Wednesday, November 18, 2026

ಪ್ರಾಯೋಗಿಕ ಆವೃತ್ತಿ

ರಾಜಕಾರಣ ಹಣ ಗಳಿಕೆಯ ವೃತ್ತಿಯಾಗಿದೆಯೇ ಹೊರತು, ಜನಸೇವೆಯಾಗಿಲ್ಲ – ಸಂತೋಷ್ ಹೆಗ್ಡೆ

ಪ್ರಸ್ತುತ ರಾಜಕಾರಣಕ್ಕೆ ಬರುವವರು ಹಣ ಮಾಡಲೆಂದು ಬರುತ್ತಿದ್ದಾರೆಯೇ ಹೊರತು, ನಿಜವಾಗಿ ಜನಸೇವೆ ಮಾಡಬೇಕೆಂದು ಬರುತ್ತಿಲ್ಲ. ಈ ಮನೋಭಾವನೆಯನ್ನು ಬದಲಾಯಿಸಲು ಯುವಜನತೆ ಮುಂದಾಗಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.

ಮಂಡ್ಯ ನಗರದ ಗಾಂಧಿ ಭವನದಲ್ಲಿ ಕನ್ನಡ ಸೇನೆ ಕರ್ನಾಟಕ ವತಿಯಿಂದ ನಡೆದ ”ಪ್ರಸ್ತುತ ರಾಜಕೀಯದಲ್ಲಿ ಯುವಜನರ ಪಾತ್ರ; ಕುರಿತ ವಿಚಾರಣ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ರಾಜಕೀಯವನ್ನು ಒಂದು ವೃತ್ತಿಯಾಗಿ ಪರಿಗಣಿಸಲಾಗಿದೆಯೇ ಹೊರತು, ಸೇವಾ ಮನೋಭಾವನೆ ಕಾಣುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಎಸಿಬಿ ಬಂದ್ ಮಾಡುವುದಾಗಿ ಹೇಳಿದ್ದವರು 24 ತಿಂಗಳು ಮುಂದುವರಿಸಿದ್ದರು 

ಗಣಿ ಕುರಿತಂತೆ 2012ರಲ್ಲಿ ಮೂವರು ಮುಖ್ಯಮಂತ್ರಿಗಳು, ಹಲವಾರು ಮಂದಿ ಶಾಸಕರು, ಮಂತ್ರಿಗಳ ವಿರುದ್ಧ ವರದಿ ನೀಡಲಾಗಿತ್ತು.

ಆಡಳಿತ ಪಕ್ಷದವರು ಅದನ್ನು ಜಾರಿ ಮಾಡದಿದ್ದಾಗ ವಿರೋಧ ಪಕ್ಷದವರು ಜಾರಿಗಾಗಿ ಒತ್ತಾಯಿಸಿ ಬೆಂಗಳೂನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು.

ನಂತರ ಅಧಿಕಾರಕ್ಕೆ ಬಂದಾಗ ಅವರೂ ಅದನ್ನು ಜಾರಿ ಮಾಡಲೇ ಇಲ್ಲ. ಇದು ಸರಿಯೇ ಎಂದು ಪ್ರಶ್ನಿಸಿದ ಅವರು, ಎಸಿಬಿ ಬಂದ್ ಮಾಡುವಂತೆ ಕೇಳುತ್ತಿದ್ದವರು ಅಧಿಕಾರಕ್ಕೆ ಬಂದು 24 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದರೂ ಬಂದ್ ಮಾಡಲಿಲ್ಲ.

ಕೊನೆಗೆ ನ್ಯಾಯಾಲಯವೇ ಎಚ್ಚರಿಕೆ ನೀಡಬೇಕಾಯಿತು. ನಂತರ ನಾವು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಟ್ಟೆವು ಎಂದು ಬಿಂಬಿಸಿಕೊಂಡರೇ ಹೊರತು ಏನನ್ನೂ ಮಾಡಲಿಲ್ಲ ಎಂದು ಕಿಡಿಕಾರಿದರು.

ನಮ್ಮ ದೇಶದಲ್ಲಿ ಬಹಳಷ್ಟು ಹಗರಣಗಳು ನಡೆದಿವೆ. ಶೇ.40 ಪರ್ಸೆಂಟ್ ಎಂದು ಆರೋಪ ಮಾಡುತ್ತಿದ್ದರು. ಸರಿ ನೀವೆಷ್ಟು ಹೊಡೀತಿದ್ದೀರಿ ಎಂದರೆ ನಾವು ಕೇವಲ ಶೇ.10 ಪೆರ್ಸೆಂಟ್ ಮಾತ್ರ ಎನ್ನುತ್ತಾರೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಅಲ್ಲವೇ ? ದೇಶದಲ್ಲಿ ಹಲವಾರು ಹಗರಣಗಳನ್ನು ಕಂಡಿದ್ದೇವೆ,  ಜೀಪ್ ಹಗರಣದಲ್ಲಿ 52 ಲಕ್ಷ, ಬೋಪರ್‍ಸ್ ಹಗರಣದಲ್ಲಿ 64 ಕೋಟಿ, ನಂತರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 70 ಸಾವಿರ ಕೋಟಿ, 2ಜಿ ಹಗರಣದಲ್ಲಿ 1.76 ಲಕ್ಷ ಕೋಟಿ, ಕಲ್ಲಿದ್ದಲು ಹಗರಣದಲ್ಲಿ 1.80 ಲಕ್ಷ ಕೋಟಿ. ಇಷ್ಟೊಂದು ಸೇರಿಕೊಂಡರೆ ದೇಶ ಯಾವ ರೀತಿ ಅಭಿವೃದ್ಧಿಯಾಗಲಿದೆ ಎಂಬುದನ್ನು ಯೋಚಿಸಬೇಕಾಗಿದೆ ಎಂದರು.

ಆಡಳಿತ ಪಕ್ಷದವರು ಮಾಡುವ ಕರಾರನ್ನು ವಿರೋಧ ಪಕ್ಷದವರು ವಿರೋಧಿಸುತ್ತಾರೆ. ವಿರೋಧ ಪಕ್ಷದಲ್ಲಿದವರು 5 ವರ್ಷದ ನಂತರ ಆಡಳಿತದ ಚುಕ್ಕಾಣಿ ಹಿಡಿದಾಗ ಅವರೂ ಅದನ್ನೇ ಮುಂದುವರಿಸುತ್ತಾರೆ. ಇದನ್ನು ವಿರೋಧಿಸುವುದು, ಸಭಾತ್ಯಾಗ ಮಾಡಿದರೂ ಅಂತಹ ಕರಡನ್ನು ಆಡಳಿತ ಪಕ್ಷದವರು ಜಾರಿ ಮಾಡುತ್ತಾರೆ. ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯೇ ನಡೆಯುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ನಾವಿರುವಾಗ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯುತ್ತವೆಯೇ ಎಂದು ಪ್ರಶ್ನಿಸಿದರು.

ಇಂತಹ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದರೆ ನಮ್ಮಿಂದ ಮಾತ್ರ ಸಾಧ್ಯ. ಮತದಾರರು ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಕ್ಷೇತ್ರಕ್ಕೆ ನಿಂತ ವ್ಯಕ್ತಿ ನಮ್ಮ ಹಿತ ಕಾಪಾಡುತ್ತಾನೋ ಇಲ್ಲವೋ ಎಂಬುದನ್ನು ನೋಡಬೇಕು. ಯಾರೂ ಒಳ್ಳೆಯವರಲ್ಲ ಎಂದಾದರೆ ನೋಟಾಕ್ಕೆ ಮತ ಹಾಕಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ವಿ.ಆರ್.ಸುದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್ ಕುಮಾರ್, ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಮಹಿಳಾಧ್ಯಕ್ಷೆ ಸೌಭಾಗ್ಯ ಶಿವಲಿಂಗು, ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಪಾಲ್ಗೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ