Thursday, November 19, 2026

ಪ್ರಾಯೋಗಿಕ ಆವೃತ್ತಿ

ಆಸ್ಪತ್ರೆಗಳಲ್ಲಿ ಸರ್ವರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಲಿ – ಡಾ. ವಿರೇಂದ್ರ ಹೆಗ್ಗಡೆ

ಸರ್ವ ಧರ್ಮೀಯರು ಯಾವುದೇ ಜಾತಿ-ಮತ ಬೇಧವಿಲ್ಲದೇ ಒಂದೆಡೆ ಸೇರುವ ಸ್ಥಳ ಎಂದರೆ ಅದು ಆಸ್ಪತ್ರೆ ಮಾತ್ರ. ಇಂತಹ ಸ್ಥಳಗಳಲ್ಲಿ ಸರ್ವರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಹೇಳಿದರು.

ಮಂಡ್ಯ ನಗರದ ಸ್ಪಂದನ ಆಸ್ಪತ್ರೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಹಯೋಗದಲ್ಲಿ ನೂತನ ಸಿಟಿ ಸ್ಕ್ಯಾನ್ ಘಟಕ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ರಕ್ಷಾ ಕಾರ್ಡ್ ಹಾಗೂ ವಿವಿಧ ವೈದ್ಯಕೀಯ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.

ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರ ನಡುವೆ ಯಾವುದೇ ಜಾತಿ-ಧರ್ಮದ ಬೇಧವಿಲ್ಲ. ನೋವಿನಿಂದ ನರಳುವ ರೋಗಿಗಳಿಗೆ ಉತ್ತಮ ಸೇವೆ ನೀಡುವುದೇ ವೈದ್ಯರು ಹಾಗೂ ಶುಶ್ರೂಷಕರ ಕಾಯಕವಾಗಬೇಕು. ರೋಗಿಗಳಿಗೆ ಒಂದೇ ಕಡೆ ಸರ್ವ ರೀತಿಯ ಸೌಲಭ್ಯಗಳು ಹಾಗೂ ಗುಣಮಟ್ಟದ ಚಿಕಿತ್ಸೆ ದೊರೆತರೆ ಆ ರೋಗಿಯು ಶೀಘ್ರ ಗುಣಮುಖರಾಗುತ್ತಾರೆ. ಸ್ಪಂದನ ಆಸ್ಪತ್ರೆಯು ಆ ದಾರಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.

ಮಂಡ್ಯ ಜಿಲ್ಲೆಯಲ್ಲಿ 8,821 ಜನರಿಗೆ 12.18 ಕೋಟಿ ಸಾಲ ನೀಡಿ, ಸ್ತ್ರೀಶಕ್ತಿಯ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಜಿಲ್ಲೆಯ ಮಹಿಳೆಯರು ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡು, ಆರ್ಥಿಕವಾಗಿ ಸದೃಢರಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀಕ್ಷೇತ್ರ ಧರ್ಮಸ್ಥಳವು ಆಧ್ಯಾತ್ಮಿಕ ಮತ್ತು ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ಕೇಂದ್ರವಾಗಿದೆ. ಶಕ್ತಿ ಮತ್ತು ಯುಕ್ತಿ ಎರಡೂ ಇದೆ. ಧಾರ್ಮಿಕ ಕಾರ್ಯಗಳ ಜತೆಗೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿಸುವ ಯೋಜನೆಗೆ ಒತ್ತು ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸ್ಪಂದನಾ ಆಸ್ಪತ್ರೆ ವತಿಯಿಂದ ಫಲಾನುಭವಿಗಳಿಗೆ ಆರೋಗ್ಯ ರಕ್ಷಾ ಕಾರ್ಡ್, ವೈದ್ಯಕೀಯ ಸಲಕರಣೆಗಳನ್ನು ವಿತರಿಸಲಾಯಿತು.

ಸಿಟಿ ಸ್ಕ್ಯಾನ್ ಉದ್ಘಾಟನಾ ಸಂದರ್ಭ ಶಾಸಕ ಪಿ.ರವಿಕುಮಾರ್ ಗಣಿಗ ಹಾಜರಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಸ್ಪಂದನ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಆದಿತ್ಯ, ಡಾ. ರವೀಂದ್ರ, ಇಕ್ಬಾಲ್, ಆಸಿಫ್ ಖಾನ್, ಅಮಿತ್ ಶಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ