Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದ ಹಲ್ಲೇಗೆರೆಯಲ್ಲಿ ಭೂ ದೇವಿ ಆಧ್ಯಾತ್ಮಿಕ ಕೇಂದ್ರ ಸ್ಥಾಪಿಸುತ್ತಿರುವ ಡಾ.ಎಲ್.ಎನ್.ಮೂರ್ತಿ ಯಾರು ?

ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ‘ಭೂ ದೇವಿ ಆಧ್ಯಾತ್ಮಿಕ ಕೇಂದ್ರ'(ಮದರ್ ಅರ್ಥ್) ಸ್ಥಾಪಿಸುತ್ತಿರುವ ಡಾ.ಎಲ್.ಎನ್.ಮೂರ್ತಿ ಅವರು ಅಮೆರಿಕದ ಖ್ಯಾತ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಅವರ ತಂದೆ.

ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಹಲ್ಲೇಗೆರೆ ಗ್ರಾಮದ ಡಾ‌.ಎಲ್.ಎನ್.ಮೂರ್ತಿ(ಲಕ್ಷ್ಮಿ ನರಸಿಂಹ ಮೂರ್ತಿ)ಅವರು ಹೆಚ್.ಟಿ.ನಾರಾಯಣಶೆಟ್ಟಿ ಹಾಗೂ ವೆಂಕಟಲಕ್ಷ್ಮಮ್ಮ ಅವರ ಸುಪುತ್ರರು. ಇಬ್ಬರು ಸಹೋದರರು, ಮೂರು ಮಂದಿ ಸಹೋದರಿಯರ ಜೊತೆ ತುಂಬು ಕುಟುಂಬದಲ್ಲಿ ಬೆಳೆದ ಎಲ್.ಎನ್.ಮೂರ್ತಿ ಅವ,ರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನ ಕನ್ನಡದ ಸರ್ಕಾರಿ ಶಾಲೆಯಲ್ಲೂ, ಮಾಧ್ಯಮಿಕ ಶಿಕ್ಷಣವನ್ನು ಬಿದರಕೋಟೆಯಲ್ಲೂ, ಪ್ರೌಢಶಿಕ್ಷಣವನ್ನು ನಾಗಮಂಗಲದಲ್ಲೂ ಪಡೆದು ಪದವಿ ಪೂರ್ವ ಶಿಕ್ಷಣವನ್ನು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದು ವಿದೇಶದಲ್ಲಿ ನೆಲೆ ನಿಂತರು. ಡಾ.ಮೂರ್ತಿ ಅವರು ಮೈತ್ರೇಯಿ ಅವರ ಕೈ ಹಿಡಿದು ವೈವಾಹಿಕ ಬದುಕಿಗೆ ಅಡಿ ಇಟ್ಟರು, ಇವರ ಪುತ್ರ ಡಾ. ವಿವೇಕ್‌ ಮೂರ್ತಿ ಅವರು ಅಮರಿಕಾದ ಸರ್ಜನ್‌ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪುತ್ರಿ ಡಾ.ರಶ್ಮಿ ಮೂರ್ತಿ ಅವರೂ ಕೂಡ ವೃತ್ತಿಯಲ್ಲಿ ವೈದ್ಯರಾಗಿ ಅವರ ತಂದೆ ನಡೆಸುತ್ತಿದ್ದ ವೈದ್ಯಕೀಯ ಸೇವೆಯನ್ನು ಮುಂದುವರೆಸಿದ್ದಾರೆ.

ಅನಿವಾಸಿ ಭಾರತೀಯರಾದ ಡಾ.ಎಲ್.ಎನ್.ಮೂರ್ತಿ ಅವರು ತಮ್ಮ ಉನ್ನತ ಚಿಂತನೆ ಹಾಗೂ ಸಮಾಜಮುಖಿ ನಿಲುವುಗಳ ಮುಖೇನ ವಿಶ್ವಮಾನ್ಯತೆ ಹೊಂದಿದ್ದಾರೆ. ಹುಟ್ಟಿದ್ದು, ಶಿಕ್ಷಣ ಪಡೆದಿದ್ದು ಭಾರತದಲ್ಲಿಯೇ ಆದರೂ ಬೆಳೆದದ್ದು ಮಾತ್ರ ಅಮೆರಿಕಾದಲ್ಲಿ. ಇದೀಗ ಮಾತೃಭೂಮಿಯ ಋಣವನ್ನು ತೀರಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವಾಗಿ ‘ಭೂದೇವಿ ಆಧ್ಯಾತ್ಮಿಕ ಕೇಂದ್ರ’ (ಮದ‌ರ್ ಅರ್ಥ) ಯೋಜನೆಯನ್ನು ಪ್ರಾರಂಭಿಸಲು ಮುಂದಾಗಿದ್ದಾರೆ. 70 ಕೋಟಿ ವೆಚ್ಚದಲ್ಲಿ 12 ಎಕರೆ ಭೂಮಿಯಲ್ಲಿ ಈ ಯೋಜನೆ ಜನ್ಮ ತಳೆಯಲಿದೆ.

ಬಡ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಆರೋಗ್ಯಕ್ಕೆ ನೆರವು ನೀಡುವ ಮಹತ್ವದ ಉದ್ದೇಶದೊಂದಿಗೆ ಈಗಾಗಲೇ ಕಾರ್ಯಪ್ರವೃತ್ತವಾಗಿರುವ ತಮ್ಮದೇ ಸೇವಾ ಸಂಸ್ಥೆಯಾದ ಸ್ಕೋಪ್‌ ಫೌಂಡೇಷನ್‌ನಿಂದ ಧನಸಹಾಯ ಪಡೆದು ನೀಲಿ ಗ್ರಾನೈಟ್ ಮತ್ತು ವೈಟ್‌ ಸ್ಟೋನ್ ನಿಂದ 14 ಅಡಿ ಎತ್ತರದ ‘ಭೂದೇವಿ’ ಏಕಶಿಲಾ ಪ್ರತಿಮೆಯನ್ನು ಖ್ಯಾತ ಶಿಲ್ಪಿಗಳಿಂದ ಕೆತ್ತಿಸಲು ಯೋಜನೆ ರೂಪಿಸಿದ್ದಾರೆ. ಇಂದಿನ ಒತ್ತಡ ಹಾಗೂ ತಳಮಳದ ಧಾವಂತದ ಬದುಕಿನಲ್ಲಿ ತೊಡಗಿರುವ ಜನತೆಗೆ ತುಸು ಶಾಂತಿ-ನೆಮ್ಮದಿ ಕಲ್ಪಿಸುವ ಮಹದುದ್ದೇಶ ಇದರ ಹಿಂದೆ ಅಡಗಿದೆ.

ಡಿಸೆಂಬರ್ ಅಥವಾ ಜನವರಿ ಅಂತ್ಯದ ವೇಳೆಗೆ ಹುಟ್ಟೂರು ಮಂಡ್ಯ ತಾಲ್ಲೂಕಿನ ಹಲ್ಲೇಗೆರೆಯಲ್ಲಿ ನಡೆಯಲಿರುವ ‘ಭೂದೇವಿ ಆಧ್ಯಾತ್ಮಿಕ ಕೇಂದ್ರ’ (ಮದರ್ ಅರ್ಥ್) ಯೋಜನೆಯ ಭೂಮಿಪೂಜೆ ಸಮಾರಂಭಕ್ಕೆ ಅಮೆರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್ ಒಬಾಮಾ ಅವರನ್ನು ಆಹ್ವಾನಿಸಲಾಗಿದೆ. ಎಂಟು ಎಕರೆ ಜಾಗದಲ್ಲಿ ಯೋಗ ಮತ್ತು ಧ್ಯಾನ ಕೇಂದ್ರದ ಶಂಕುಸ್ಥಾಪನೆಗೆ ಟಿಬೇಟಿಯನ್‌ ಆಧ್ಯಾತ್ಮಿಕ ಗುರು ದಲೈಲಾಮ ಅವರು ಆಗಮಿಸಲಿದ್ದಾರೆ. ಡಾ.ಎಲ್.ಎನ್.ಮೂರ್ತಿ ಅವರ ಕುಟುಂಬ ಇಂತಹ ಹತ್ತು ಹಲವು ಚಾರಿಟಿ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗುವ ಮೂಲಕ ಸಮಸ್ತ ಅನಿವಾಸಿ ಭಾರತೀಯರಿಗೆ ಮಾದರಿಯಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ