ವಿಶ್ವದ ಜನರು ಇಂದು ತಮ್ಮ ಆಹಾರ ಪದ್ಧತಿಯ ಬದಲಾವಣೆಗೆ ಮುಂದಾಗಿದ್ದು, ಭಾರತೀಯ ಸಿರಿಧಾನ್ಯಗಳು ವಿಶ್ವದ ಗಮನ ಸೆಳೆದಿವೆ, ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯು 2023ನೇ ವರ್ಷವನ್ನು ಸಿರಿಧಾನ್ಯ ವರ್ಷವೆಂದು ಘೋಷಣೆ ಮಾಡಿದೆ ಎಂದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಆಹಾರ ಸಂಸ್ಕರಣ ಮಂತ್ರಾಲಯ ಭಾರತ ಸರ್ಕಾರ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ದಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ದಿ ನಿಗಮ, ಜಿ.ಪಂ ಹಾಗೂ ಜಿಲ್ಲಾಡಳಿತ ಮಂಡ್ಯ ಸಹಭಾಗಿತ್ವದಲ್ಲಿ ಮಂಡ್ಯ ನಗರದ ಡಾ.ರಾಜ್ ಕುಮಾರ್ ಬಡಾವಣೆಯಲ್ಲಿ ನಡೆದ ಬೆಲ್ಲದ ಪರಿಷೆ ಹಾಗೂ ಸಿರಿಧಾನ್ಯ ಮೇಳದ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಎರಡ್ಮೂರು ದಶಕಗಳ ಹಿಂದೆ ಬಡವರ ಆಹಾರ ಪದಾರ್ಥಗಳಾದ ಹಾರಕ, ನವಣೆ, ಸಜ್ಜೆ, ಬರಗು, ಸಾಮೆ, ಕೋರಲೆಗಳು ಇಂದು ಬಲಿಷ್ಠ ರಾಷ್ಟ್ರಗಳ ಶ್ರೀಮಂತರ ನೆಚ್ಚಿನ ಆಹಾರ ಪದಾರ್ಥಗಳಾಗಿದ್ದು, ಇದು ಕಾಲದ ಮಹಿಮೆ ಎಂದು ಬಣ್ಣಿಸಿದರು.

ರಾಜ್ಯದ ರೈತರ ಭವಿಷ್ಯದ ಜೀವನವನ್ನು ಹಸನು ಮಾಡುವ ಉದ್ದೇಶದಿಂದ ಇಂತಹ ಮೇಳಗಳನ್ನು ನಮ್ಮ ಸರ್ಕಾರ ಆಯೋಜಿಸಿದೆ, ಇದರ ಲಾಭ ಪಡೆದು ರೈತರು ಉತ್ಪಾದಿಸುವ ಉತ್ಪನ್ನಗಳಲ್ಲಿ ಉಪ ಉತ್ಪನ್ನಗಳನ್ನು ತಯಾರಿಸುವ ಜಾಣ್ಮೆ ರೂಢಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಮಂಡ್ಯ ಜಿಲ್ಲೆ ನೆನಪಾದ ಕ್ಷಣ, ಈ ನೆಲದ ಕೃಷಿಕರು, ಕಬ್ಬು, ಭತ್ತ ನೆನಪಾಗುತ್ತದೆ ಈ ಹಿನ್ನೆಲೆಯಲ್ಲಿ ನನಗೆ ಪ್ರಥಮ ಬಾರಿಗೆ ಕೃಷಿ ಖಾತೆಯ ಹೊಣೆಗಾರಿಕೆ ಲಭಿಸಿದ್ದು, ನನ್ನ ಅಧಿಕಾರಾವಧಿಯಲ್ಲಿ ಅನ್ನದಾತನ ಸಂಕಷ್ಟಕ್ಕೆ ನೆರವಾಗುವ ಯೋಜನೆಗಳನ್ನು ಸಾಕಾರಗೊಳಿಸಿ, ರೈತರ ಆರ್ಥಿಕ ಮಟ್ಟ ಉನ್ನತಿಗೆ ಸಹಕರಿಸಲಾಗುವುದೆಂದರು.
ಈ ಹಿಂದೆ ಸಿರಿಧಾನ್ಯಗಳನ್ನು ಬಳಸುತ್ತಿದ್ದ ಜನಸಾಮಾನ್ಯರನ್ನು ಲಘುವಾಗಿ ಕಾಣಲಾಗುತ್ತಿತ್ತು, ಜಗತ್ತಿನ ಹಲವು ದಿಗ್ಗಜ ರಾಷ್ಟ್ರಗಳಲ್ಲಿಯೂ ಸಿರಿಧಾನ್ಯ ಬಳಕೆಗೆ ಒತ್ತು ನೀಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ ಘೋಷಣೆಯಾಗಿರುವುದು ಸಮಯೋಚಿತವಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿರಿಧಾನ್ಯ ಬೆಳೆಯಲು ಹಲವು ರೀತಿಯ ಪ್ರೋತ್ಸಾಹ ನೀಡಲು ಮುಂದಾಗಿವೆ, ಅದೇ ರೀತಿ ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ, ಕೃಷಿ ಹೊಂಡ ನಿರ್ಮಾಣ ಮತ್ತಿತರ ಯೋಜನೆಗಳ ನೆರವು ನೀಡಲಾಗುತ್ತದೆ ಎಂದರು.
ಗ್ರಾಮೀಣ ಭಾಗದ ಮಹಿಳೆಯರು ಸಹ ರಾಗಿಯಿಂದ ಹಲವು ಉಪ ಉತ್ಪನ್ನಗಳನ್ನು ತಯಾರಿಸುವ ಜಾಣಾಕ್ಷತೆ ಹೊಂದಿದ್ದು, ಸರ್ಕಾರ ಅಥವಾ ವಿಜ್ಞಾನಿಗಳ ನೆರವಿಲ್ಲದೇ ಮೌಲ್ಯವರ್ಧಿತ ಉಪ ಉತ್ಪನ್ನಗಳನ್ನು ಉತ್ಪಾದಿಸುವ ಉತ್ಪಾದಕರ ನೆರವಿಗೆ ಧಾವಿಸಲು ‘ಅಮೃತ್’ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆ ಒದಗಿಸುವ ಯೋಜನೆ ಸಾಕಾರಗೊಳಿಸಲಾಗುತ್ತಿದೆ ಎಂದರು.
ಮಳೆ ಪ್ರಮಾಣ ಕಡಿಮೆಯಾಗಿದ್ದು, ನೀರಿನ ಶೇಖರಣಾ ಸಾಮರ್ಥ್ಯ ಕುಸಿದಿರುವ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಕಡಿಮೆ ನೀರು ಬಳಸಿ, ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸಬೇಕಿದೆ, ಇದಕ್ಕಾಗಿ ಸಿ.ಎಫ್.ಟಿ.ಆರ್.ಐ ಸೇರಿದಂತೆ ಹಲವು ಸಂಸ್ಥೆಗಳು ನೆರವು ನೀಡಲಿದ್ದು, ಇದರ ಪ್ರಯೋಜನಕ್ಕೆ ಮುಂದಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರವಿ ಗಣಿಗ ಮಾತನಾಡಿ, ಸದೃಢ ಆರೋಗ್ಯ ಸೃಷ್ಟಿಗೆ ಸಿರಿಧಾನ್ಯ ಹಾಗೂ ಬೆಲ್ಲದ ಬಳಕೆ ಉಪಯುಕ್ತವಾಗಿದ್ದು, ಇದರ ಮೇಳದ ಆಯೋಜನೆ ಶ್ಲಾಘನೀಯವಾಗಿದ್ದು, ಹಣ ಗಳಿಸುವ ಉಮೇದಿನಲ್ಲಿ ನಾವೆಲ್ಲರೂ ಅನಾರೋಗ್ಯಕ್ಕೆ ಈಡಾಗುತ್ತಿದ್ದು, ಹಣ ಗಳಿಕೆ ನಂತರ ಆರೋಗ್ಯ ಸೇವೆಗಾಗಿ ಹಣ ವ್ಯಯಿಸುವ ಪದ್ದತಿಗೆ ಅಂತ್ಯವಾಡಲು ಸಿರಿಧಾನ್ಯಗಳ ಬೆಳೆ ಪೂರಕವೆಂದರು.
ಜಿಲ್ಲೆಯಲ್ಲಿರುವ ಅಲೆಮನೆಗಳು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಅವುಗಳನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಶಾಸಕರಾದ ಕೆ.ಎಂ.ಉದಯ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಆಹಾರ ಸಂಸ್ಕರಣೆ ಹಾಗೂ ಕಟಾವು ತಂತ್ರಜ್ಞಾನ ಕೇಂದ್ರದ ವಿಶೇಷ ಕಾರ್ಯದರ್ಶಿ ಡಾ.ಮನೋಜ್ ರಾಜನ್, ಕೃಷಿ ಆಯುಕ್ತ ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ ಡಾ.ಕುಮಾರ, ಪೊಲೀಸ್ ವರಿಷ್ಟಾಧಿಕಾರಿ ಯತೀಶ್, ಸಿಇಓ ಶೇಖ್ ತನ್ವೀರ್ ಆಸಿಫ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ಕೃಷಿ ನಿರ್ದೇಶಕಿ ಕೆ.ಮಾಲತಿ ಇತರರಿದ್ದರು.




