Thursday, November 19, 2026

ಪ್ರಾಯೋಗಿಕ ಆವೃತ್ತಿ

ನಿವೃತ್ತ ಶಿಕ್ಷಕರಿಗೆ ಎಸ್.ಲೋಕೇಶ್ ಅವರಿಗೆ ಹಿರಿಯ ವಿದ್ಯಾರ್ಥಿಗಳಿಂದ ಸನ್ಮಾನ

ಮೂವತ್ತೊಂಬತ್ತು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಲೋಕೇಶ್ ಅವರಿಗೆ ಚಿಕ್ಕಮಂಡ್ಯ ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.

ಶಿಕ್ಷಕ ಲೋಕೇಶ್ ಅವರ ಮಂಡ್ಯ ನಗರದ ಕುವೆಂಪುನಗರದಲ್ಲಿನ ನಿವಾಸಕ್ಕೆ ತೆರಳಿದ ಚಿಕ್ಕಮಂಡ್ಯ ಸರಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿಯ ಮೊದಲ ತಂಡದ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕನಿಗೆ ಪ್ರೀತಿ, ಗೌರವದಿಂದ ಸನ್ಮಾನಿಸಿ ಅಭಿನಂದಿಸಿದರು. 27 ವರ್ಷಗಳ ಹಿಂದಿನ ಶಾಲೆಯ ದಿನಗಳನ್ನು ಮೆಲುಕು ಹಾಕುತ್ತಾ ನೆನಪಿನಂಗಳಕ್ಕೆ ಜಾರಿದರು.

ಶಾಲೆಗಳಲ್ಲಿ ನಡೆಯುತ್ತಿದ್ದ ಪಾಠ-ಪ್ರವಚನ, ಮೂಲಸೌಕರ್ಯಗಳ ಕೊರತೆಯಿಂದ ಎದುರಿಸಿದ ಸವಾಲುಗಳು, ವಿದ್ಯಾರ್ಥಿಗಳ ಹಿಂದಿನ ನಡವಳಿಕೆಗಳು, ಪರೀಕ್ಷಾ ದಿನಗಳು, ಕಲಿಕಾ ಸಾಮರ್ಥ್ಯ, ಶಾಲಾ ದಿನಗಳ ತುಂಟತನ… ಹೀಗೆ ಹತ್ತಾರು ಸಂಗತಿಗಳೊಂದಿಗೆ ನೆನಪಿನ ಪುಟಗಳನ್ನು ತಿರುವು ಹಾಕಿದರು. ವಿಜ್ಞಾನ, ಗಣಿತದ ವಿಷಯಗಳು, ಪವಾಡ ರಹಸ್ಯ ಬಯಲು, ವಿಜ್ಞಾನ ಮಾದರಿಗಳ ಪ್ರದರ್ಶನದ ಬಗ್ಗೆ ತರ್ಕಬದ್ಧ ಚರ್ಚೆ ನಡೆಸಿದರು.

ಈ ವೇಳೆ ನಿವೃತ್ತ ಶಿಕ್ಷಕ ಎಸ್.ಲೋಕೇಶ್ ಅವರು ಮಾತನಾಡಿ, ಶಾಲಾ ದಿನಗಳಲ್ಲಿ ನಿಮಗೆ ಸಾಧ್ಯವಾದಷ್ಟು ಕಲಿಸುವ ಪ್ರಯತ್ನವನ್ನು ನಾವೆಲ್ಲ ಶಿಕ್ಷಕರು ಮಾಡಿದ್ದೇವೆ. ಈಗ ನಿಮ್ಮಗಳ ಸರದಿ, ನಿಮ್ಮ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ತಿಳಿಸಿ. ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿ. ಒಳ್ಳೆಯ ಶಿಕ್ಷಣ ಕೊಡಿ. ಸಮಯಕ್ಕೆ ಆದ್ಯತೆ ಕೊಡಿ. ಸಮಯಪಾಲನೆ ಮಾಡಿ. ನಿಮ್ಮ ಮಕ್ಕಳಿಗೂ ಅದನ್ನು ಕಲಿಸಿ ಎಂದು ಸಲಹೆ ನೀಡಿದರು.ಶಿಕ್ಷಕ ಲೋಕೇಶ್ ಅವರ ಬಗ್ಗೆ ಹಿರಿಯ ವಿದ್ಯಾರ್ಥಿಗಳು ಅಭಿಮಾನದಿಂದ ಮಾತನಾಡಿದರು.

ಅಂತಿಮವಾಗಿ ನೆನಪಿನ ಕಾಣಿಸಿ ನೀಡಿ, ಹಾರ-ಶಾಲು ಹೊದಿಸಿ ಗೌರವ ಸಮರ್ಪಣೆ ಮಾಡಿ ಗುರುವಂದನೆ ಸಲ್ಲಿಸಿದರು. ಕೇಕ್ ಕತ್ತರಿಸಿ ಹಂಚಿ ತಿನ್ನುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಕೇಶವ, ಸಿ.ಎಸ್.ದೇವರಾಜು, ಸಿ.ಡಿ.ರಾಜೇಶ್, ನವೀನ್, ಸತೀಶ್, ಸಿ.ಎಚ್.ಶಿವಕುಮಾರ್, ಸಿ.ಎಸ್.ಉಮೇಶ್, ಸಿ.ಕೆ.ಜ್ಯೋತಿ, ಎಚ್.ಎನ್.ಲತಾಮಣಿ, ಸಿ.ಕೆ.ನಾಗಮಣಿ, ರತ್ನಮ್ಮ, ತಾಯಮ್ಮ ಪ್ರತಿಭಾ, ಸಿ.ಪಿ.ಶಿಲ್ಪ, ಪುನೀತಾ ಇತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ