ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಇಲ್ಲಿಯವರೆಗೆ ಧರ್ಮಸ್ಥಳದಲ್ಲಿ ನಡೆದಿರುವ ಕೊಲೆ ಪ್ರಕರಣಗಳನ್ನು ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಧರ್ಮಸ್ಥಳದಲ್ಲಿ ಉಜಿರೆ ಕಾಲೇಜು ವಿದ್ಯಾರ್ಥಿ ಸೌಜನ್ಯ ಅವರನ್ನು ಅತ್ಯಾಚಾರಗೈದು ಹತ್ಯೆ ಮಾಡಿರುವ ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿ ಕೊಂಡಿರುವುದು ರಾಜ್ಯದ ಆಡಳಿತ ಮತ್ತು ಪೋಲಿಸ್ ವ್ಯವಸ್ಥೆಗೆ ಆದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಾಲಯ, ಚರ್ಚ್, ಮಸೀದಿಗಳನ್ನು ವಶಕ್ಕೆ ಪಡೆಯಿರಿ
ಧರ್ಮಸ್ಥಳ ಸೇರಿ ರಾಜ್ಯದ ಪ್ರಮುಖ ದೇವಾಲಯ, ಮಸೀದಿ, ಚರ್ಚ್ ಗಳನ್ನು ಸರ್ಕಾರ ವಶಕ್ಕೆ ಪಡೆಯಬೇಕು. ತಿರುಪತಿ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಾಲಯದ ಆದಾಯವನ್ನು ಅಲ್ಲಿನ ಸರ್ಕಾರಗಳು ನಿರ್ವಹಣೆ ಮಾಡುತ್ತಿದ್ದು, ಅದೇ ರೀತಿ ಧರ್ಮಸ್ಥಳದ ದೇವಾಲಯ ಸೇರಿ ರಾಜ್ಯದಲ್ಲಿ ಅಧಿಕ ಆದಾಯ ಇರುವ ಮಸೀದಿ, ಚರ್ಚು, ದೇವಾಲಯಗಳನ್ನು ವಶಕ್ಕೆ ಪಡೆದು ಹಣಕಾಸು ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಚೇತನ್ ಎಸ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪರಿಷತ್ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ವಕೀಲ ಬಿ.ಟಿ.ವಿಶ್ವನಾಥ್, ಎಸ್ ಸಿ, ಎಸ್ ಟಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ, ದುಂಡ ಲಿಂಗರಾಜ್, ಎಚ್. ಡಿ.ಜಯರಾಮ್, ಶಿವರಾಜ್ ಮರಳಿಗ, ಎಸ್.ಮಹಾದೇವಯ್ಯ, ಮಹೇಂದ್ರ, ಅಖಿಲ ಭಾರತ ವಕೀಲರ ಸಂಘದ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಕಿಶೋರ್ ನೇತೃತ್ವ ವಹಿಸಿದ್ದರು




