ಮದ್ದೂರು ಪಟ್ಟಣದ ತಮಿಳು ಕಾಲೋನಿ ಜಾಗವನ್ನು ಕೊಳಚೆ ಅಭಿವೃದ್ಧಿ ಮಂಡಳಿಗೆ ಮಾಡುವಂತೆ ಹಸ್ತಾಂತರ ಮಾಡುವಂತೆ ಒತ್ತಾಯಿಸಿ ಶ್ರಮಿಕ ನಿವಾಸಿಗಳು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಐದನೇ ದಿನಕ್ಕೆ ಕಾಲಿಟ್ಟಿದ್ದು, ಇದುವರೆಗೆ ಮಂಡ್ಯ ಜಿಲ್ಲಾಡಳಿತ ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದಿಸದಿರುವುದರಿಂದ ಸಿಟ್ಟಾಗಿರುವ ಧರಣಿನಿರತರು ಮೈಸೂರಿಗೆ ಪಾದಯಾತ್ರೆಯಲ್ಲಿ ತೆರಳಿ ಮುಖ್ಯಮಂತ್ರಿ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧಾರ ಕೈಗೊಂಡಿದ್ದಾರೆ.
ಮಂಡ್ಯ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ, ಮೈಸೂರಿನಲ್ಲಿ ನಡೆಯಲಿರುವ ಮುಖ್ಯಮಂತ್ರಿ ಮೂರು ದಿನದ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಎಂ ಸಿದ್ದರಾಜು ಎಚ್ಚರಿಕೆ ನೀಡಿದ್ಧಾರೆ.
ಕಳೆದ 5 ದಿನದಿಂದ ನಾವು ಹೋರಾಟ ಕೈಗೊಂಡಿದ್ದೇವೆ, ಜಿಲ್ಲಾಡಳಿತ, ಶಾಸಕ, ಸಂಸದರು ಸೌಜನ್ಯಕ್ಕಾದರೂ ತಮ್ಮ ಸಮಸ್ಯೆ ಆಲಿಸಿಲ್ಲ, ನಮ್ಮ ಹೋರಾಟಕ್ಕೆ ಬೆಲೆ ಇಲ್ಲವೇ ? ಜಿಲ್ಲಾ ಆಡಳಿತ ವ್ಯವಸ್ಥೆ ನಮ್ಮ ಬೇಡಿಕೆಗೆ ಸ್ಪಂದಿಸಲು ಮುಂದಾಗುತ್ತಿಲ್ಲ, ಸ್ವಚ್ಛತೆ ಕೆಲಸ ನಿರ್ವಹಿಸಿ ದುಡಿದು ಬದುಕುವ ಜನತೆಗೆ ವಾಸಕ್ಕೊಂದು ಸೂರಿಲ್ಲದಂತಾಗಿದೆ. ಎಲ್ಲರಂತೆ ನಮಗೆ ಬದುಕುವ ಹಕ್ಕು ಇಲ್ಲವೇ ಎಂದು ಪ್ರಶ್ನಿಸಿದರು.
ಮದ್ದೂರು ತಮಿಳು ನಿವಾಸಿಗಳ ಕಾಲೋನಿ ಪ್ರದೇಶವನ್ನು ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರ ಮಾಡಬೇಕು, ಕಾಲೋನಿ 114 ಕುಟುಂಬಗಳನ್ನು ಸಮೀಕ್ಷೆ ಮಾಡಿ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ತಮಿಳು ಕಾಲೋನಿ ಪ್ರದೇಶ ಕಳೆದ 57 ವರ್ಷಗಳ ಹಿಂದೆ ಸ್ಲಂ ಎಂದು ಘೋಷಿತವಾಗಿದೆ. ಆದರೆ ಇಲ್ಲಿನ ನಿವಾಸಿಗಳಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ, ಬಡ ಜನರ ಸಮಸ್ಯೆ ಬಗ್ಗೆ ನಿರ್ಲಕ್ಷ ವಹಿಸಿರುವ ಶಾಸಕ, ಸಂಸದರು ಮತ್ತು ಜಿಲ್ಲಾಧಿಕಾರಿಗಳು ಬಡವರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಹೋರಾಟ ಸಮಿತಿಯ ಉಮಾ, ಪುಟ್ಟಮ್ಮ, ವೀರಮ್ಮ,ರೂಪ,ಎನ್ ರಘು, ಚಂದ್ರ,ಮಂಜು, ಆನಂದ, ರಾಜು, ಮಂಗಳ, ಕುಮಾರಿ ಮತ್ತಿತರರು ಭಾಗವಹಿಸಿದ್ದರು.




