ಭಾರತ ದೇಶದ ಯುವಕರು ತಮ್ಮ ಅರಿವನ್ನು, ಸಂಕಲ್ಪ ಶಕ್ತಿಯನ್ನು ಬೆಳೆಸಿಕೊಂಡು ದೇಶವನ್ನು ಕಟ್ಟುವ ಇಚ್ಛಾಶಕ್ತಿ ಪ್ರಬಲವಾಗಿದ್ದಾಗ ದೇಶದ ಪ್ರಗತಿ ಸಾಧ್ಯ ಎಂದು ಖ್ಯಾತ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಅಭಿಪ್ರಾಯಸಿದರು
ಮಂಡ್ಯನಗರದ ಗಾಂಧಿ ಭವನದಲ್ಲಿ ಗಾಂಧಿ ಸ್ಮಾರಕ ಟ್ರಸ್ಟ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಭವನ ಬೆಂಗಳೂರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತ ದೇಶದ ಯುವಕರು ದುರ್ಬಲರೇ’ ಎಂಬ ವಿಚಾರವಾಗಿ ಮಾತನಾಡಿದ ಅವರು, ಇಂದಿನ ಯುವಕರ ಮನಸ್ಥಿತಿ ಅತ್ಯಂತ ಸೂಕ್ಷ್ಮವಾಗಿದ್ದು ನಾಡು ಹಾಗೂ ದೇಶದ ಬಗ್ಗೆ ಅಭಿಮಾನವನ್ನು ಹೊಂದುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.
ಮೊಬೈಲ್ ಹಾಗೂ ವಿದೇಶ ಸಂಸ್ಕೃತಿಯ ದಾಸರಾಗಿ ನಾಡಿನ ಉತ್ಕೃಷ್ಟ ಸಂಸ್ಕೃತಿಯ ಪರಂಪರೆಯ ಮಹನೀಯರ ಆದರ್ಶದ ಗುಣಗಳನ್ನು ಅನುಸರಿಸುವಲ್ಲಿ ಅನುಸರಿಸುವಲ್ಲಿ ಹಿಂದೆ ಬೀಳುತ್ತಿದ್ದಾರೆ ಎಂದು ವಿಷಾದಿಸಿದರು.
ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಮ.ರಾಮಕೃಷ್ಣ ಮಾತನಾಡಿ, ಯುವಕರು ಮನಸ್ಸು ಮಾಡಿದರೆ ದೇಶ ಕಟ್ಟುವುದು ಶ್ರಮವಲ್ಲ ಎಂಬ ವಿಚಾರದ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿ ಯುವಜನರು ಅರಿವನ್ನು ಮೂಡಿಸಿಕೊಳ್ಳಬೇಕಾಗಿದೆ, ತಮ್ಮನ್ನು ಸಚ್ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ, ಇದಕ್ಕೆಲ್ಲ ಮೊದಲು ಯುವಕರೇ ದೇಶ ಕಟ್ಟಲು ಅರ್ಹರೆಂಬುದನ್ನು ಆತ್ಮಾವಲೋಕನೆ ಮಾಡಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ಕೆಂಪಮ್ಮ ಕಾರ್ಕಳ್ಳಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗಾಂಧೀ ಸ್ಮಾರಕ ನಿಧಿ ಬೆಂಗಳೂರು ಉಪಾಧ್ಯಕ್ಷ ಡಾಕ್ಟರ್ ಬಿ.ಜಿ.ಶಿವರಾಜು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಡಾ. ಜಿ ಮಧು ಮಾದೇಗೌಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗಾಂಧಿ ಭವನದ ಮುಖ್ಯಸ್ಥ ಲಿಂಗಣ್ಣ ಬಂಧುಕರ್, ನಾಗಾನಂದ
ಗಮಕಿ ವಿದ್ಯಾಶಂಕರ್, ನಿವೃತ್ತ ಪ್ರಾಧ್ಯಾಪಕ ತೂಬಿನಕೆರೆ ಲಿಂಗರಾಜು, ಕೀಲಾರ ಕೃಷ್ಣೇಗೌಡ ಭಾಗವಹಿಸಿದ್ದರು.




