ಮಂಡ್ಯ ತಾಲ್ಲೂಕಿನ ತುಂಬಕೆರೆ ಗ್ರಾಮದ ಅಲೆಮಾರಿ ಕಾಲೋನಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸುವ ಮೂಲಕ ಮಕ್ಕಳಿಗೆ ಹಾಲು-ಹಣ್ಣು ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಪತ್ರಕರ್ತ, ದ.ಕೋ ಹಳ್ಳಿ ಚಂದ್ರಶೇಖರ, ಇಂದು ಸಾಮಾಜಿಕ ಕಲ್ಯಾಣ ಕ್ರಾಂತಿ ಮಾಡಿದ ಬಸವಣ್ಣ ಅವರು ಲಿಂಗೈಕ್ಯರಾದ ದಿನ, ಈ ಮಹತ್ತರ ದಿನವನ್ನು ಮರೆಮಾಚುವ ಉದ್ದೇಶದಿಂದ ನಾಗರ ಪಂಚಮಿಯನ್ನಾಗಿ ಮಾಡಿ ಮೌಢ್ಯವನ್ನು ಬಿತ್ತಲಾಗಿದೆ ಎಂದರು.
ವಾಸ್ತವವಾಗಿ ಹಾವು ಹಾಲನ್ನು ಕುಡಿಯುವುದಿಲ್ಲ, ಉಳ್ಳವರು ಈ ಆಚರಣೆಯಲ್ಲಿ ಕುಡಿಯುವ ಹಾಲನ್ನು ಹುತ್ತದಮಣ್ಣಿಗೆ ಸುರಿದು ವ್ಯರ್ಥಮಾಡುತ್ತಾರೆ, ದೇಶದಲ್ಲಿ ಲಕ್ಷಾಂತರ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಅಂತಹ ಮಕ್ಕಳಿಗೆ ಹಾಲು ನೀಡುವ ಕೆಲಸ ಆಗಬೇಕು ಎಂದರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಡಿ.ದೇವರಾಜ್ ಕೊಪ್ಪ ಮಾತನಾಡಿ,ಹಾವು ಮಾಂಸಹಾರಿ ಸಸ್ತನಿ ಹುತ್ತಕ್ಕೆ ಹಾಲೆರೆದರೆ ಹಾಲು ಹುತ್ತದ ಮಣ್ಣಿನ ಪಾಲಾಗುತ್ತದೆಯೆ ಹೊರತು ಹಾವು ಕುಡಿಯುವುದಿಲ್ಲ, ಇಂತಹ ನೂರಾರು ಆಚರಣೆಗಳನ್ನು ಸಮಾಜದ ಮೇಲೆ ಹೇರಿ ಮೌಢ್ಯದತ್ತ ಸಮಾಜವನ್ನು ತಳ್ಳಲಾಗಿದೆ ಎಂದರು.
ಉಳ್ಳವರಿಗೆ ಬಡವರಿಗೆ ಸಹಾಯ ಮಾಡುವ ಮನಸ್ಸಿಲ್ಲ, ದೇವರಿಗೆ ಲಕ್ಷಾಂತರ ಕಾಣಿಕೆ ಹಾಕುತ್ತಾರೆ, ಅದರ ಬದಲು ಸಮಾಜದ ಒಳಿತಿಗೆ ಕೆಲಸ ಮಾಡುವ ಉದಾರತೆ ತೋರಲಿ ಎಂದರು.
ವಕೀಲ ಸುಂಡಹಳ್ಳಿ ಮಂಜುನಾಥ್ ಮಾತನಾಡಿ,ಮಾನವ ಬಂಧುತ್ವ ವೇದಿಕೆ ಕಳೆದ ಮೂರು ವರ್ಷಗಳಿಂದ ಇಂತವ ಮೌಢ್ಯ ವಿರೋಧಿ ಕೆಲಸ ಮಾಡುತ್ತಾ ಸಮಾಜದಲ್ಲಿ ವೈಜ್ಙಾನಿಕ ಮನೋಭಾವ ಬೆಳೆಸುತ್ತಾ ಬಂದಿದೆ ಇಂತಹ ಸಂಘಟನೆಯ ಸಂಸ್ಥಾಪಕರಾದ, ಲೋಕೋಪಯೋಗಿ ಸಚಿವರೂ ಆದ ಸತೀಶ್ ಜಾರಕಿಹೊಳಿಯವರು ತಮ್ಮ ಹೊಸ ಕಾರನ್ನು ಸ್ಮಶಾನದಲ್ಲಿ ಉದ್ಘಾಟಿಸಿದರು ಇದೊಂದು ಕ್ರಾಂತಿಕಾರಿ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು, ಗೊರವಾಲೆ ಚಂದ್ರಶೇಖರ್, ಉಪನ್ಯಾಸಕ ಕೆ.ಸಿ ಲೋಕೇಶ್ ಕಲ್ಲಹಳ್ಳಿ, ಮಂಜುನಾಥ್, ಹನಿಯಂಬಾಡಿ ಶೇಖರ್, ವೈರಮುಡಿ ಉಪಸ್ಥಿತರಿದ್ದರು. ಇದೇ ವೇಳೆ ಹಾಲು, ಹಣ್ಣು, ಬಿಸ್ಕೇಟ್ ವಿತರಿಸಲಾಯಿತು.




