ಮಂಡ್ಯದ ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಸ್ವ ಉದ್ಯೋಗದ ಕಡೆಗೆ ಯುವ ಪೀಳಿಗೆ ಎಂಬ ಉದ್ಧೇಶದೊಂದಿಗೆ ಕಳೆದ 25 ವರ್ಷಗಳಿಂದ ಉಚಿತವಾಗಿ ಕೌಶಲ್ಯಾಧಾರಿತ ತರಬೇತಿ ನೀಡುತ್ತಿದ್ದು, ಪ್ರಸ್ತುತ 926 ತರಬೇತಿಗಳನ್ನು ಪೂರೈಸಿದೆ.
ಕಳೆದ ಜುಲೈ 3ರಿಂದ ಆರಂಭವಾದ ಫೋಟೋಗ್ರಫಿ ಮತ್ತು ವಿಡಿಯೋಗ್ರಾಫಿ ತರಬೇತಿ 30 ದಿನಗಳಾಗಿದ್ದು ಆಗಸ್ಟ್ 1 ರಂದು ಮುಕ್ತಾಯವಾಗಿದೆ. ತರಬೇತಿಯ ಸಮಾರೋಪ ಸಮಾರಂಭ ಬಹಳ ಅದ್ದೂರಿಯಾಗಿ ಆಯೋಜನೆಯಾಗಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕ ಫೋಟೋಗ್ರಾಫಿ ಅಸೋಸಿಯೇಷನ್ ಉಪಾಧ್ಯಕ್ಷ ನಾಗೇಶ್ ನಿರ್ದೇಶಕರಾದ ಉಮಾಶಂಕರ್, ಸುರೇಶ್, ಶಿವಶಂಕರ್ ಭಾಗವಹಿಸಿದ್ದರು.
ಕರ್ನಾಟಕ ಛಾಯಾಗ್ರಾಹಕ ಸಂಘದ ಉಪಾಧ್ಯಕ್ಷರಾದ ನಾಗೇಶ್ ಮಾತನಾಡಿ, ಸಂಘ ಸದಸ್ಯರ ಕುಂದುಕೊರತೆಗಳ ನಿವಾರಣೆಗೆ ಹಾಗೂ ಸಂಘದ ಸದಸ್ಯರ ಅಭಿವೃದ್ಧಿಗೆ ಪೂರಕವಾದ ಎಲ್ಲಾ ಸಹಕಾರ ನೀಡಲು ಸಹಾಯವಾಗಿದೆ ಹಾಗೂ ಸಂಘದಲ್ಲಿನ ಸದಸ್ಯತ್ವದ ಮಹತ್ವವನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು.

ನಿರ್ದೇಶಕ ಉಮಾ ಶಂಕರ್ ಮಾತನಾಡಿ, ಛಾಯಾಗ್ರಹಣ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮಹತ್ವ ಹಾಗೂ ಭಾಗವಹಿಸುವುದರ ಬಗೆಗೆ ಸ್ಪೂರ್ತಿದಾಯಕ ಮಾತುಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು.
ಈ 30 ದಿನಗಳ ತರಬೇತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಸೂರ್ಯಪ್ರಕಾಶ್ ತರಬೇತುದಾರರಾಗಿ ಶಿಬಿರಾರ್ಥಿಗಳಿಗೆ ಛಾಯಾಗಾರಿಕಾ ವೃತ್ತಿಯ ಎಲ್ಲಾ ಆಯಾಮಗಳು ಹಾಗೂ ಮಜಲುಗಳನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಲೀಡ್ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ಅರುಣ್, ಮಂಡ್ಯ ನಬಾರ್ಡ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಹರ್ಷಿತಾ, ಸಂಸ್ಥೆಯ ನಿರ್ದೇಶಕ ವಿವೇಕ್, ಸಂಸ್ಥೆ ಉಪನ್ಯಾಸಕರಾದ ಸುಷ್ಮಿತಾ ಜೆ. ಆರ್ ಹಾಗೂ ಪುರಂದ ಚಿತ್ರಪುರ್ ಅವರು ಉಪಸ್ಥಿತರಿದ್ದರು.




