ಸರ್ಕಾರದ ಮಹಾತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಜನರು ಯಾವುದೇ ಹಣ ನೀಡುವಂತಿಲ್ಲ, ಯಾರಾದರೂ ಹಣ ಪಡೆದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಕೆ.ಎನ್.ಲೋಕೇಶ್ ಎಚ್ಚರಿಕೆ ನೀಡಿದರು.

ಮಳವಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖಾ ಅಧಿಕಾರಿಗಳ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳ, ನೋಡಲ್ ಅಧಿಕಾರಿಗಳ ಹಾಗೂ ಸೇವಾ ಕೇಂದ್ರಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ಸರ್ಕಾರದ ಯೋಜನೆ ಸಮರ್ಪಕ ಜಾರಿಗೆ ಎಲ್ಲರ ಸಹಕಾರ ಮುಖ್ಯವಾಗಿದೆ. ಅರ್ಜಿ ಸಲ್ಲಿಕೆ ವೇಳೆ ಯಾವುದೇ ಗೊಂದಲ ಹಾಗೂ ಲೋಪವಾಗದಂತೆ ಸ್ಥಳೀಯ ಅಧಿಕಾರಿಗಳು ಜಾಗೃತಿ ವಹಿಸಬೇಕು ಸೂಚನೆ ನೀಡಿದರು.
ಸರ್ಕಾರದ ಮಟ್ಟದಲ್ಲಿ ಈಗಾಗಲೇ ಯೋಜನೆಗೆ ಚಾಲನೆ ನೀಡಲಾಗಿದ್ದು, ತಾಲೂಕು ಆಡಳಿತದಿಂದ ಯೋಜನೆಯ ನೋಂದಣಿಗೆ ಬೇಕಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೇಷನ್ ಕಾರ್ಡ್ ನ ಯಜಮಾನಿಗೆ ಹಣ ನೀಡಲಾಗುತ್ತಿದೆ. ಜನರು ಯಾವುದೇ ಗೊಂದಲ ಮಾಡಿಕೊಳ್ಳಬಾರದು.
ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಯ ಕಚೇರಿಗಳ ಮೂಲಕ ನಿಮ್ಮ ನೋಂದಣಿಗೆ ನಿಗದಿಯಾಗಿರುವ ಸ್ಥಳ, ದಿನ ಮತ್ತು ಸಮಯದ ಸಂದೇಶ ನಿಮ್ಮ ಮೊಬೈಲ್ ಗೆ ಬರಲಿದ್ದು, ಅದರಂತೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಡಿವೈಎಸ್ ಪಿ ನವೀನ್ ಕುಮಾರ್, ಸಿಡಿಪಿಒ ದೀಪಾ. ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ತಾ.ಪಂ.ಸಹಾಯಕ ನಿರ್ದೇಶಕ ಪಾರ್ಥಸಾರಥಿ ಇದ್ದರು.




