Friday, November 20, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿ – ಜೆಡಿಎಸ್ ಪಕ್ಷಗಳು ಅಧಿಕಾರ ಇದ್ದಾಗ ಜನಪರ ಕೆಲಸ ಮಾಡಲಿಲ್ಲ, ಈಗ ಅಪಪ್ರಚಾರ ಮಾಡುತ್ತಿವೆ- ಪಿ.ಎಂ.ನರೇಂದ್ರಸ್ವಾಮಿ

ಬಿಜೆಪಿ – ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಜನಪರ ಒಂದೇ ಒಂದು ಯೋಜನೆಯನ್ನು ಕೊಡದಿದ್ದರೂ, ಉತ್ತಮವಾದ ಗ್ಯಾರಂಟಿ ಯೋಜನೆಗಳನ್ನು ತಂದು ಜನರ ಆರ್ಥಿಕ ಹೊರೆ ಕಡಿಮೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿವೆ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದರು.

ಮಂಡ್ಯ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ನಡೆದ `ಗೃಹಜ್ಯೋತಿ’ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಗೆ 750 ಕೋಟಿ ಅನುದಾನ ತಂದಿದ್ದೇನೆ 

ಜಿಲ್ಲೆಯ ಅಭಿವೃದ್ಧಿಗೆ ಕೇವಲ ಎರಡೂವರೆ ತಿಂಗಳಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ 750 ಕೋಟಿ ರೂ. ಅನುದಾನ ತಂದಿದ್ದೇವೆ.

ಮಂಡ್ಯ ತಾಲ್ಲೂಕಿನ ಹಂಪಾಪುರ ಬಳಿ 400 ಕೆವಿ ವಿದ್ಯುತ್ ಸಬ್‌ಸ್ಟೇಷನ್ ಸ್ಥಾಪಿಸಲು 600 ಕೋಟಿ, ಮೈಶುಗರ್ ಪುನಶ್ಚೇತನಕ್ಕೆ 50 ಕೋಟಿ, ಮಂಡ್ಯ ನಗರದ ಅಭಿವೃದ್ಧಿಗೆ 25 ಕೋಟಿ ರೂ. ತಂದಿದ್ದೇವೆ  ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.

ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದಿದ್ದೇವೆ. ಜಿಲ್ಲೆಯಲ್ಲಿ `ಗೃಹಜ್ಯೋತಿ’ ಯೋಜನೆಗೆ ಶೇ. 85ರಷ್ಟು ಜನ ನೋಂದಣಿಯಾಗಿದ್ದಾರೆ. ಇದೇ ತಿಂಗಳ 17ರಿಂದ ಮಹಿಳೆಯರಿಗೆ `ಗೃಹಲಕ್ಷ್ಮಿ’ ಯೋಜನೆಯಡಿ 2 ಸಾವಿರ ರೂ. ಅವರ ಖಾತೆಗೆ ಬರಲಿದೆ. ಒಂದು ಕುಟುಂಬಕ್ಕೆ ಒಟ್ಟಾರೆ 5 ಸಾವರಿ ರೂ. ಸಿಗಲಿದೆ. ಈ ಹಣವನ್ನು ಉಳಿಸಿ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಒಳ್ಳೆಯ ಕೆಲಸಗಳಿಗೆ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಎಲ್ಲ ಶಾಸಕರು ಒಗ್ಗಟ್ಟಾಗಿ ಜಿಲ್ಲೆಯ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟ ಮಾಡುತ್ತೇವೆ. ಅದೇ ರೀತಿ ಕೆ.ಆರ್.ಎಸ್. ಹಾಗೂ ರೈತರ ಹಿತ ಕಾಪಾಡುತ್ತೇವೆ. 5 ಗ್ಯಾರಂಟಿ ಯೋಜನೆಗಳಿಂದ ಕಂಗೆಟ್ಟಿರುವ ಬಿಜೆಪಿ ಮತ್ತು ಜಾ.ದಳದ ನಾಯಕರಿಗೆ ಕೇವಲ ಟೀಕೆ ಮಾಡುವುದೇ ಕೆಲಸವಾಗಿದೆ. ನಾವು ಬೇಜಾರು ಮಾಡಿಕೊಳ್ಳಲ್ಲ. ಟೀಕೆ ಮಾಡುವವರಿಗೆ ಇಂತಹ ಯೋಜನೆಗಳನ್ನು ಜನರಿಗೆ ಕೊಡಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

ಈ  ಹಿಂದೆ ಇಂದಿರಾಗಾಂಧಿ ಅವರು ಬಡವರಿಗೆ ಬಡವರಿಗೆ ಯೋಜನೆಗಳನ್ನು ರೂಪಿಸಿದಾಗ ಬಿಜೆಪಿಯವರು ಇರಲೇ ಇಲ್ಲ. ತಂತ್ರಜ್ಞಾನದ ಯುಗ ತಂದವರು ರಾಜೀವ್ ಗಾಂಧಿ. ರಾಹುಲ್ ಗಾಂಧಿ ಅವರನ್ನು ತೇಜೋವಧೆ ಮಾಡಿ ಸಂಸದರ ಸ್ಥಾನದಿಂದ ಅನರ್ಹಗೊಳಿಸಿದರು. ಆದರೆ, ಕೊನೆಗೂ ಸತ್ಯಕ್ಕೆ ಜಯ ದೊರಕಿತು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಕಾಂಗ್ರೆಸ್ಸಿಗರಲ್ಲಿ ಹೊಸ ಚೈತನ್ಯ ಬಂದಿದೆ. ನುಡಿದಂತೆ ನಡೆದಿದ್ದೇವೆ, ನುಡಿದಂತೆ ನಡೆಯುತ್ತೇವೆ ಎಂದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಪಿ.ರವಿಕುಮಾರ್ ಗಣಿಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್, ಬಿ.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಖಂಡ ಬಿ.ಎಲ್.ದೇವರಾಜು, ಕುರುಬರ ಸಂಘದ ಅಧ್ಯಕ್ಷ ಸುರೇಶ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ