Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| 5,000 ವಿದ್ಯಾರ್ಥಿಗಳಿಂದ ”ಸಂವಿಧಾನದ ಪೀಠಿಕೆ” ಓದು

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿಂದು ಸಾಮೂಹಿಕವಾಗಿ 5 ಸಾವಿರ ವಿದ್ಯಾರ್ಥಿಗಳೊಂದಿಗೆ ಸಂವಿಧಾನ ಪೀಠಿಕೆಯನ್ನು ಓದು ಕಾರ್ಯಕ್ರಮ ನಡೆಯಿತು.

ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ, ಮತ್ತು ಉಪಾಸನಾ ಸ್ವಾತಂತ್ಯ್ರ; ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃ ಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಪೂರ್ವಕ ಸಂಕಲ್ಪ ಮಾಡಿದವರಾಗಿ;  ಈ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ ಎಂದು ಕೃಷಿ ಸಚಿವ ಎನ್.ಚಲುರಾಯಸ್ವಾಮಿ ಅವರು, ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.

ನಂತರ ಮಾತನಾಡಿದ ಅವರು, ಭಾರತ ಸಂವಿಧಾನವು ಪ್ರಪಂಚದ ದೊಡ್ಡ ಸಂವಿಧಾನವಾಗಿದೆ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನವಾದ ಅವಕಾಶ ಸಂವಿಧಾನದಲ್ಲಿ ಇದೆ. ಈ ಮೂಲಕ ಪ್ರಜಾಪ್ರಭುತ್ವದ ಕಲ್ಪನೆಯನ್ನು ಕೊಟ್ಟ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ನನ್ನ ನಮನಗಳು ಎಂದರು.

ಸಂವಿಧಾನ ಎಲ್ಲರಿಗೂ ಒಂದೇ ರೀತಿಯ ಅವಕಾಶ ಕೊಟ್ಟಿದೆ. ಯಾರು ಬೇಕಾದರೂ ರಾಷ್ಟ್ರ ಪತಿ, ಪ್ರಧಾನಿ ಹಾಗೂ ಇನ್ನಿತರ ಗೌರವದ ಹುದ್ದೆಗಳನ್ನು ಪಡೆಯಬಹದು. ಸಂವಿಧಾನ ಕೊಟ್ಟ ಮತದಾನ ಅವಕಾಶದಿಂದಲೇ ನಾವಿಂದು ಚುನಾಯಿತ ಪ್ರತಿನಿಧಿಗಳಾಗಿ ಜನಸೇವೆ ಮಾಡುತಿದ್ದೇವೆ ಎಂದರು.

ಸಂವಿಧಾನದ ಪರಿಕಲ್ಪನೆ ಇಲ್ಲದೆ ಇದ್ದಿದ್ದರೆ ನಮ್ಮ ಸಮಾಜದ ಸ್ಥಿತಿ ಈಗಿರುತ್ತಿರಲಿಲ್ಲ. ಬಡವರು ಹಾಗೂ ಶ್ರಮಿಕರು ಬಂಡವಾಳ ಶಾಹಿಗಳ  ಹತ್ತಿರ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದರು.

ಇಂದು ನಾವೆಲ್ಲಾ ನಮಗೆ ಹಕ್ಕಿದೆ ನಮಗೂ ಅವಕಾಶ ಕೊಡಿ ಎಂದು ಕೇಳುವುದಕ್ಕೂ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ. ಹಾಗಾಗಿ ಸಂವಿಧಾನದ ಮೇಲೆ ಎಲ್ಲರಿಗೂ ಗೌರವವಿರಲಿ ಎಂದರು.

ಶಾಲಾ ಹಾಗೂ ಕಾಲೇಜುಗಳಿಂದ ಇಂದಿನಿAದ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯವಾಗಿದ್ದು, ಎಲ್ಲಾ ಶಾಲಾ ಕಾಲೇಜುಗಳು ಬೆಳಿಗ್ಗಿನ ಪ್ರಾರ್ಥನೆಯ ನಂತರ ಸಂವಿಧಾನದ ಪೀಠಿಕೆ  ಓದಬೇಕಾಗಿ ತಿಳಿಸಿದರು.

ಸಂವಿಧಾನ ವಿರುದ್ಧವಾಗಿ ಮಾತನಾಡುವುದು ಹಾಗೂ ಅದರ ವಿರುದ್ಧ ನಡೆದುಕೊಳ್ಳುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಸಂವಿಧಾನ ವಿರೋಧಿ ಚಟುವಟಿಕೆ  ನಡೆಸುವವರು ದೇಶ ಹಾಗೂ ರಾಜ್ಯಕ್ಕೆ ಮಾರಕ ಎಂದರು.

ಐದು ಸಾವಿರ ವಿದ್ಯಾರ್ಥಿಗಳು ಭಾಗಿ

ಐದು ಸಾವಿರ ವಿದ್ಯಾರ್ಥಿಗಳೊಂದಿಗೆ ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ಓದಲಾಯಿತು. ಮಕ್ಕಳು ಬೆಳಿಗ್ಗೆಯಿಂದಲೇ ಸಂವಿಧಾನ ಪೀಠಿಕೆ ಓದಲು ನಿಗದಿಪಡಸಿದ್ದ ಸ್ಥಳದಲ್ಲಿ ಇದ್ದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಂವಿಧಾನ ಪೀಠಿಕೆಯ ಒಂದು ಪ್ರತಿಯನ್ನು ನೀಡಲಾಯಿತು. ಜಿಲ್ಲೆಯಲ್ಲಿ ಒಟ್ಟು 7 ಲಕ್ಷ ಜನರು ಸಂವಿಧಾನ ಪೀಠಿಕೆ ಓದಲು ನೊಂದಣಿ ಮಾಡಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಶಾಸಕರಾದ ರವಿಕುಮಾರ್ ಪಿ, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ವಿ.ವಿ ಕುಲಪತಿ ಡಾ. ಪುಟ್ಟರಾಜು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ,  ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್,  ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಹಿಳಾ ಕಾಲೇಜಿನಲ್ಲಿ 3,000 ವಿದ್ಯಾರ್ಥಿಗಳು ಭಾಗಿ

ಮಂಡ್ಯನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಕಲ್ಲು ಕಟ್ಟಡ ಇವರ ಸಹಯೋಗದಲ್ಲಿ ಕಲ್ಲು ಕಟ್ಟಡ ಕಾಲೇಜಿನ ಹೊರಾಂಗಣದಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಧ್ಯಾಪಕರು ಸಿಬ್ಬಂದಿ ವರ್ಗದವರು ಸಂವಿಧಾನ ಪೀಠಿಕೆ ಓದಿದರು.

ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಿ ಭಾರತ ಸಂವಿಧಾನ ಪ್ರಸ್ತಾವನೆಯನ್ನು ಓದುವ ಮೂಲಕ ಪ್ರಮಾಣ ಸ್ವೀಕರಿಸಿದರು. ಈ ಅಭಿಯಾನದಲ್ಲಿ ಸರ್ಕಾರಿ ಮಹಿಳಾ ಮಹಾವಿದ್ಯಾಲಯ ದ 150 ಪ್ರಾಧ್ಯಾಪಕ ವರ್ಗ ಹಾಗೂ 1500 ವಿದ್ಯಾರ್ಥಿನಿಯರು ಮತ್ತು ಕಲ್ಲು ಕಟ್ಟಡ ಕಾಲೇಜಿನ 60 ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗ ಹಾಗೂ 1300 ವಿದ್ಯಾರ್ಥಿನಿಯರು, ಪ್ರೌಢಶಾಲಾ ವಿಭಾಗದ 200 ವಿದ್ಯಾರ್ಥಿಗಳು ಸಂವಿಧಾನ ಪ್ರಸ್ತಾವನೆ ಓದು ಅಭಿಯಾನದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ನೇತೃತ್ವವನ್ನು ಮಹಿಳಾ ಕಾಲೇಜಿನ ಪ್ರಾಂಶುಪಾಲ ದಶರಥ್ ಹಾಗೂ ಕಲ್ಲು ಕಟ್ಟಡ ಕಾಲೇಜಿನ ಪ್ರಾಂಶುಪಾಲ ತಮ್ಮೇಗೌಡ ಹೆಚ್‌ಪಿ ವಹಿಸಿದ್ದರು. ಉಪನ್ಯಾಸಕ ಜಿಎನ್ ನಾಗೇಶ್ ಅವರು ಸಂವಿಧಾನ ಪೀಠಿಕೆಯನ್ನು ಓದಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ