ಮಂಡ್ಯ ಜಿಲ್ಲೆಯ ಜೇವನಾಡಿ ಕೃಷ್ಣರಾಜ ಸಾಗರ 100 ಅಡಿ ತಲುಪಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕಾವೇರಿಯ ಉಗಮ ಸ್ಥಳ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ
ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಕೃಷ್ಣರಾಜ ಸಾಗರ ತುಂಬಿ ಕೊಳ್ಳುತ್ತಿದೆ.
124.80 ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಕನ್ನಂಬಾಡಿ ಜಲಾಶಯದಲ್ಲಿ ಜೂನ್ 1 ರಂದು 80 ಅಡಿ ನೀರು ಸಂಗ್ರಹವಾಗಿತ್ತು. ಇದಾಗಿ 24 ದಿನಗಳಲ್ಲಿ 100 ಅಡಿ ತಲುಪಿದೆ.
ಕಳೆದ ವಾರದಿಂದೀಚೆಗೆ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ನೀರು ಸುರಿಯುತ್ತಿದ್ದು,ಹೀಗೆ ಮಳೆ ಸುರಿದರೆ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗುತ್ತದೆ ಎಂಬ ವಿಷಯ ಈ ಭಾಗದ ರೈತರು,ಜನರಲ್ಲಿ ಸಂತಸ ಮೂಡಿಸಿದೆ.
ಮಂಗಳವಾರ ಬೆಳಿಗ್ಗೆ 48,025 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದು ಬೆಳಿಗ್ಗೆ ವೇಳೆಗೆ ಜಲಾಶಯದಲ್ಲಿ ನೀರು 100 ಅಡಿಗೆ ತಲುಪಿದ್ದು, ಒಂದೇ ದಿನದಲ್ಲಿ 5 ಅಡಿ ನೀರು ಹರಿದು ಬಂದಿದೆ.

ಈಗಾಗಲೇ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ನೀರು ಹೊರ ಬಿಡಲಾಗಿದ್ದು, ಹಾಗಾಗಿ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಅಲ್ಲಿಂದಲೂ ನೀರನ್ನು ಹೊರಕ್ಕೆ ಬಿಟ್ಟರೆ ಕನ್ನಂಬಾಡಿ ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರಲಿದೆ.
ಮುಂಗಾರು ವೈಫಲ್ಯದಿಂದ ನೀರಿಲ್ಲದೆ ಸೊರಗಿದ್ದ ಕನ್ನಂಬಾಡಿ ಜಲಾಶಯ ಭರ್ತಿಯಾಗುತ್ತಿರುವುದು ಕೃಷಿ ಚಟುವಟಿಕೆ ಕೈಗೊಳ್ಳುವ ರೈತರ ಸಂತಸಕ್ಕೆ ಕಾರಣವಾಗಿದೆ.ಈ ಬಾರಿ ಸರಿಯಾದ ಸಮಯಕ್ಕೆ ಮುಂಗಾರು ಆರಂಭವಾಗದೆ, ಮಳೆಯಿಲ್ಲದೆ ಕನ್ನಂಬಾಡಿ ಸೊರಗಿತ್ತು.ಈ ಬಾರಿ ಕುಡಿಯುವ ನೀರಿಗೂ ತತ್ವಾರವಾಗುವ ಸಂಭವವಿದ್ದು,ರೈತರು ಬೆಳೆಗೆ ನೀರು ಸಿಗುವುದು ಅನುಮಾನ ಎಂಬ ಮಾತು ಕೇಳಿ ಬರುತ್ತಿತ್ತು.ಆದರೆ ಸತತ ಮಳೆಯಿಂದ ಕನ್ನಂಬಾಡಿ ಜಲಾಶಯ ಭರ್ತಿಯಾಗುತ್ತಾ,ಕೃಷಿ ಚಟುವಟಿಕೆ ಆರಂಭವಾಗಿರುವುದು ನೆಮ್ಮದಿ ತಂದಿದೆ.




