Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕ್ಯಾನ್ಸರ್ ಆಸ್ಪತ್ರೆ ಆರಂಭಕ್ಕೆ ಸಚಿವರಿಗೆ ಕನ್ನಡ ಸೇನೆ ಆಗ್ರಹ

45 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಶೀಘ್ರವೇ ಪ್ರಾರಂಭಿಸಬೇಕೆಂದು ಕನ್ನಡ ಸೇನೆ ಮಂಡ್ಯ ಜಿಲ್ಲಾ ಘಟಕ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಆಗ್ರಹಿಸಿದೆ.

ಇಂದು ಸಚಿವ ಚಲುವರಾಯಸ್ವಾಮಿ ಅವರಿಗೆ ಆಗ್ರಹ ಪತ್ರ ನೀಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್,
ಮಂಡ್ಯ ಜಿಲ್ಲೆಯಲ್ಲಿರುವ ಸಹಸಾರು ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಗೆ ಗ್ರಹಣ ಹಿಡಿದಿದೆ. ತಕ್ಷಣ ರಾಜ್ಯ ಸರ್ಕಾರ ಜಿಲ್ಲೆಯ ಜನ ಪ್ರತಿನಿಧಿಗಳ ನೇತೃತ್ವದಲ್ಲಿ ಆಸ್ಪತ್ರೆ ತಕ್ಷಣ ಪಾರಂಭಿಸಬೇಕು ಎಂದು ಒತ್ತಾಯಿಸಿದರು.

ಮಂಡ್ಯ ಜಿಲ್ಲೆಯ ಕ್ಯಾನ್ಸರ್ ರೋಗಿಗಳು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಹಲವು ದಿಗ್ಗಜರ ಪ್ರಯತ್ನದಿಂದ ಜಿಲ್ಲಾ ಕ್ಯಾನ್ಸರ್ ನಿಯಂತ್ರಣ ಯೋಜನೆಯಡಿ 1994 ಫೆ.5 ರಂದು ಮಂಡ್ಯದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ ಆರಂಭವಾಯಿತು.
ಹಲವು ವರ್ಷಗಳು ಕಾಲ ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಉತ್ತಮ ಸೇವೆಯೂ ಸಿಗುತ್ತಿತ್ತು. ಮಂಡ್ಯ ಜಿಲ್ಲೆ ಮಾತ್ರವಲ್ಲದೆ ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಟಿ.ನರಸೀಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಎರಡು ವರ್ಷದಿಂದ ಆಸತ್ರೆಗೆ ಕಾಯಕಲ್ಪ ಸಿಗದೆ ದುಸ್ಥಿತಿಯತ್ತ ಸಾಗಿರುವುದು ರೋಗಿಗಳ ಸಂಕಟವನ್ನು ಹೆಚ್ಚು ಮಾಡಿದೆ ಎಂದರು.

ರಮ್ಯಾರವರು ಸಂಸದೆಯಾಗಿದ್ದ ವೇಳೆ ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಯಂತ್ರೋಪಕರಣಗಳೊಂದಿಗೆ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಯಿತು. ಈಗಿನ ಪರಿಸ್ಥಿತಿ ಹೇಗಾಗಿದೆ ಎಂದರೆ ಮಂಡ್ಯ ಜಿಲ್ಲೆಯಲ್ಲಿ 1200 ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕ್ಯಾನ್ಸರ್ ರೋಗಿಗಳು ಬಂದರೆ ಅವರನ್ನು ಬೆಂಗಳೂರು – ಮೈಸೂರು ಆಸ್ಪತ್ರೆಗಳಿಗೆ ರವಾನಿಸುವ ಕೆಟ್ಟ ಚಾಳಿ ನಡೆಯುತ್ತಿದೆ. ಇದರಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಕನಿಷ್ಟ ಮಟ್ಟದಲ್ಲಿಯೂ ಜನಪ್ರತಿನಿಧಿಗಳು ಅಧಿಕಾರಿಗಳಿಂದ ಸ್ಪಂದನೆ ಸಿಗದೆ ಇರುವುದು ದುರಂತ ಎಂದರು.

ಕ್ಯಾನ್ಸರ್ ರೋಗಿಗಳು ಪ್ರತಿ ವಾರವೂ ರೋಗಕ್ಕೆ ಚಿಕಿತ್ಸೆ ಪಡೆಯಲು ಬೆಂಗಳೂರು-ಮೈಸೂರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದ ಗ್ರಾಮೀಣ ಭಾಗದ ಜನರು ಚಿಕಿತ್ಸೆಗೆ ಹಣ ಕೊಡುವುದಲ್ಲದೆ ದೂರದ ಪ್ರಯಾಣವನ್ನು ಮಾಡಬೇಕಾಗಿದೆ. ಇನ್ನೂ ಆರ್ಥಿಕವಾಗಿ ಹಿಂದುಳಿದಿರುವವರ ಪಾಡು ಹೇಳತೀರದು.
ಇಂದಿಗೂ ಪ್ರತಿನಿತ್ಯ 25-30 ಜನ ರೋಗಿಗಳು ಚಿಕಿತ್ಸೆಗೆಂದು ಬಂದು ಚಿಕಿತ್ಸೆ ಸಿಗದೇ ಹೋಗಬೇಕಾಗಿದೆ. ರಾಜ್ಯ ಸರ್ಕಾರ ಇದನ್ನು ಮನಗಂಡು ತಕ್ಷಣ ರೋಗಿಗಳಿಗೆ ಮತ್ತು ಹೊರ ಜಿಲ್ಲೆಗಳ ರೋಗಿಗಳಿಗೆ ಅನುಕೂಲವಾಗಲು ಕ್ಯಾನ್ಸರ್ ಆಸ್ಪತ್ರೆಯನ್ನು 15 ದಿನದ ಒಳಗಡೆ ಪ್ರಾರಂಭಿಸಲು ತಾವು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್. ಜಿಲ್ಲ ಮಹಿಳಾ ಅಧ್ಯಕ್ಷರಾದ ಸೌಭಾಗ್ಯ. ಉಪಾಧ್ಯಕ್ಷರಾದ ಮಹಾಂತಪ್ಪ. ಎಮ್ ಬೆಟ್ಟಳ್ಳಿ ಮಂಜುನಾಥ್. ಮಂಡ್ಯ ನಗರ ಅಧ್ಯಕ್ಷ ಶಿವಾಲಿ. ಜಿಲ್ಲೆ ಕಾರ್ಯದರ್ಶಿ ಶಿವು. ಜಿಲ್ಲಾ ಸಂಘಟನೆ ಕಾರ್ಯದರ್ಶಿ ಅಂದಾನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್. ಜಿಲ್ಲಾ ಸಂಚಾಲಕ ಶಿವರಾಜ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಅರಕೆರೆ ರಾಘು,ಅಭಿಷೇಕ್ ಮದ್ದೂರು ತಾಲೂಕು ಚಂದ್ರು, ಮಂಡ್ಯ ತಾಲೂಕು ಬಸವರಾಜ್,ರವಿಕನ್ನಡ ಸೇನೆ ಪದಾಧಿಕಾರಿಗಳು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ