ವಿಷ ಸೇವಿಸಿ ಬಿಜಿಎಸ್ ಆಸ್ಪತ್ರೆ ಯಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್’ಟಿಸಿ ನೌಕರ ಜಗದೀಶ್ ಇದ್ದ ಆಂಬ್ಯುಲೆನ್ಸ್ ವಾಹನವನ್ನು ತಮ್ಮ ರಾಜಕೀಯ ದೊಂಬರಾಟಕ್ಕೆ ನಾಗಮಂಗಲದಲ್ಲಿ ತಡೆದು ರೋಗಿಯ ಆರೋಗ್ಯದ ಜೊತೆ ಚೆಲ್ಲಾಟವಾಡಿರುವ ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡರವರ ಮೇಲೆ ಪೊಲೀಸ್ ಇಲಾಖೆ ಈ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ಕೆಎಸ್ಆರ್ ಟಿಸಿ ಬಸ್ ಚಾಲಕ ಜಗದೀಶ್ ರವರ ಆತ್ಮಹತ್ಯೆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸಿರುವ ಜೆಡಿಎಸ್ ನಾಯಕರ ಕೃತ್ಯ ನಾಚಿಕೆಗೇಡಿನ ಕೃತ್ಯವಾಗಿದೆ. ಆಂಬ್ಯುಲೆನ್ಸ್ ತಡೆದು ರೋಗಿಯ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ರೋಗಿಯ ಮೇಲೆ ಪ್ರಭಾವ ಬೀರಿ ಚಲುವರಾಯಸ್ವಾಮಿ ರವರ ಮೇಲೆ ರೋಗಿ ಮತ್ತು ಅವರ ಕುಟುಂಬವನ್ನು ಎತ್ತಿ ಕಟ್ಟಲು ಪ್ರಯತ್ನಿಸಿರುವ ಸಾಧ್ಯತೆ ಇದ್ದು, ಇದೇ ಸಂಧರ್ಭದಲ್ಲಿ ರೋಗಿಯ ಸಹಿ ಪಡೆದು ಮರಣ ಪೂರ್ವ ಹೇಳಿಕೆ ಎಂಬ ಪತ್ರವನ್ನು ಸೃಷ್ಟಿಸಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಮಧ್ಯರಾತ್ರಿ ಆಂಬ್ಯುಲೆನ್ಸ್ ತಡೆದಿದ್ದೇಕೆ ?
ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ತನ್ನ ಬೆಂಬಲಿಗರ ಜೊತೆ ನಡುರಸ್ತೆಯಲ್ಲಿ ತುರ್ತು ವಾಹನವನ್ನು ತಡೆಯುವುದರ ಹಿಂದೆ ಖಂಡಿತವಾಗಿ ಷಡ್ಯಂತ್ರ ಅಡಗಿದೆ, ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದ್ದು, ಇದರ ಬಗ್ಗೆ ಶೀಘ್ರವಾಗಿ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.
ಯಾವುದೇ ರೋಗಿಗೆ ಕ್ಲಿಷ್ಟ ಸಂದರ್ಭದಲ್ಲಿ ತುರ್ತು ಇದ್ದಾಗ ಪ್ರತಿ ಒಂದು ನಿಮಿಷ ಗೋಲ್ಡನ್ ಸಮಯವಾಗಿರುತ್ತದೆ, ಅಂತಹ ಸಂದರ್ಭದಲ್ಲಿ ರೋಗಿಯ ಪ್ರಾಣದ ಜೊತೆ ಚೆಲ್ಲಾಟವಾಡಿ ಪ್ರಕರಣವನ್ನು ರಾಜಕೀಯಗೊಳಿಸಲು ಇಂತಹ ಕೃತ್ಯ ಎಸಗಿರುವುದು ಮಾಜಿ ಶಾಸಕರಾದವರಿಗೆ ಶೋಭೆ ತರುವುದಿಲ್ಲ. ಇಂತಹ ಕೃತ್ಯವೆಸಗಿ ತಮ್ಮ ಕೆಸರನ್ನು ಕಂಡವರ ಮೈ ಮೇಲೆ ಎರಚಿ ಸಾರ್ವಜನಿಕವಾಗಿ ಬೆತ್ತಲಾಗಿರುವ ಸುರೇಶ್ ಗೌಡ ಬಹಿರಂಗವಾಗಿ ಚಲುವರಾಯ ಸ್ವಾಮಿ ಮತ್ತು ಜಿಲ್ಲೆಯ ಜನರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.
ಕುಂಟು ನೆಪ ಹೇಳುತ್ತಿದ್ದಾರೆ
ಜೆಡಿಎಸ್ ನಾಯಕರಿಗೆ ಜನರ ಮುಂದೆ ಸವಾಲು ನೀಡಿ, ಆ ನಂತರ ತಮ್ಮ ಸವಾಲುಗಳಿಗೆ ಯೂಟರ್ನ್ ಹೊಡೆಯುವ ಚಾಳಿ ಕರಗತವಾಗಿದೆ. ಸುರೇಶ್ ಗೌಡರವರು ತಾವು ಆಂಬ್ಯುಲೆನ್ಸ್ ತಡೆದುದ್ದನ್ನು ಸಾಬೀತು ಮಾಡಿದರೆ ಸಾರ್ವಜನಿಕ ಜೀವನದಿಂದ ನಿವೃತ್ತನಾಗುವುದಾಗಿ ತಿಳಿಸಿದ್ದಾರೆ. ಆದರೆ ಸಾಕ್ಷಿ ಸಮೇತ ತಮ್ಮ ಕೃತ್ಯ ಬಯಲಾದಾಗ ಕುಂಟು ನೆಪ ಹೇಳುತ್ತಿದ್ದಾರೆ. ಈ ಹಿಂದೆ ಇವರ ಪಕ್ಷದ ಮೇಲುಕೋಟೆ ಶಾಸಕರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಲೀಡ್ ನೀಡಲಿಲ್ಲ ಎಂದರೆ ರಾಜಕೀಯ ನಿವೃತ್ತಿ ಘೋಷಿಸಿಸುವುದಾಗಿ ಸವಾಲು ಹಾಕಿದ್ದರು, ಅದೇ ರೀತಿ ಕುಮಾರಸ್ವಾಮಿರವರು ತಮ್ಮ ಪಕ್ಷ ಸ್ವಂತ ಬಲದ ಮೇಲೆ ಬಹುಮತ ಗಳಿಸದಿದ್ದರೆ ಪಕ್ಷ ವಿಸರ್ಜಿಸುವುದಾಗಿ ಘೋಷಿಸಿದ್ದರು. ಆದರೆ ಇಂದು ಅವರ ನಡವಳಿಕೆಗಳು ಏನಾಗಿದೆ ಎಂಬುದು ಇತಿಹಾಸ. ಅದರ ಮುಂದುವರೆದ ಭಾಗವೇ ಸುರೇಶ್ ಗೌಡರವರ ಹೇಳಿಕೆ ಎಂದು ಕಿಡಿಕಾರಿದರು.
ಘನತೆಯನ್ನು ಮರೆತ ಹೆಚ್.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ್ ಸ್ವಾಮಿ ಅವರು ತಮ್ಮ ಸ್ಥಾನದ ಘನತೆಯನ್ನು ಮರೆತು ವಿಧಾನಸಭಾ ಅಧಿವೇಶನದಲ್ಲಿ ಹತಾಶರಾಗಿ ತಮ್ಮ ರಾಜಕೀಯ ವೈರತ್ವ ತೀರಿಸಿಕೊಳ್ಳಲು ಪ್ರಯತ್ನಿಸಿದ್ದು ಹೇಡಿತನದ ಪರಮಾವಧಿ. ಮಂಡ್ಯ ಜಿಲ್ಲೆಯನ್ನು ತಮ್ಮ ಪಾಳೇಗಾರಿಕೆಯ ಸ್ವತ್ತು ಎಂದು ಪರಿಭಾವಿಸಿರುವ ಕುಮಾರಸ್ವಾಮಿರವರು ಇಲ್ಲಿನ ನಾಯಕರನ್ನು ರಾಜಕೀಯವಾಗಿ ತುಳಿದು ತಮ್ಮ ಪಟಾಲಂಗಳ ಮೂಲಕ ಜಿಲ್ಲೆಯ ಹಿಡಿತ ಸಾಧಿಸಲು ಹೊರಟಿದ್ದಾರೆ.
5 ವರ್ಷಗಳಲ್ಲಿ ಒಂದು ಚುನಾವಣೆಯನ್ನೂ ಗೆಲ್ಲದ ಜೆಡಿಎಸ್
2018ರಲ್ಲಿ ಜಿಲ್ಲೆಯ ಜನ ಅಪಾರ ನೀರಿಕ್ಷೆಯಿಂದ ಕುಮಾರಸ್ವಾಮಿ ಮೇಲಿನ ಪ್ರೀತಿಯಿಂದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅವರ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳಿಸಿದರು. ಆ ಮೂಲಕ ಕಾಂಗ್ರೆಸ್ ಪಕ್ಷದ ಸಹಕಾರದಿಂದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಜನರನ್ನು ಬಹಳ ಹಗುರವಾಗಿ ಕಂಡು ಇಲ್ಲಿನ ನಾಯಕರನ್ನು ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಕೇವಲವಾಗಿ ಕಂಡಿದ್ದಲ್ಲದೆ ಅವಹೇಳನಕಾರಿ ಮಾತುಗಳಿಂದ ನಿಂದಿಸಿ ಅಪಹಾಸ್ಯ ಮಾಡಿದರು. ಅದರ ಪರಿಣಾಮ ಕಳೆದ ಐದು ವರ್ಷಗಳಲ್ಲಿ ಒಂದು ಚುನಾವಣೆ ಗೆಲ್ಲಲು ಕುಮಾರಸ್ವಾಮಿ ಮತ್ತು ಅವರ ಪಕ್ಷದ ನಾಯಕರಿಗೆ ಸಾಧ್ಯವಾಗಿಲ್ಲ ಟೀಕಿಸಿದರು.
ರಾಜಕೀಯವಾಗಿ ಏಳಿಗೆ ಆಗುತ್ತಿಲ್ಲ
ಮಂಡ್ಯ ಜಿಲ್ಲಾ ಪಂಚಾಯತ್ ನಲ್ಲಿ ಸಂಪೂರ್ಣ ಬಹುಮತವಿದ್ದರೂ ಒಂದು ಸಭೆ ನಡೆಸಿ ಸರ್ಕಾರದ ಅನುದಾನವನ್ನು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬಳಸಲು ಸಾಧ್ಯವಾಗಲಿಲ್ಲ. ಆದರೆ ರಾಜಕೀಯ ವಿರೋಧಿಗಳ ಮೇಲೆ ಇಂತಹ ಪ್ರಕರಣಗಳ ಮೂಲಕ ದ್ವೇಷ ಸಾಧಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು ಕುಮಾರಸ್ವಾಮಿರವರಿಗೆ ಶೋಭೆ ತರುವಂತದ್ದಲ್ಲ ಎಂದರು.
ದೇವೇಗೌಡರ ಸೇವೆ ಮತ್ತು ಹೋರಾಟದ ಪ್ರತಿಫಲ ಅವರ ಧರ್ಮದ ಫಲ ಕುಮಾರಸ್ವಾಮಿ ರಾಜಕೀಯವಾಗಿ ಎಲ್ಲಾ ಸ್ಥಾನಮಾನ ಅನುಭವಿಸಿದರು. ಆದರೆ ತಮ್ಮ ದುರಹಂಕಾರದ ನಡವಳಿಕೆ ಮತ್ತು ದ್ವೇಷ ರಾಜಕಾರಣದ ಪ್ರತಿಫಲ ಮತ್ತು ಅದರ ಕರ್ಮದಿಂದ ಇವರ ಮಗ ರಾಜಕೀಯವಾಗಿ ಏಳಿಗೆ ಆಗುತ್ತಿಲ್ಲ. ದಯಮಾಡಿ ಇನ್ನು ಮುಂದೆಯಾದರೂ ದೇವೇಗೌಡರಿಂದ ತಿಳುವಳಿಕೆ ಪಡೆದು ಸಜ್ಜನರಾಗಿ ನಾಡಿನ ಒಳಿತಿಗೆ ದುಡಿದು ಮುತ್ಸದ್ದೀತನ ಮೆರೆಯಲಿ ಎಂದು ಹೇಳಿದರು.
ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಂಶವನ್ನು ಹೊರತೆಗೆಯಲಿ. ತಪ್ಪಿತಸ್ಥರು ಯಾರೆ ಆದರೂ ಅವರಿಗೆ ಕಠಿಣ ಶಿಕ್ಷೆಯಾಗಲಿ. ಮಂಡ್ಯ ಜಿಲ್ಲೆ ರಾಜಕಾರಣಿಗಳು ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು ಗಾಂಭೀರ್ಯತೆಯಿಂದ ಜಿಲ್ಲೆಯ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಅಂತಹ ಪರಂಪರೆಯ ಜಿಲ್ಲೆಯಲ್ಲಿ ವೈಯುಕ್ತಿಕ ದ್ವೇಷದ ರಾಜಕಾರಣಕ್ಕೆ ಅಂತ್ಯವಾಡಿ ಜೆಡಿಎಸ್ ನಾಯಕರು ಸನ್ಮಾರ್ಗದಲ್ಲಿ ನಡೆಯಲಿ ಎಂದು ತಿರುಗೇಟು ನೀಡಿದರು.
ಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಲೋಕೇಶ್, ನಗರಸಭೆ ಸದಸ್ಯ ಶ್ರೀಧರ್, ತಾ.ಪಂ. ಮಾಜಿ ಸದಸ್ಯ ಪ್ರಶಾಂತ್ ಬಾಬು, ಮಂಡ್ಯ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್, ಮುಖಂಡರಾದ ನಗರಸಪ್ಪ ಹೆಗ್ಗಡೆ ಹಾಗೂ ವೈ.ಎನ್.ನಿಂಗೇಗೌಡ ಉಪಸ್ಥಿತರಿದ್ದರು.




