವ
ನಮ್ಮ ಬದುಕುಗಳಿಗೆ
ಅಂಥಾ ಕವಿಯ
ಜರೂರತ್ತಿಲ್ಲ.
ಕವಿ
ಪ್ರೀತಿ,
ಪ್ರೇಮ,
ವಿರಹದಲ್ಲೇ
ಮಿಂದೇಳುತ್ತಾನಾದರೆ,
ಅಂಥಾ ಕವಿ
ಅವುಗಳ
ಪ್ರವಾಹದಲೆ
ಕೊಚ್ಚಿ ಹೋಗಲಿ;
ನಮ್ಮ ದೇಹದ
ವೃಣಗಳಿಗೆ
ಅವನ
ಸುಮಧುರ ಕಾವ್ಯ
ಬೇಕಿಲ್ಲ.
ಕವಿ
ಬದುಕಿಗೊಂದು
ಬರಹಕ್ಕೊಂದು
ತೆರನಾಗಿ
ಬಾಳುತ್ತಾನಾದರೆ
ಅಂಥಾ ಕವಿ
ನಮ್ಮ ನಿಟ್ಟುಸಿರ
ಬೆಂಕಿಯಲಿ
ಸುಟ್ಟು ಬೂದಿಯಾಗಲಿ;
ಊಸರವಳ್ಳಿಗಳಿಗೆO poet
ತುತ್ತಿಟ್ಟು ಸಾಕುವ
ಪುರಸೊತ್ತು
ನಮಗಿಲ್ಲ.
ಕವಿ
ಮೆಚ್ಚುಗೆಗಾಗಿ
ಮೆಚ್ಚಿಸಲಿಕ್ಕಾಗಿ
ವಿಮರ್ಶೆ-ಪ್ರಶಸ್ತಿಗಾಗಿ
ಪದಗಳ
ನೇಯುತ್ತಾನಾದರೆ,
ಅವುಗಳನ್ನೆ ಹೊಸೆದು
ಹಗ್ಗವಾಗಿಸಿಕೊಂಡು
ನೇಣು ಬಿಗಿದುಕೊಳ್ಳಲಿ;
ನಮ್ಮ
ಹಸಿದ ಹೊಟ್ಟೆಗಳಿಗೆ
ಅವ್ಯಾವವೂ
ಅರ್ಥವಾಗುವುದಿಲ್ಲ.
ಕವಿ
ನಮ್ಮ ಹಟ್ಟಿಯ
ಅಂಗಳದ
ಘಾಟು ಘಮಲಿಗೆ
ಮೂಗುಮುಚ್ಚಿಕೊಂಡು
ದೂರ ಸಾಗಿ,
ಅಲ್ಲೆಲ್ಲೋ
ಹಸಿರು ಕಾನನದ ನಡುವೆ
ಹಕ್ಕಿಪಕ್ಕಿಗಳ
ಕಲರವಕೆ ಕಿವಿಯಾಗಿ
ರತ್ನಗಂಬಳಿಯ
ಮೇಲೆ ಕೂತು
ಕಾವ್ಯವ ಹುಟ್ಟಿಸುತ್ತಾನಾದರೆ;
ಅಂಥಾ ಕವಿ
ಕಾಡುಬಂಡೆಯಂತೆ
ಕಲ್ಲಾಗಿ ಹೋಗಲಿ,
ನಮ್ಮ ಮಕ್ಕಳ
ನಾಳೆಗಳಿಗೆ
ಅಂಥವನ
ಹಂಗು ಬೇಕಿಲ್ಲ.
ಆದರೂ
ಕವಿ ಬೇಕಾಗಿದ್ದಾನೆ
ಈ ಜಗತ್ತಿಗೆ,
ನಮ್ಮಂತವರ ಜಗತ್ತಿಗೆ;
ನೋವುಗಳನು
ನೋವುಗಳಂತೆಯೇ ನೋಡುವ,
ಶತಮಾನಗಳ ಸಂಕಟವ
ಹಾದುಬಂದ
ನಮ್ಮ ಬದುಕುಗಳನು
ಇಂದು
ಬಿಟ್ಟಿ, ಪುಗಸಟ್ಟೆ ಎಂದು
ಲೇವಡಿಯ ಮಾಡದ,
ನೇರವಂತಿಕೆಯ ನೆಪದಲ್ಲಿ
ಸೂಕ್ಷ್ಮತೆಯನು
ಕಳೆದುಕೊಳ್ಳದ
ನಯವಂಚಕನಲ್ಲದ
ಕವಿ ಬೇಕಾಗಿದ್ದಾನೆ;
ಕಾವ್ಯ ಮಾನದಂಡದ
ತಕ್ಕಡಿಯಲ್ಲಿ
ಅವ ಶ್ರೇಷ್ಟ
ಕವಿಯಾಗದಿದ್ದರೂ
ಚಿಂತೆಯಿಲ್ಲ,
ಮುಖವಾಡವಿಲ್ಲದ
ಮನುಷ್ಯನಾಗಿದ್ದರೆ ಸಾಕು,
ಅಂಥಾ ಕವಿ
ಬೇಕಾಗಿದ್ದಾನೆ
ನಮ್ಮಂತವರ ಜಗತ್ತಿಗೆ!




