ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ನೂತನ ಮಂಡ್ಯ ಜಿಲ್ಲಾಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಕೆ.ಸಿ.ರವೀಂದ್ರರವರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯ ಸಂಘದ ಉಪಾಧ್ಯಕ್ಷ ಎಲ್.ಕೃಷ್ಣ ಉಪಸ್ಥಿತಿಯಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಕೆ.ಸಿ.ರವೀಂದ್ರ, ಮದ್ದೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಶಿವಲಿಂಗೇಗೌಡ, ಮಳವಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ನಾಗೇಗೌಡ, ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಗಂಗಾಧರಗೌಡ, ಶ್ರೀರಂಗಪಟ್ಟಣದ ತಾಲ್ಲೂಕು ಅಧ್ಯಕ್ಷರಾಗಿ ದೇವರಾಜು ಅವರನ್ನು ನಿಯೋಜಿಸಲು ಸಭೆ ತೀರ್ಮಾನಿಸಿತು.
ಮುಂದಿನವಾರದಲ್ಲಿ ಸಭೆ ಕರೆದು ಉಳಿದ ಮೂರು ತಾಲ್ಲೂಕುಗಳ ಅಧ್ಯಕ್ಷನ್ನು ನೇಮಿಸಿ, ಸಂಘಟನೆಗೆ ಒತ್ತು ಕೊಡಲು ನಿರ್ಧರಿಸಲಾಯಿತು.
ಜಿಲ್ಲಾ ಹಾಗೂ ತಾಲ್ಲೂಕು ಸಂಘಕ್ಕೆ ಅಗತ್ಯ ಪದಾಧಿಕಾರಿಗಳನ್ನು ನೇಮಿಸಿಕೊಂಡು ಸಂಘದ ಸಂಘಟನೆಯನ್ನು ಬಲಗೊಳಿಸಬೇಕು ಹಾಗೂ ಸಮಾಜದ ಅಭ್ಯುದಯಕ್ಕೆ ಶ್ರಮಿಸಬೇಕು. ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ರಾಜ್ಯ ಸಮಿತಿ ಉಪಾಧ್ಯಕ್ಷ ಎಲ್.ಕೃಷ್ಣ ಕಿವಿಮಾತು ಹೇಳಿದರು.
ನೂತನ ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಸಂಘಟನೆಯ ಹೊಣೆಗಾರಿಕೆ ನೀಡಲಾಗಿದೆ, ಇದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ, ಸಂಘಟನೆಯ ಬಲವರ್ಧನೆಗೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕಾರ್ಯಪ್ರವೃತ್ತವಾಗುವುದಾಗಿ ತಿಳಿಸಿದರು.
ಸಭೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತ ಕೃಷ್ಣ, ಜಿಲ್ಲಾ ಸಂಘದ ಪದಾಧಿಕಾರಿಗಳಾದ ಬೋರೇಗೌಡ, ಶಿವಲಿಂಗೇಗೌಡ, ಸಂಪಳ್ಳಿ ಶಿವಶಂಕರ್, ಸೌಭಾಗ್ಯ ಶಿವಲಿಂಗಯ್ಯ, ನಾಗಲಿಂಗಪ್ಪ, ಶಿವರಾಮು, ವಡ್ಡರಹಳ್ಳಿ ಚಂದ್ರು ಇತರರಿದ್ದರು.




