ಕಳೆದ ಸಾಲಿನ ಟನ್ ಕಬ್ಬಿಗೆ 150 ರೂಗಳನ್ನ ಪಾವತಿಸಬೇಕು, ಸಕ್ಕರೆ ಇಳುವರಿ ಮತ್ತು ತೂಕದಲ್ಲಾಗುವ ಮೋಸ ಪರಿಶೀಲಿಸಿ ವರದಿ ಪಡೆಯಲು ರಚಿಸಿರುವ ಸಮಿತಿಗೆ ಕಬ್ಬು ಬೆಳೆಗಾರರ ಸಂಘದ ಪ್ರತಿನಿಧಿಗಳನ್ನ ಸೇರ್ಪಡೆ ಮಾಡಬೇಕೆಂದು ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯಲ್ಲಿ ನಡೆದ ಕಬ್ಬು ಬೆಳೆಗಾರರ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಯಿತು ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್ ಎಲ್ ಭರತ್ ರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ 500 ರೂಗಳ ಎಸ್ಎ ಪಿ ದರ ನಿಗದಿಪಡಿಸಬೇಕು, ಇಲ್ಲವೇ ಟನ್ನಿಗೆ 500 ರೂಗಳ ಪ್ರೋತ್ಸಾಹ ಧನವನ್ನು ತಮಿಳುನಾಡು ರಾಜ್ಯ ಸರ್ಕಾರದ ಮಾದರಿಯಂತೆ ಬಜೆಟ್ ನಲ್ಲಿ ಹಣ ಮೀಸಲಿಟ್ಟು ನೀಡಬೇಕು. ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಕಾರ್ಖಾನೆ ಮಾಲೀಕರು ಹಣ ನೀಡಬೇಕು, ಇಲ್ಲವೇ ತಮಿಳುನಾಡು ಮಾದರಿಯಂತೆ ಕೃಷಿ ಇಲಾಖೆ ಮೂಲಕ 14 ದಿನದೊಳಗೆ ರೈತರಿಗೆ ಹಣ ಪಾವತಿಸಿ ನಂತರ ಕಾರ್ಖಾನೆ ಮಾಲೀಕರಿಂದ ಬಡ್ಡಿ ಸಮೇತ ವಸೂಲಿ ಮಾಡಿಕೊಳ್ಳುತ್ತದೆ, ಇಲ್ಲವೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮಾದರಿಯನ್ನ ಅನುಸರಿಸಬೇಕು ತೀರ್ಮಾನಿಸಲಾಯಿತು ಎಂದರು.
14 ದಿನದೊಳಗೆ ಹಣಪಾವತಿ ಮಾಡದ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನೋಟಿಸ್ ನೀಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಈಗಾಗಲೆ ವಿಳಂಬವಾಗಿ ಪಾವತಿಸಿರುವ ಹಣಕ್ಕೆ ಬಡ್ಡಿಯ ಬಾಕಿ ನೀಡಬೇಕು.
ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಶೇಕಡ 8.5 ಸಕ್ಕರೆ ಇಳುವರಿ ಆಧಾರದ ಮೇಲೆ ಟನ್ ಕಬ್ಬಿಗೆ 5000 ರೂ ನೀಡಬೇಕು. ವರ್ಷಕ್ಕೆ ಸರಿಯಾಗಿ ಕಬ್ಬು ಕಟಾವ್ ಮಾಡಿಕೊಂಡು ಕಟವಾದ 12 ಗಂಟೆಯೊಳಗೆ ಕಾರ್ಖಾನೆಗಳಿಗೆ ಅನ್ಲೋಡ್ ಆಗಬೇಕು. ಒಣಗಿ ಹಾಳು ಮಾಡಿದರೆ ಆ ನಷ್ಟವನ್ನು ಕಾರ್ಖಾನೆ ಮಾಲೀಕರೇ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ದರ್ಶನ್ ಇಂದುಕುಮಾರ್, ಎಟಿ ಕೃಷ್ಣಪ್ಪ , ವೇಣುಗೋಪಾಲ, ಸೊ.ರಾ ಶಿವರಾಮು, ಪ್ರಾಂತ ರೈತ ಸಂಘದ ರಾಮಣ್ಣ, ಕೆಕೆ ಶ್ರೀನಿವಾಸ್ ಮತ್ತಿತರರಿದ್ದರು.




