ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು (ಆ.23) ರಂದು ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಕೆ.ಎಫ್.ಸಿ.ಎಸ್.ಸಿ. ಗೋದಾಮುಗಳಿಗೆ ಭೇಟಿ ನೀಡಿ ಪಿ.ಎಂ. ಪೋಷಣ್ ಅಡಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆಗೆ ಉಪಯೋಗಿಸುವ ಶಾಲೆಗಳಿಗೆ ಸರಬರಾಜು ಮಾಡುವ ಆಹಾರ ಧಾನ್ಯಗಳ ಗುಣಮಟ್ಟವನ್ನು ಪರಿಶೀಲಿಸಿದರು.
ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಶಾಲೆಗಳಿಗೆ ಸರಬರಾಜು ಮಾಡುವ ಅಕ್ಕಿ, ಗೋಧಿ, ಸೂರ್ಯಕಾಂತಿ ಎಣ್ಣೆ ಇವುಗಳ ದಾಸ್ತಾನುಗಳನ್ನು ಪರಿಶೀಲಿಸ. ಆಹಾರ ಧಾನ್ಯಗಳನ್ನು ಶೇಖರಿಸುವ ಸ್ಥಳ ಸ್ವಚ್ಚತೆಯಿಂದಿರಬೇಕು ಎಂದರು.
ಆಹಾರ ಧಾನ್ಯಗಳ ಗುಣಮಟ್ಟ ಉತ್ತಮವಾಗಿದ್ದಲ್ಲಿ ಆಹಾರ ಧಾನ್ಯಗಳನ್ನು ಸ್ವೀಕರಿಸುವುದು ಮತ್ತು ಗುಣಮಟ್ಟ ಚೆನ್ನಾಗಿಲ್ಲದಿದ್ದಲ್ಲಿ ಅವುಗಳನ್ನು ತಿರಸ್ಕರಿಸುವಂತೆ ಮಂಡ್ಯ ಜಿಲ್ಲಾ ವ್ಯವಸ್ಥಾಪಕರು ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ಕೆ ಎಫ್ ಸಿ ಎಸ್ ಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಲಿ ಸರಬರಾಜಾಗಿರುವ ಆಹಾರ ಧಾನ್ಯಗಳ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ಮುಂದೆಯೂ ಸಹ ಇದೇ ರೀತಿಯ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ಸ್ವೀಕರಿಸುವುದು ಎಂದರು.
ಬನ್ನಿಮಂಟಪ ವೀಕ್ಷಣೆ

ಶ್ರೀರಂಗಪಟ್ಟಣ ತಾಲ್ಲೂಕು ಕಿರಂಗೂರು ಗ್ರಾಮಕ್ಕೆ ಭೇಟಿ ನೀಡಿ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಉತ್ಸವದ ಪೂರ್ವ ಸಿದ್ಧತೆ ಕುರಿತು ಕಿರಂಗೂರು ಬನ್ನಿಮಂಟಪವನ್ನು ವೀಕ್ಷಿಸಿದರು.
ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯಾನ ನಿರ್ಮಾಣ, ಫೆನ್ಸಿಂಗ್ ಅಳವಡಿಕೆ, ಕಲ್ಲುಬೆಂಚು ಅಳವಡಿಕೆ ಹಾಗೂ ಇತರೆ ಅವಶ್ಯಕ ಕಾಮಗಾರಿಗಳನ್ನು ಕೈಗೊಳ್ಳುವಂತೆ ಶ್ರೀರಂಗಪಟ್ಟಣ ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಿರಂಗೂರು ಗ್ರಾ.ಪಂ.ನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ಶ್ರೀರಂಗಪಟ್ಟಣ ತಾಲ್ಲೂಕು ಕಾಳೇನಹಳ್ಳಿ, ಕೋಡಿ ಶೆಟ್ಟಿಪುರ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಪರಿಶೀಲಿಸಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ.&ನೈ ಉಪ ವಿಭಾಗ ಶ್ರೀರಂಗಪಟ್ಟಣ ಇವರಿಗೆ ತಿಳಿಸಿದರು.




