ಇಂದು ವಿಧಾನಸಭೆಯಲ್ಲಿ ಮಸೂದೆಯ ಪ್ರತಿಗಳನ್ನ ಹರಿದು ಪೀಠದಲ್ಲಿದ್ದ ಉಪ ಸಭಾಧ್ಯಕ್ಷರ ಮೇಲೆಸೆದು ಸದನದ ಪಾವಿತ್ರ್ಯತೆಯನ್ನು ಹಾಳು ಮಾಡಿರುವ ಬಿಜೆಪಿ ಶಾಸಕರ ಈ ದುರ್ವರ್ತೆನೆಯನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಗ್ರಾಮೀಣಾಭೀವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ.
ಇದು ಸದನಕ್ಕೆ ತೋರಿದ ಅಗೌರವವಷ್ಟೇ ಅಲ್ಲಾ, ಬದಲಾಗಿ ಸಂವಿಧಾನಕ್ಕೆ ಮಾಡಿದ ಅಪಮಾನ. ವಿಧಾನಸಭೆಯ ಪೀಠದ ಮೇಲೆ ಅನೇಕ ವರ್ಷಗಳ ನಂತರ ದಲಿತರೊಬ್ಬರು ಆಸೀನರಾಗಿರುವುದನ್ನು ನೋಡಿ ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ. ಕಡು ಬಡತನದಲ್ಲಿ ತಾಂಡಾದಿಂದ ಬಂದು ಈ ಮಟ್ಟಕ್ಕೆ ಬೆಳೆದು ಜನರ ಆಶೀರ್ವಾದ ಗಳಿಸಿ ಉಪಸಭಾಧ್ಯಕ್ಷರಾಗಿರುವ ಧೀಮಂತ ನಾಯಕನಿಗೆ ಹೀಗೆ ಅಪಮಾನ ಮಾಡಿರುವ ಬಿಜೆಪಿಗರು ಬೇರೆ ಯಾರಾದರೂ ಆ ಸ್ಥಾನದಲ್ಲಿದಿದ್ದರೆ ಇದೇ ದುರ್ವರ್ತನೆ ತೋರುತ್ತಿದ್ದರೆ? ಅವರು ದಲಿತರೆಂದೇ ಈ ರೀತಿ ಕೇವಲದಿಂದ ವರ್ತಿಸಿದ್ದಾ? ಎಂದು ಪ್ರಶ್ನಿಸಿದ್ದಾರೆ.
ಅಧಿಕಾರದಲ್ಲಿದ್ದಾಗ 4 ವರ್ಷಗಳಲ್ಲಿ ಒಮ್ಮೆಯೂ ಶೋಷಿತ ಸಮುದಾಯಗಳ ಭೂ ಹಕ್ಕು ಸಂರಕ್ಷಣೆಗಾಗಿ PTCL ಕಾಯ್ದೆ ತಿದ್ದುಪಡಿ ಜಾರಿ ಮಾಡಲು ಮುಂದಾಗಲಿಲ್ಲ. ಆದರೆ ಇಂದು ನಾವು ಅದನ್ನು ಸದನದಲ್ಲಿ ಮಂಡಿಸುವಾಗ ಈ ರೀತಿ ಕೃತಕವಾಗಿ ಕೋಲಾಹಲ ಎಬ್ಬಿಸಿ ದಲಿತ ಸಮಾಜಕ್ಕೆ ನ್ಯಾಯವನ್ನು ಇನ್ನಷ್ಟು ವಿಳಂಬ ಮಾಡುವ ದುರುದ್ದೇಶ ಬಿಜೆಪಿಯದ್ದಾಗಿದೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹೀಗೆ ಕುಚೋಧ್ಯಕ್ಕೆ ಮುಂದಾಗುವುದು ಬಿಜೆಪಿ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ದುರಭ್ಯಾಸ. ಆದರೆ, ಇವರ ದಲಿತ ವಿರೋಧಿ ವರ್ತನೆ ಹಾಗೂ ನಾಟಕವನ್ನು ರಾಜ್ಯದ ಪ್ರಜ್ಞಾವಂತ ಜನ ಖಂಡಿತ ಒಪ್ಪುವುದಿಲ್ಲ, ಲಂಬಾಣಿ ನಾಯಕನ ಮೇಲಿನ ಬಿಜೆಪಿಗರ ಈ ದುರ್ವತನೆಯನ್ನು ನಾನು ತೀಕ್ಷ್ಣವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.




