Thursday, November 19, 2026

ಪ್ರಾಯೋಗಿಕ ಆವೃತ್ತಿ

ಜಿಡಿಪಿಗೆ ಕೃಷಿ ಕ್ಷೇತ್ರದ ಪಾಲು ದ್ವಿಗುಣಗೊಳಿಸಬೇಕಿದೆ- ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಕೃಷಿ ಪ್ರಧಾನ ದೇಶವಾಗಿರುವ ಭಾರತ ಜಿಡಿಪಿಯಲ್ಲಿ ಕೃಷಿ ಪಾಲು ಕೇವಲ 15 ರಿಂದ 20 ರಷ್ಟಿದ್ದು, ಇದನ್ನು ದ್ವಿಗುಣ ಮಾಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಆದಿ ಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದರು.

ಆಹಾರ ಸಂಸ್ಕರಣ ಮಂತ್ರಾಲಯ ಭಾರತ ಸರ್ಕಾರ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ದಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ದಿ ನಿಗಮ, ಜಿ.ಪಂ ಹಾಗೂ ಜಿಲ್ಲಾಡಳಿತ ಮಂಡ್ಯ ಸಹಭಾಗಿತ್ವದಲ್ಲಿ ನಗರದಲ್ಲಿ ಆಯೋಜನೆಗೊಂಡಿರುವ ಬೆಲ್ಲದ ಪರಿಷೆ ಹಾಗೂ ಸಿರಿಧಾನ್ಯ ಮೇಳದ ವಸ್ತು ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.

ನಮ್ಮ ದೇಶ ಉಸಿರಾಡುತ್ತಿರುವುದು ಗ್ರಾಮೀಣ ಪ್ರದೇಶಗಳಿಂದ ಅದೇ ರೀತಿ, ಗ್ರಾಮೀಣ ಭಾಗದ ರೈತರೇ ದೇಶದ ಬೆನ್ನೆಲುಬಾಗಿದ್ದು, ರೈತರು ಕಾಯಕ ತೊರೆದರೆ ಸೃಷ್ಠಿಯಾಗುವ ಆಹಾರ ಬಿಕ್ಕಟ್ಟು ಸರಿದೂಗಿಸಲು ಯಾವ ಸಂಶೋಧನೆಯಿಂದಲೂ ಸಾಧ್ಯವಿಲ್ಲ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ ಎಂದರು.

ದೇಶದ ಬಹು ಸಂಖ್ಯಾತ ಜನರು ಕೃಷಿಯನ್ನು ಅವಲಂಬಿಸಿದ್ದರೂ ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ, ಕೃಷಿಕರ ಬದುಕು ದುಸ್ಥರವಾಗಿದೆ, ಕೃಷಿಯನ್ನು ಉದ್ಯಮವನ್ನಾಗಿ ರೂಪಿಸಿ, ಲಾಭದಾಯಕವಾಗಿಸುವ ಸಂಶೋಧನೆಗಳು ನಮ್ಮ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೈಗಾರಿಕಾ ವಲಯಗಳಿಂದ ಮೂಡಿ ಬರಬೇಕೆಂದು ಕರೆ ನೀಡಿದರು.

nudikarnataka.com

ಮಾನವನಿಗೆ ಅತ್ಯಗತ್ಯವಾಗಿರುವ ನೀರು, ಗಾಳಿ, ಆಹಾರದ ಬಗ್ಗೆ ನಮ್ಮ ನಿರ್ಲಕ್ಷ್ಯ ಹೆಚ್ಚಾಗಿದೆ, ಇದು ಸರಿಯಲ್ಲ, ವ್ಯವಸಾಯ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಹಾಗೂ ಕಡಿಮೆ ಶ್ರಮದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಬೆಳೆದ ಉತ್ಪನ್ನಗಳಲ್ಲಿ ಉಪ ಉತ್ಪನ್ನಗಳನ್ನು ತಯಾರಿಸುವ ಯೋಜನೆಗಳು ರೈತರಿಗೆ ತಲುಪಬೇಕೆಂದು ಕರೆ ನೀಡಿದರು.

ರೈತರು ಸಹ 6 ತಿಂಗಳಗಳ ಕಾಲ ಹಗಲಿರುಳು ಶ್ರಮಪಟ್ಟು ಬೆಳೆದ ಉತ್ಪನ್ನಗಳನ್ನು ಕಟಾವು ಹಂತದಲ್ಲೇ ಮಾರಾಟ ಮಾಡುವ ಪ್ರವೃತ್ತಿಯಿಂದ ದೂರವಾಗಿ ಒಂದೆರಡು ತಿಂಗಳ ಕಾಲ ಸಂಗ್ರಹಿಸಿ ಮಾರಾಟ ಮಾಡಿ, ಹೆಚ್ಚು ಲಾಭ ಗಳಿಸುವ ಛಾತಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.

ಇಂದು ವಿಶ್ವದಲ್ಲಿ ಸಿರಿಧಾನ್ಯ ಬಳಕೆ ಹಾಗೂ ರಫ್ತು ಜಾಸ್ತಿ ಆಗುತ್ತಿದೆ, ಅದಕ್ಕೆ ಬೆಲೆ ದುಬಾರಿಯಾಗುತ್ತಿದ್ದು, ಉತ್ತಮ ಆರೋಗ್ಯಕ್ಕೆ ಪೂರಕವಾಗಿರುವ ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ರೈತರು ಒಲವು ತೋರಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಉದ್ದೇಶ ಸಮಯೋಚಿತವೆಂದರು.

ರಾಸಾಯನಿಕ ಮುಕ್ತ ವಾಣಿಜ್ಯ ಬೆಳೆಗಳತ್ತ ಗಮನವಿರಲಿ – ನರೇಂದ್ರಸ್ವಾಮಿ

ಅತಿ ಹೆಚ್ಚು ನೀರು ಹಾಗೂ ರಾಸಾಯನಿಕ ಗೊಬ್ಬರ ಬಳಸಿ ಫಲವತ್ತತೆ ನಾಶವಾಗಿರುವ ಮಂಡ್ಯ ಜಿಲ್ಲೆಯ ರೈತರ ಭವಿಷ್ಯದ ಬದುಕಿಗಾಗಿ ಕಡಿಮೆ ನೀರು ಬಳಕೆ ಹಾಗೂ ರಾಸಾಯನಿಕ ಮುಕ್ತ ಸಾಮೂಹಿಕ ವಾಣಿಜ್ಯ ಬೆಳೆ ಬೆಳೆಯುವ ಪದ್ಧತಿ ಅನುಷ್ಟಾನಕ್ಕೆ ಚಿಂತಿಸಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

ಮಂಡ್ಯ ನಗರದ ರಾಜ್ ಕುಮಾರ್ ಬಡಾವಣೆಯಲ್ಲಿ ನಡೆದ ಬೆಲ್ಲದ ಪರಿಷೆ ಹಾಗೂ ಸಿರಿಧಾನ್ಯ ಮೇಳ ವಸ್ತು ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೈಸೂರು ಮಹಾರಾಜರ ದೂರದೃಷ್ಠಿಯಿಂದ ನಿರ್ಮಾಣಗೊಂಡಿರುವ ಕನ್ನಂಬಾಡಿ ಅಣೆಕಟ್ಟೆಯ ನೀರಿನ ಹೆಚ್ಚು ಬಳಕೆ ಹಾಗೂ ರಾಸಾಯನಿಕ ಗೊಬ್ಬರ ವಿಷ ವರ್ತುಲದಿಂದ ರೈತರನ್ನು ಮತ್ತು ಮಣ್ಣನ್ನು ರಕ್ಷಿಸುವ ಚಿಂತನೆ ಆರಂಭವಾಗಿರುವುದು ಶ್ಲಾಘನೀಯ ಕಾರ್ಯ. ಸಿರಿಧಾನ್ಯ ಬಳಕೆ ಹಾಗೂ ಸಾವಯವ ಕೃಷಿಗೆ ಒತ್ತು ನೀಡಿ, ಅಂತರ್ಜಲ ಉಳಿಸಿ, ರೈತರ ಆರ್ಥಿಕತೆಯನ್ನು ವೃದ್ದಿಸುವ ನಿಟ್ಟಿನಲ್ಲಿ ಚಿಂತಿಸಬೇಕಿದೆ, ಆ ಮೂಲಕ ಪ್ರಾಚೀನ ಬೆಳೆ ಪದ್ಧತಿಗೆ ಮರಳಬೇಕಿದೆ ಎಂದರು.

ಭವಿಷ್ಯದಲ್ಲಿ ರೈತನನ್ನು ಮತ್ತೇ ಕೃಷಿಯತ್ತ ಆಕರ್ಷಿಸಲು ಸಾಮೂಹಿಕ ಹಾಗೂ ವಿನೂತನ ಕೃಷಿ ಪದ್ಧತಿಯನ್ನು ಜಾರಿಗೊಳಿಸುವ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಮಳವಳ್ಳಿ ತಾಲ್ಲೂಕಿನಲ್ಲಿ ತುಂತುರು ನೀರಾವರಿ ಯೋಜನೆಯಡಿ 30,000 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದು ರೈತರಿಗೆ ನೆರವಾಗಲು ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ