ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಕಟ್ಟಿ ಹಾಕುವುದಕ್ಕಾಗಿ ಬಿಜೆಪಿ ನಾಯಕರು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಕುತಂತ್ರ ನಡೆಸುತ್ತಿದ್ಧಾರೆಂದು ಆಕ್ರೋಶ ವ್ಯಕ್ತಪಡಿಸಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನಾಯಕರ ವಿರುದ್ದ ಘೋಷಣೆಗಳನ್ನು ಮೊಳಗಿಸಿದರು. ರಾಹುಲ್ ಅವರನ್ನು ಕೇಂದ್ರದ ಬಿಜೆಪಿ ಸರ್ಕಾರ ತೇಜೊವಧೆ ಮಾಡುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುತಂತ್ರ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಆರ್ ಎಸ್ ಎಸ್ ಸಂಘಟನೆಗಳು ರಾಹುಲ್ ಗಾಂಧಿಯವರ ವಿರುದ್ದ ಷಡ್ಯಂತ್ರ ರಾಜಕಾರಣ ಮಾಡುತ್ತಿವೆ, ರಾಹುಲ್ ಗಾಂಧಿ ಅಂದ್ರೆ ಬಿಜೆಪಿ ನಾಯಕರಿಗೆ ಭಯ ಶುರುವಾಗಿದೆ ಎಂದು ಹೇಳಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ರಾಹುಲ್ ಗಾಂಧಿಯವರನ್ನು ಗುರಿಯನ್ನಾಗಿಸಿಕೊಂಡು ಸಂವಿಧಾನಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ದೇಶದ ಜನತೆ ರಾಹುಲ್ ಗಾಂಧಿಯವರ ಪರ ನಿಂತಿದ್ದಾರೆ. ಮೋದಿ, ಅಮಿತ್ ಶಾ ಅವರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆ ತಕ್ಕಪಾಠ ಕಲಿಸಲಿದ್ಧಾರೆ, ನಮಗೆ ನ್ಯಾಯಾಂಗದ ಬಗ್ಗೆ ಗೌರವ ಇದೆ. ಆದರೆ ಬಿಜೆಪಿಯವರು ಕಾನೂನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸಿ.ಎಂ.ದ್ಯಾವಪ್ಪ, ಚಿನಕುರಳಿ ರಮೇಶ್, ಯಶೋಧ, ನಗರಸಭಾ ಸದಸ್ಯ ಶ್ರೀಧರ್ ಸೇರಿದಂತೆ ಹಲವರಿದ್ದರು.




