Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಮಣಿಪುರ ಮಹಿಳೆಯರ ಮೇಲೆ ಪೈಶಾಚಿಕ ಕೃತ್ಯ ಖಂಡಿಸಿ ಪ್ರತಿಭಟನೆ

ಮಣಿಪುರ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಕ್ರೈಸ್ತ ಬುಡಕಟ್ಟು ಮಹಿಳೆಯರನ್ನು ನಗ್ನಗೊಳಿಸಿ, ಪೈಶಾಚಿಕ ಕೃತ್ಯ ಎಸಗಿರುವುದನ್ನು ಖಂಡಿಸಿ ಧ್ವನಿ ಮಹಿಳಾ ಸಂಸ್ಥೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶವನ್ನು ಹೊರಹಾಕಿದರು.

ಮದ್ದೂರು ಪಟ್ಟಣದ ಪುರಸಭೆ ಕಾರ್ಯಾಲಯ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಧ್ವನಿ ಮಹಿಳಾ ಸಂಸ್ಥೆಯ ಅಧ್ಯಕ್ಷೆ ರಜನಿರಾಜ್ ನೇತೃತ್ವದಲ್ಲಿ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಮಹಿಳೆರಿಗೆ ಸಂತಾಪ ಸೂಚಿಸಿ, ಮೇಣದ ಬತ್ತಿ ಹಚ್ಚಿ ಮೌನ ಪ್ರತಿಭಟನೆ ನಡೆಸಿದರು. ಇಂತಹ ಪೈಶಾಚಿಕ ಕೃತ್ಯ ಎಸಗಿರುವುದನ್ನು ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಂಡು, ಶಿಕ್ಷ ವಿಧಿಸುವಂತೆ ಒತ್ತಾಯಿಸಿದರು.

ಧ್ವನಿ ಮಹಿಳಾ ಸಂಸ್ಥೆಯ ಅಧ್ಯಕ್ಷೆ ರಜನಿರಾಜ್ ಮಾತನಾಡಿ, ಮಣಿಪುರ ರಾಜ್ಯದಲ್ಲಿ ಜನಾಂಗೀಯ ಗಲಭೆ, ಮಹಿಳೆಯರ ಮೇಲಿನ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಮಾಡಿದ ದುಷ್ಕರ್ಮಿಗಳ ವಿರುದ್ಧ ರಾಷ್ಟ್ರಪತಿಗಳು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು,  ಪೈಶಾಚಿಕ ಕೃತ್ಯ ಎಸಗಿರುವುದನ್ನು ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಂಡು, ಶಿಕ್ಷ ವಿಧಿಸುವಂತೆ ಒತ್ತಾಯಿಸಿದರು.

ಜಾಹೀರಾತು

ಕಳೆದ 2 ತಿಂಗಳಿಂದ ಜನಾಂಗೀಯ ಗಲಭೆ ನಡೆಯುತ್ತಿದೆ. 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 40 ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಇದಲ್ಲದೇ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿವೆ. ಹಿಂಸಾಚಾರ ನಿಯಂತ್ರಣ ಮಾಡುವಲ್ಲಿ ಮಣಿಪುರದ ಮುಖ್ಯಮಂತ್ರಿ, ದೇಶದ ಪ್ರಧಾನಿ ವಿಫಲರಾಗಿದ್ದು, ಈ ಇಬ್ಬರಿಂದಲೂ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.

ಇಂತಹ ಕೃತ್ಯಗಳನ್ನು ದೇಶದ ಸರ್ವೋಚ್ಛ ನ್ಯಾಯಾಲಯವೂ ಕೂಡ ಖಂಡಿಸಿ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆದರೂ ಪ್ರಧಾನ ಮಂತ್ರಿಗಳ ಹೇಳಿಕೆ ಜನರ ಕಣ್ಣೊರೆಸುವ ತಂತ್ರವಾಗಿದೆ. ಇದಲ್ಲದೆ ಮಣಿಪುರ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಹೋರಾಟಕ್ಕೆ ಮುಂದಾದ ಎನ್ ಎಫ್ ಐ ಡಬ್ಲ್ಯೂ ಸಂಘಟನೆಯ ಮಹಿಳಾ ಮುಖಂಡರ ಮೇಲೆ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ರದ್ದು ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಿಳಾ ಪರ ಹೋರಾಟಗಾರರಾದ ಯಶೋದಾ, ವೀಣಾ, ಚನ್ನಸಂದ್ರ ಲಕ್ಷ್ಮಣ್ ಎಂ.ಬಿ.ಕೆ.ಸಂಸ್ಥೆ ಪದಾಧಿಕಾರಿಗಳು, ಪ್ರಗತಿಪರ ಹೋರಾಟಗಾರರು, ಪುರಸಭೆ ಸದಸ್ಯರು ಪಾಲ್ಗೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ