ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಪಿಯು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ದೊಡ್ಡವರ ಮಕ್ಕಳು ಇದ್ದಾರೆ ಎಂದು ಸೌಜನ್ಯಳ ಕುಟುಂಬದವರು ನೇರವಾಗಿ ಆರೋಪಿಸಿದ್ದರು. ʼಧರ್ಮಸ್ಥಳದವರ ಹೆಸರೆತ್ತಬೇಡಿʼ ಎಂದು ಬಾಯಿ ಮುಚ್ಚಿಸಲು ಖುದ್ದು ಪೇಜಾವರ ಸ್ವಾಮೀಜಿ ಹಣದ ಕಂತೆ ಹಿಡಿದು ಮನೆಗೆ ಬಂದಿದ್ದರು ಎಂಬ ವಿಷಯವನ್ನು ಸೌಜನ್ಯ ತಾಯಿ ಕುಸುಮಾವತಿ ಬಹಿರಂಗಪಡಿಸಿದ್ದಾರೆ.
“ನನ್ನ ಮಗಳ ಅತ್ಯಾಚಾರ ಕೊಲೆ ಪ್ರಕರಣ ಸಂಬಂಧ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ ನಂತರ ಮಾಧ್ಯಮಗಳ ಮುಂದೆ ಧರ್ಮಸ್ಥಳದವರ ಹೆಸರೆತ್ತಬೇಡ ಎಂದು ಮನವೊಲಿಸಲು ಖುದ್ದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮನೆಗೆ ಬಂದಿದ್ದರು. ಹಣದ ಕಂತೆ ತಂದು ಆಮಿಷ ಒಡ್ಡಿದ್ದರು” ಎಂದು ಸೌಜನ್ಯ ತಾಯಿ ಕುಸುಮಾವತಿ ಅವರು ಈ ದಿನ.ಕಾಮ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
“ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಮಗಳು ಸೌಜನ್ಯಳನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದ ಸಂಬಂಧ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಸಂಬಂಧಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪೇಜಾವರ ಸ್ವಾಮೀಜಿಯ ಮೂಲಕ ನಮ್ಮ ಬಾಯಿ ಬಂದ್ ಮಾಡಿಸುವ ಪ್ರಯತ್ನ ನಡೆದಿತ್ತು. ʼನೀವು ಸಾಧ್ಯವಾದರೆ ನನ್ನ ಮಗಳ ಜೀವ ತಂದು ಕೊಡಿʼ ಎಂದು ಹೇಳಿ ವಾಪಸ್ ಕಳಿಸಿದ್ದೆ” ಎಂದು ಹೇಳಿರುವುದಾಗಿ ಕುಸುಮಾವತಿ ನೆನಪಿಸಿಕೊಂಡರು.
ಕುಸುಮಾವತಿ ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ...
“ನನ್ನ ಮಗಳು ಕಾಣೆಯಾದಾಗಿನಿಂದ ಮೃತದೇಹ ಸಿಗುವವರೆಗೂ, ಅವಳು ಯಾವ ಸ್ಥಿತಿಯಲ್ಲಿಯೇ ಇರಲಿ ಜೀವಂತವಾಗಿದ್ದರೆ ಸಾಕು ಎಂದುಕೊಂಡಿದ್ದೆ. ಯಾರಾದರೂ ಅಪಹರಿಸಿ ಮಾರಾಟ ಮಾಡಿದ್ದರೂ ಒಂದು ದಿನ ಸಿಗುತ್ತಾಳೆ ಎಂದು ಮನಸ್ಸು ಹೇಳುತ್ತಿತ್ತು. ಆದರೆ ಆ ಸ್ಥಿತಿಯಲ್ಲಿ ನನ್ನ ಮಗುವಿನ ಮೃತದೇಹ ಸಿಗುತ್ತದೆ ಎಂದು ಊಹೆ ಕೂಡಾ ಮಾಡಿರಲಿಲ್ಲ.
ಆ ದಿನ ಮನೆಯಲ್ಲಿ ಹೊಸ ಅಕ್ಕಿ ಊಟದ ಹಬ್ಬ ಇತ್ತು. ನನ್ನ ತಂಗಿ ಮಧ್ಯಾಹ್ನ 2.30ರ ಸುಮಾರಿಗೆ ಊಟ ಮಾಡಿ ಅವಳ ಮನೆಗೆ ಹೋಗುವಾಗ ಅಲ್ಲಿ ಆ ಮೂವರು ಇದ್ದದ್ದು ನೋಡಿದ್ದಾಳೆ. ಅದರಲ್ಲಿ ಮಲ್ಲಿಕ್ ಜೈನ್ ನನ್ನ ತಂಗಿಯ ಕ್ಲಾಸ್ ಮೇಟ್. ಪರಿಚಯ ಇದ್ದರೂ ಆ ದಿನ ಆತ ಮಾತನಾಡಿಸಿರಲಿಲ್ಲ. ನನ್ನ ಮಗಳಿಗೆ ಮಧ್ಯಾಹ್ನದವರೆಗೆ ಪರೀಕ್ಷೆ ಇತ್ತು. ಅದು ಮುಗಿಸಿ ನೇತ್ರಾವತಿ ಮಾರ್ಗವಾಗಿ ಮನೆಗೆ ಬರುತ್ತಿದ್ದಳು. ನಮ್ಮ ಊರಿನ ಬ್ರಾಹ್ಮಣರ ಮನೆ ಹುಡುಗಿಗೆ ಮಧ್ಯಾಹ್ನದ ನಂತರ ಪರೀಕ್ಷೆ ಇತ್ತು. ಆಕೆ ಅದೇ ಮಾರ್ಗವಾಗಿ ಕಾಲೇಜಿಗೆ ಹೋಗಿದ್ದಾಳೆ. ಆಕೆಯೂ ಅವರನ್ನು ನೋಡಿದ್ದಾಳೆ. ನಾಲ್ಕು ಗಂಟೆಗೆ ನನ್ನ ಮಗಳು ಬಂದಿಳಿದಿದ್ದಾಳೆ. ಮನೆ ಕಡೆಯ ಮಣ್ಣುದಾರಿಗೆ ತಲುಪುವ ಮೊದಲೇ ಕಿರಾತಕರು ಅಪಹರಿಸಿದ್ದಾರೆ.
ನೇತ್ರಾವತಿ ಮಾರ್ಗ ಸ್ವಲ್ಪ ಹತ್ತಿರ ಇದೆ ಎಂದು ಮಗಳು ಆ ಕಡೆಯಿಂದ ಕಾಲೇಜಿಗೆ ಹೋಗಿ ಬರುತ್ತಿದ್ದಳು. ಆ ಮಾರ್ಗದಲ್ಲಿ ವಾರದ ಹಿಂದೆಯಷ್ಟೇ ಜೋಡಿ ಕೊಲೆ ನಡೆದಿತ್ತು. ಅಲ್ಲಿ ಘಟ್ಟದವರು, ಯಾತ್ರಿಗಳೆಲ್ಲ ಇರುತ್ತಾರೆ. ಆ ಮಾರ್ಗದಲ್ಲಿ ಒಬ್ಬಳೇ ಬರಬೇಡ ಎಂದು ವಾರದ ಹಿಂದೆಯಷ್ಟೇ ಮಗಳಿಗೆ ಎಚ್ಚರಿಸಿದ್ದೆ. ಏನೂ ಆಗಲ್ಲ, ಎಷ್ಟೊಂದು ಜನ ಇರ್ತಾರೆ ಎಂದು ಹೇಳಿದ್ದಳು. ಅದಾಗಿ ವಾರದಲ್ಲಿ ದುರ್ಘಟನೆ ನಡೆದೇ ಹೋಗಿತ್ತು.
ಸೌಜನ್ಯ ಕೊಲೆಯಾಗುವುದಕ್ಕೆ ಮೂರು ತಿಂಗಳ ಹಿಂದೆ ದೊಡ್ಡ ಮಗಳಿಗೆ ಮದುವೆಯಾಗಿತ್ತು. ಸರಿಯಾಗಿ ಬಾವನ ಮುಖವನ್ನೂ ಸೌಜನ್ಯ ನೋಡಿರಲಿಲ್ಲ. ಅಷ್ಟು ನಾಚಿಕೆ ಸ್ವಭಾವದ ಹುಡುಗಿ. ಅಪ್ಪ ಅಮ್ಮನ ಜೊತೆಗಷ್ಟೇ ಹೊರಗಡೆ ಹೋಗುತ್ತಿದ್ದಳು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಅಷ್ಟು ಪಾಪದ ಹುಡುಗಿ ನನ್ನ ಮಗಳು.
ನಾವು ಎಲ್ಲೇ ಹೋಗಲಿ, ಪ್ರತಿಭಟನೆ ನಡೆಸಲಿ ಅಲ್ಲಿ, ಧರ್ಮಸ್ಥಳದ ಕಡೆಯಿಂದ ಇಬ್ಬರಾದರೂ ಗೂಢಾಚಾರಿಕೆಗೆ ಬಂದಿರುತ್ತಿದ್ದರು. ಅವರೇನೇ ಪ್ರಯತ್ನ ಮಾಡಿದರೂ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಹುಡುಗರು ನಮಗೆ ಬೆಂಗಾವಲಾಗಿ ನಿಂತಿದ್ದಾರೆ. ಆ ನಂತರವೂ ನನ್ನ ಇಬ್ಬರು ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮುಂದುವರಿಸಿದರು. ಒಬ್ಬಳಿಗೆ ಇತ್ತೀಚೆಗೆ ಮದುವೆ ಮಾಡಿದ್ದೇವೆ. ಮಗಳು -ಅಳಿಯ ಇಬ್ಬರೂ ಸಿವಿಲ್ ಎಂಜಿನಿಯರಿಂಗ್ ಓದಿದ್ದಾರೆ. ಕೊನೆಯ ಮಗಳು ಫ್ಯಾಷನ್ ಡಿಸೈನಿಂಗ್ ಮುಗಿಸಿದ್ದಾಳೆ. ನನ್ನ ಶಕ್ತಿ ಕುಂದಿಲ್ಲ. ನನ್ನ ಮಗುವಿನ ಕೊಲೆಗಾರರು ಯಾರೆಂದು ಪತ್ತೆಯಾಗಬೇಕು, ಅದಕ್ಕಾಗಿ ಜೀವ ಇರುವಷ್ಟು ದಿನ ಹೋರಾಟ ಮಾಡುತ್ತೇನೆ.
ಆರಂಭದಲ್ಲಿ ಸಿಒಡಿ ತನಿಖೆಯ ವೇಳೆ ನನ್ನ ತಂಗಿ ಅನುಮಾನಿತರ ಬಗ್ಗೆ ಹೇಳಿಕೆ ಕೊಡುವಾಗ ತನಿಖಾಧಿಕಾರಿಯೊಬ್ಬರು, ʼನೀವು ಹೇಳಿದಂತೆಲ್ಲ ಬರೆದುಕೊಳ್ಳಲು ಆಗಲ್ಲ. ಅವರಂತೆ ಬೇರೆಯವರೂ ಇರುತ್ತಾರೆ. ಅದು ಅವರೇ ಎಂದು ಹೇಳಲಾಗದುʼ ಎಂದು ಹೇಳಿದ್ದರು. ಸಿಬಿಐ ತನಿಖೆಯ ವೇಳೆ, ʼನೀವು ಯಾಕೆ ಸುಮ್ಮನೆ ವಿಚಾರಣೆ ನಡೆಸುತ್ತೀರಿ? ನಿಜ ಅಪರಾಧಿಗಳನ್ನು ನೀವು ವಿಚಾರಣೆಗೆ ಒಳಪಡಿಸುತ್ತಿಲ್ಲʼ ಎಂದು ನಾನು ಆಕ್ಷೇಪಿಸಿದಾಗ, ʼನನಗೆ ನಿಮ್ಮ ನೋವು ಅರ್ಥವಾಗುತ್ತದೆ. ಆದರೇನು ಮಾಡೋದು ನಮ್ಮನ್ನು ಮೇಲಿನವರು ಕಳಿಸಿದ್ದಾರಷ್ಟೇ. ಅಲ್ಲಿಗೆ ತಲುಪಬೇಕಿರುವುದು ತಲುಪಿರುತ್ತದೆʼ ಎಂದು ಒಬ್ಬ ಅಧಿಕಾರಿ ನೇರವಾಗಿಯೇ ಹೇಳಿದ್ದರು.
ಧರ್ಮಸ್ಥಳದವರ ಕೃಷಿ ಅಧಿಕಾರಿಯೊಬ್ಬರು ಹೆಗ್ಗಡೆ ಕುಟುಂಬದ ಬಗ್ಗೆ ಆರೋಪ ಮಾಡದಂತೆ ಒತ್ತಡ ಹೇರಿದ್ದರು. ಸೌಜನ್ಯ ಹತ್ಯೆ ಖಂಡಿಸಿ ಬ್ಯಾನರ್ ಹಾಕಿದ್ದ ಯುವಕನನ್ನು ಜೀಪು ಹತ್ತಿಸಿ ಕೊಲೆ ಮಾಡಿಸಿದ್ದರು. ನಮ್ಮ ಮನೆಗೆ ಸಾಂತ್ವನ ಹೇಳಲು ಬರುತ್ತಿದ್ದ ಬಹುತೇಕರು ʼಅವರ ಹೆಸರೆತ್ತಬೇಡಿʼ ಎಂದು ಹೇಳಲು ಮರೆಯುತ್ತಿರಲಿಲ್ಲ. ಧರ್ಮಸ್ಥಳ ಎಂಬುದೊಂದು ಪ್ರತ್ಯೇಕ ಸರ್ಕಾರ. ಅಲ್ಲಿ ಯಾವ ಅನ್ಯಾಯದ ಬಗ್ಗೆಯೂ ಧ್ವನಿ ಎತ್ತುವಂತಿಲ್ಲ”.
ಕೃಪೆ : ಈ ದಿನ.ಕಾಮ್




