ಶೋಷಿತ ಸಮಾಜವನ್ನು ಸಮಾನತೆಯಿಂದ ನೋಡಬೇಕು ಎಂದು ಸಾಮಾಜಿಕ ಸುಧಾರಣೆಯ ಕ್ರಾಂತಿ ಮಾಡಿದವರು ಬ್ರಹ್ಮಶ್ರೀ ನಾರಾಯಣಗುರು ಎಂದು ಶಾಸಕ ಪಿ.ರವಿಕುಮಾರ್ ಅವರು ಹೇಳಿದರು.
ಮಂಡ್ಯನಗರದ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಮಂಡ್ಯ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಯಾವುದೇ ಜಾತಿ, ಧರ್ಮ ಇಲ್ಲ ಎಲ್ಲಾರು ಸಮಾನರೇ ಎಂದು 19 ನೇ ಶತಮಾನದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಹೋರಾಟ ಮಾಡಿದರು. ಅಂತಹ ಹೋರಾಟಗಾರರ ಸಿದ್ಧಾಂತವನ್ನು ಅಳವಡಿಸಿಕೊಂಡು ಇಂದಿನ ಪೀಳಿಗೆ ಮುಂದೆ ಸಾಗಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ನಾರಾಯಣಗುರು ಅವರ ಸಿದ್ಧಾಂತ ಹಾಗೂ ವೈಚಾರಿಕತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ರಾಜಕೀಯದಲ್ಲಿ ಹೋರಾಟ ಮಾಡಿದರು.
ಬ್ರಹ್ಮಶ್ರೀ ನಾರಾಯಣಗುರು ಅವರು ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರು ಸಮಾಜದ ಆಸ್ತಿ. ಸರ್ಕಾರ ಆರ್ಯ ವೈಶ್ಯ ಸಮುದಾಯಕ್ಕೆ ವಿಶೇಷ ಅನುದಾನ ನೀಡಿ ನೆರವಾಗಬೇಕು. ನಾರಾಯಣಗುರು ಅವರು ಅಂದು ಕೇರಳದಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರಿಂದಲೇ ಇಂದು ಕೇರಳ ಸಾಕ್ಷರತೆಯಲ್ಲಿ ದೇಶದಲ್ಲೇ ಮೊದಲಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸಾಮಾಜಿಕ ಸುಧಾರಣೆಯ ಕ್ರಾಂತಿಗೆ ಕಾರಣರಾದ ನಾರಾಯಣಗುರು ಅವರು ಸಾಮಾಜ ಸುಧಾರಕರಾಗಿ ಒಂದು ಜಾತಿ, ಧರ್ಮದ ಗುರುವಲ್ಲ ಅವರು ಲೋಕಗುರು ಎಂದರು.
ಮೊದಲು ಕೆಳವರ್ಗದ ಜನರಿಗೆ ಹಾಗೂ ಮಹಿಳೆಯರಿಗೆ ಮುಕ್ತ ಅವಕಾಶ ಇರಲಿಲ್ಲ. ಕ್ರಾಂತಿಯ ಮೂಲಕ ಸಮಾನತೆಯ ದೀಪ ಹಚ್ಚಿದವರು ನಾರಾಯಣಗುರು ಎಂದು ಅವರ ಸಾಮಾಜಿಕ ಚಳುವಳಿಯನ್ನು ಸ್ಮರಿಸಿದರು.
ಕೆಳವರ್ಗದವರಿಗೆ ದೇವಾಲಯ ಪ್ರವೇಶ ನಿರ್ಬಂಧ ವಿರೋಧಿಸಿ, ದೇವಾಲಯಕ್ಕೆ ಮುಕ್ತ ಅವಕಾಶ ನೀಡಿದರು. ದೇವಾಲಯಗಳು ಕೇವಲ ಪೂಜೆ, ಭಕ್ತಿಗೆ ಸೀಮಿತವಲ್ಲ. ಅವು ಅಧ್ಯಯನ ಕೇಂದ್ರ ಹಾಗೂ ಚಿಂತನಾ ಚಾವಡಿಗಳಾಗಿರಬೇಕು ಎಂದು ನಾರಾಯಣಗುರು ಅವರು ಸಮಾಜಕ್ಕೆ ತಿಳಿಸಿದರು.
ಯೋಗಗುರು ವೆಂಕಟೇಶಯ್ಯ ಅವರು ಬ್ರಹ್ಮಶ್ರೀ ನಾರಾಯಣಗುರು ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಕಾರ್ಯ ನಿರ್ವಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಉದಯ್ ಕುಮಾರ್, ಜಿಲ್ಲಾ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಅಪ್ಪಾಜಿಗೌಡ, ಉಪಾಧ್ಯಕ್ಷ ಅರುಣ್ ಕುಮಾರ್, ಪುಟ್ಟಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.




