ದಲಿತರ ಇನಾಂ ಭೂಮಿ ವಂಚಿಸಿ, ದಲಿತರ ಮೇಲೆ ದೌರ್ಜನ್ಯ ನಡೆಸಿ ಗೂಂಡಾಗಿರಿ ನಡೆಸಿರುವ ಸಚಿವ ಡಿ.ಸುಧಾಕರ್ ಅವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಡ್ಯ ನಗರದ ಸಂಜಯ ವೃತ್ತದಿಂದ ಮೆರವಣಿಗೆ ಹೊರಟ ಪತ್ರಿಭಟನಕಾರರು, ಜಿಲ್ಲಾಧಿಕಾರಿ ಕಚೇರಿ ಎದುರ ಪ್ರತಿಭಟಿಸಿದರು.
ಬೆಂಗಳೂರಿನ ಯಲಹಂಕ ಗ್ರಾಮ ಸರ್ವೆ ನಂ108/1ರಲ್ಲಿನ ದಲಿತ ಮಹಿಳೆ ಸುಬ್ಬಮ್ಮರಿಗೆ ಸೇರಿದ ಜಮೀನನ್ನು ಸಚಿವ ಡಿ.ಸುಧಾಕರ್ ಪಾಲುದಾರಿಕೆಯ “ಸೆವೆನ್ ಹಿಲ್ಸ್ ಡೆವಲಪರ್ ಮತ್ತು ಟ್ರೇಡರ್ ಕಂಪನಿ” ಮೂಲಕ ಕಬಳಿಸಿ, ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ದೌರ್ಜನ್ಯ ನಡೆಸಿದ ಸಚಿವ ಡಿ.ಸುಧಾಕರ್ ಮೇಲೆ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದ್ದರೂ ಅವರನ್ನು ಬಂಧಿಸದಿರುವ ಪೋಲೀಸ್ ಇಲಾಖೆಯ ಅದಕ್ಷತೆ ಎತ್ತಿ ತೋರಿಸುತ್ತದೆ ಕಿಡಿಕಾರಿದರು.
ಇಂತಹ ಗೂಂಡಾಗಿರಿ ಮನಸ್ಥಿತಿ ಹೊಂದಿರುವ ಸಚಿವ ಡಿ.ಸುಧಾಕರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ಸಮಿತಿಯ ರಾಜ್ಯಾದ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಕೆ.ಎಂ.ಅನಿಲ್ ಕುಮಾರ್, ಕೆ.ಎಂ.ಶ್ರೀನಿವಾಸ್, ಎಸ್.ಕುಮಾರ್, ಶಿವರಾಜ್ ಆತಗೂರು, ವೈ.ಸುರೇಶ್ ಕುಮಾರ್ ಶೆಟ್ಟಹಳ್ಳಿ, ಅಮೀನಾಜ್ ಮತ್ತಿತರರು ವಹಿಸಿದ್ದರು.




