ಮಳೆ ಕೊರತೆ, ನೀರಿನ ಸಂಕಷ್ಟ ಪರಿಸ್ಥಿತಿಯಲ್ಲೂ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯ ಯೂತ್ ಗ್ರೂಪ್ ನಡೆಸಿದ ಆತಂಕದ ನಡಿಗೆ ನೀರಿಗೆ ಉಂಟಾಗಿರುವ ಅಭಾವವನ್ನು ಪ್ರತಿಬಿಂಬಿಸಿತು.
ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ನೇತೃತ್ವದಲ್ಲಿ ಪದಾಧಿಕಾರಿಗಳು ಮಂಡ್ಯ ನಗರದ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯ ಜಾಥಾ ನಡೆಸಿದರು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ ಎಂಬ ಮುನ್ನೆಚ್ಚರಿಕೆಯಾಗಿ ಜನರಿಗೆ ನೀರು ವಿತರಣೆ ಮಾಡುವ ಮೂಲಕ ಮನವರಿಕೆ ಮಾಡಿಕೊಟ್ಟರು.
ಜಾಥಾ ಉದ್ಘಾಟಿಸುವ ಮುನ್ನ ಮಾತನಾಡಿದ ಡಾ.ಅನಿಲ್ ಆನಂದ್, ನೀರಿಗೆ ಸಂಕಷ್ಟ ಎದುರಾಗುವ ಸಮಯದಲ್ಲೆಲ್ಲಾ ತಮಿಳುನಾಡು ಕ್ಯಾತೆ ತೆಗೆಯುವುದು ಹೊಸದೇನಲ್ಲ. ತಮಿಳುನಾಡಿನ ಈ ನಡವಳಿಕೆಯನ್ನು ಕಂಡೂ ರಾಜ್ಯಸರ್ಕಾರ ಮೊದಲೇ ಎಚ್ಚೆತ್ತುಕೊಳ್ಳದಿರುವುದು ನಮ್ಮ ದೌರ್ಬಲ್ಯವಾಗಿದೆ. ನೀರಿನ ಅಭಾವ
ಕುರಿತು ತಮಿಳುನಾಡು ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ಕದ ತಟ್ಟುವ ಮುನ್ನವೇ ನಮ್ಮ ಸರ್ಕಾರ ಸಂಕಷ್ಟ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಿತ್ತು. ಅದರಲ್ಲಿ ಮಾಡಿರುವ ಲೋಪದಿಂದ ನಮ್ಮ ರೈತರು, ಜನರ
ಹಿತ ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.
ಆತಂಕದ ನಡಿಗೆಯು ಆಸ್ಪತ್ರೆ ರಸ್ತೆಯ ನಿರಾಳ ಕ್ಲಿನಿಕ್‌ನಿಂದ ಆರಂಭವಾಗಿ ನಂದಾ ವೃತ್ತ, ಮಹಾವೀರ ವೃತ್ತಕ್ಕೆ ಆಗಮಿಸಿ ವಿ.ವಿ.ರಸ್ತೆ ಮಾರ್ಗವಾಗಿ ಹೊಸಹಳ್ಳಿ ವೃತ್ತದಲ್ಲಿ ಅಂತ್ಯಗೊಂಡಿತು. ಈ ನಡಿಗೆಯಲ್ಲಿ ಡಾ.ಯಾಶಿಕಾ, ಪ್ರವೀಣ್, ದರ್ಶನ್, ನವೀನ್, ವಿನಯ್, ಸೀನಪ್ಪ, ಪ್ರಶಾಂತ್, ಮಂಜು, ಯೋಗಿ ಗುಪ್ತ, ನರೇಂದ್ರ,
ಹರೀಶ್‌ಕುಮಾರ್, ನಂಜುಂಡ, ವಿನೋದ್, ನಂದಿ ಸೇರಿದಂತೆ ಹಲವರು ಭಾಗವಹಿಸಿದ್ದರು.




