ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ವೈ. ಎಂ. ಶೃತಿ ಆತ್ಮಹತ್ಯೆಗೆ ಪ್ರೀತಿಸಿ ನಂಬಿಕೆ ದ್ರೋಹ ಮಾಡಿದ ಆಕೆಯ ಸಹೋದ್ಯೋಗಿ ಜಗದೀಶ್ ಬಾಬು ಕಾರಣ ಎಂದು ಶೃತಿಯ ತಂದೆ ಮಲ್ಲಪ್ಪ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮಗಳು ವೈ.ಎಂ. ಶೃತಿಯನ್ನು ಐದು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿದ ಸಹೋದ್ಯೋಗಿ ಲಿಂಗಾಯತ ಸಮುದಾಯದ ಜಗದೀಶ್ ಬಾಬು, ಕೊನೆಗೆ ನೀನು ಪರಿಶಿಷ್ಟ ಜಾತಿಯವಳು ಎಂದು ಮದುವೆಗೆ ನಿರಾಕರಿಸಿದ್ದರಿಂದಲೇ ನನ್ನ ಮಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾಳೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ನನ್ನ ಮಗಳ ಸಾವಿಗೆ ಕಾರಣವಾಗಿರುವ ಲಿಂಗಾಯಿತ ಸಮುದಾಯದ ಜಗದೀಶ್ ಬಾಬು ವಿರುದ್ಧ ಕಠಿಣ ಕ್ರಮ ಕೈಗೊಂಡು ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.

ನನ್ನ ಮಗಳು ಶೃತಿ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಸಹೋದ್ಯೋಗಿಯಾಗಿದ್ದ ಮಳವಳ್ಳಿ ತಾಲೂಕಿನ ಮಲ್ಲಿನಾಥಪುರ ಗ್ರಾಮದ ಲಿಂಗಾಯತ ಸಮುದಾಯದ ಜಗದೀಶ್ ಬಾಬು, ನನ್ನ ಮಗಳಿಗೆ ಪರಿಚಯವಾಗುತ್ತಾನೆ. ಕೆಲದಿನಗಳಲ್ಲೇ ಇಬ್ಬರೂ ಸ್ನೇಹಿತರಾಗಿ, ಪ್ರೀತಿಸಲಾರಂಭಿಸಿದರು. ನನ್ನ ಮಗಳು ಚಿಕ್ಕಮಗಳೂರಿಗೆ ವರ್ಗಾವಣೆಗೊಂಡಾಗ ಜಗದೀಶ್ ಬಾಬು ಕೂಡ ಚಿಕ್ಕಮಗಳೂರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಐದು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ನಂತರ ನನ್ನ ಮಗಳು ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದಾಗ ನಾನು ಮೇಲು ಜಾತಿಯವನು, ನೀನು ಪರಿಶಿಷ್ಟ ಜಾತಿಯವಳು, ನಮ್ಮ ಮನೆಯಲ್ಲಿ ಮದುವೆಗೆ ಒಪ್ಪುವುದಿಲ್ಲ ಎಂದು ಹೇಳಿ ಜಗದೀಶ್ ಬಾಬು ನಿರಾಕರಿಸಿದ್ದಾನೆ. ಇದರಿಂದ ನನ್ನ ಮಗಳು ಮಾನಸಿಕವಾಗಿ ನಿತ್ಯಯಾತನೆ ಅನುಭವಿಸುತ್ತಿದ್ದಳು. ಮದುವೆಗೆ ಒತ್ತಾಯಿಸಿದರೆ ಜಗದೀಶ್ ಬಾಬು ಬೆದರಿಕೆ ಹಾಕಿ ದೌರ್ಜನ್ಯ ನಡೆಸುತ್ತಿದ್ದ ಎಂದು ದೂರಿದರು.
ಈ ಬಗ್ಗೆ ಒಂದು ದಿನ ನನ್ನ ಬಳಿ ಶೃತಿ, ನಾನು ಜಗದೀಶ್ ಕಳೆದ ಐದು ವರ್ಷಗಳಿಂದ ಪ್ರೀತಿಸುತಿದ್ದೇವೆ. ಆದರೆ ಆತ ಮದುವೆಯಾಗುವಂತೆ ಒತ್ತಾಯ ಮಾಡಿದಾಗ, ನಾವು ಲಿಂಗಾಯತರಾಗಿದ್ದು, ಮದುವೆಗೆ ಮನೆಯಲ್ಲಿ ಒಪ್ಪುವುದಿಲ್ಲ ಎಂದು ಹೇಳುತ್ತಿದ್ದಾನೆ. ಹೇಗಾದರೂ ಮಾಡಿ ಅವರ ಮನೆಯವರ ಜೊತೆ ಮಾತನಾಡಿ ಮದುವೆಗೆ ಒಪ್ಪಿಸಬೇಕೆಂದು ತಿಳಿಸಿದಳು. ನಾನು ಕಳೆದ ಆರು ತಿಂಗಳ ಹಿಂದೆ ಜಗದೀಶ್ ಬಾಬುರವರ ಮಳವಳ್ಳಿ ತಾಲೂಕಿನ ಮಲ್ಲಿನಾಥಪುರ ಗ್ರಾಮಕ್ಕೆ ಹೋಗಿ ಮಗಳ ಮದುವೆಯ ಮಾತುಕತೆಯ ಪ್ರಸ್ತಾಪ ಮಾಡಿದಾಗ ಜಗದೀಶ್ ಬಾಬು ನಮ್ಮ ತಂದೆಗೆ ತುಂಬಾ ಅನಾರೋಗ್ಯವಾಗಿದೆ. ಈ ವಿಚಾರವನ್ನು ಹೇಳಿದರೆ ಇಂದೇ ಪ್ರಾಣ ಕಳೆದು ಕೊಳ್ಳುತ್ತಾರೆ ಎಂದೆಲ್ಲ ತಿಳಿಸಿ ಮುಂದೆ ಮಾತನಾಡೋಣ ಎಂದು ವಾಪಸ್ ಕಳುಹಿಸಿದ್ದರು ಎಂದು ವಿವರಿಸಿದರು.

ಕಳೆದ ಎರಡು ತಿಂಗಳು ಹಿಂದೆ ಮೈಸೂರಿನ ಸರ್ಕಾರಿ ಪ್ರವಾಸಿಮಂದಿರದಲ್ಲಿ ಜಗದೀಶ್ ಬಾಬುರವರ ಸ್ನೇಹಿತ ಮತ್ತು ನಾನು ಮಾತನಾಡಿ, ಎರಡು ಗಂಟೆ ಚರ್ಚೆ ನಡೆಸಿದರೂ ಇನ್ನು ಸ್ವಲ್ಪ ಕಾಲಾವಕಾಶ ನೀಡಿ ಎಂದು ವಾಪಸ್ ಹೋಗಿದ್ದರು. ಕೆಲದಿನಗಳ ಹಿಂದೆ ಕೊಳ್ಳೇಗಾಲದಲ್ಲಿ ಬಂದು ಐಬಿ ಬಳಿ ಮದುವೆ ವಿಚಾರ ಮಾತನಾಡಿದಾಗ, ನೀವು ಬೇರೆ ಜಾತಿಯವರು, ಈ ಮದುವೆಗೆ ನಮ್ಮ ಮನೆಯಲ್ಲಿ ಮತ್ತು ನಮ್ಮ ಸಮಾಜ ಒಪ್ಪುವುದಿಲ್ಲ. ನನ್ನ ಮನೆಯವರನ್ನೇ ಗ್ರಾಮದಿಂದ ಬಹಿಷ್ಕಾರ ಹಾಕುತ್ತಾರೆ ಎಂದು ಹೇಳಿದರು.
ಆಗ ನಾನೇ ನಿಮ್ಮ ಊರಿಗೆ ಬಂದು ನಿಮ್ಮ ಸಂಬಂಧಿಕರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರೂ, ಬೇಡ ನಾನೇ ನಮ್ಮ ಮನೆಯವರ ಜೊತೆ ಮಾತನಾಡಿ ಒಪ್ಪಿಸುತ್ತೇನೆ ಎಂದು ಜಗದೀಶ್ ಬಾಬು ಹೇಳಿ ಹೋಗಿದ್ದರು. ನನ್ನ ಮಗಳು ಚಿಕ್ಕಮಗಳೂರಿಂದ ಮಂಡ್ಯಕ್ಕೆ ವರ್ಗಾವಣೆ ಮಾಡಿಸಿಕೊಂಡಾಗ, ಜಗದೀಶ್ ಬಾಬು ಕೂಡ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಹೀಗೆ ನನ್ನ ಮಗಳನ್ನು ಐದು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ, ಕೊನೆಗೆ ಜಾತಿಯ ಕಾರಣದಿಂದ ಆಕೆಯನ್ನು ದೂರ ಮಾಡಿದ್ದರಿಂದಲೇ ನನ್ನ ಮಗಳು ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಜಗದೀಶಬಾಬುವೇ ಕಾರಣವಾಗಿದ್ದಾನೆಂದು ದೂರಿದರು.
ಕಳೆದ 4 ದಿನಗಳ ಹಿಂದೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಕೇಸ್ ದಾಖಲಿಸಿದ್ದರೂ ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ, ಕೂಡಲೇ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಶೃತಿಯ ತಾಯಿ ಜಯಕಾಂತ ಉಪಸ್ಥಿತರಿದ್ದರು.




