ಭಾರತದ ಸಂಸತ್ತಿನ ಶ್ರೀಮಂತ ಪರಂಪರೆಯ ಸ್ಮರಣೆಯ ಕುರಿತು ಕಾಂಗ್ರೆಸ್ ನಾಯಕ ಹಾಗೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮೆಲಕು ಹಾಕಿದರು.
ಇಂದು ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳಿ ಹೊಸ ಸಂಸತ್ತಿನ ಕಟ್ಟಡಕ್ಕೆ ತೆರಳುತ್ತಿರುವ ಹೊತ್ತಿನಲ್ಲಿ ಭಾವನಾತ್ಮಕ ನುಡಿಗಳನ್ನು ಹೇಳಿದ ಅವರು, ಭಾರತದ ಸಂವಿಧಾನವು ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅಡಿಗಲ್ಲು. ಈ ಸೆಂಟ್ರಲ್ ಹಾಲ್ನಲ್ಲಿಯೇ ಸಂವಿಧಾನ ಸಭೆಯು 1946 ರಿಂದ 1949 ರವರೆಗೆ 2 ವರ್ಷಗಳು, 11 ತಿಂಗಳುಗಳು ಮತ್ತು 17 ದಿನಗಳ ಕಾಲ ಸಂವಿಧಾನ ರಚನಾ ಸಭೆಗಳನ್ನು ನಡೆಸಿತು. ಈ ದೇಶಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ ಮಹನೀಯರನ್ನು ಇದೇ ವೇಳೆ ನಮ್ರತೆಯಿಂದ ಸ್ಮರಿಸುತ್ತೇನೆ ಎಂದರು.
ಭಾರತದ ಸಂಸತ್ತಿನ ಶ್ರೀಮಂತ ಪರಂಪರೆಯ ಸ್ಮರಣೆಯ ಕುರಿತು ಶ್ರೀ @kharge ಅವರ ಭಾಷಣದ ಆಯ್ದ ಭಾಗಗಳು..
ಭಾರತದ ಸಂವಿಧಾನವು ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅಡಿಗಲ್ಲು. ಈ ಸೆಂಟ್ರಲ್ ಹಾಲ್ನಲ್ಲಿಯೇ ಸಂವಿಧಾನ ಸಭೆಯು 1946 ರಿಂದ 1949 ರವರೆಗೆ 2 ವರ್ಷಗಳು, 11 ತಿಂಗಳುಗಳು ಮತ್ತು 17 ದಿನಗಳ ಕಾಲ ಸಂವಿಧಾನ ರಚನಾ ಸಭೆಗಳನ್ನು ನಡೆಸಿತು.
— Karnataka Congress (@INCKarnataka) September 19, 2023
“>
ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು, ದೇಶದ ಮೊದಲ ಪ್ರಧಾನ ಮಂತ್ರಿ ಹಾಗೂ ಆಧುನಿಕ ಭಾರತದ ವಾಸ್ತುಶಿಲ್ಪಿ ಪಂಡಿತ್ ಜವಾಹರಲಾಲ್ ನೆಹರು; ದೇಶದ ಮೊದಲ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್, ಭಾರತೀಯ ಸಂವಿಧಾನ ಶಿಲ್ಪಿಗಳಾದ ಡಾ.ಬಿ.ಆರ್.ಅಂಬೇಡ್ಕರ್ ಅವರುಗಳು ಆದರ್ಶಗಳು ನಮಗೆ ಇಂದಿಗೂ ಮಾದರಿ ಎಂದು ಸ್ಮರಿಸಿದರು.
ಇದೇ ವೇಳೆ ಜಿ.ವಿ.ಮಾವಲಂಕರ್ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರುಗಳ ಕೊಡುಗೆಗಳನ್ನು ಕೃತಜ್ಞತೆಯಿಂದ ಸ್ಮರಿಸುವ ಸಂದರ್ಭ ಮತ್ತು ಸಾಂವಿಧಾನಿಕ ಸಭೆ, ತಾತ್ಕಾಲಿಕ ಸಂಸತ್ತು ಮತ್ತು ಮೊದಲ ಮತ್ತು ನಂತರದ ಎಲ್ಲಾ ಲೋಕಸಭೆಗಳ ಸದಸ್ಯರ ಸಾಮೂಹಿಕ ಕೊಡುಗೆಗಳನ್ನು ನಾವು ಎಂದಿಗೂ ಮರೆಯಬಾರದು ಎಂದರು.
ನೆಹರೂ ಅವರು ಮಾಡಿದ ‘Tryst with Destiny’ ಭಾಷಣಕ್ಕೆ ಈ ಸೆಂಟ್ರಲ್ ಹಾಲ್ ಸಾಕ್ಷಿ
ಭಾರತದ ಸ್ವಾತಂತ್ರ್ಯದ ಮುನ್ನಾದಿನದಂದು ಪಂಡಿತ್ ಜವಹರ್ಲಾಲ್ ನೆಹರೂ ಅವರು ಮಾಡಿದ ‘Tryst with Destiny’ ಭಾಷಣಕ್ಕೆ ಈ ಸೆಂಟ್ರಲ್ ಹಾಲ್ ಸಾಕ್ಷಿಯಾಗಿತ್ತು. ತಮ್ಮ ಭಾಷಣದಲ್ಲಿ ಪಂಡಿತ್ ನೆಹರೂ ಅವರು ಹೇಳಿರುವ ಅದ್ಬುತ ಮಾತುಗಳನ್ನು ನನ್ನ ಭಾಷಣದಲ್ಲಿ ಉಲ್ಲೇಖಿಸುತ್ತಿದ್ದೇನೆ. “ಸ್ಪಷ್ಟವಾದ ನಂಬಿಕೆ ಮತ್ತು ನಿಖರ ಗುರಿ ಇಟ್ಟುಕೊಂಡು, ಬಹಳ ವರ್ಷಗಳ ಹಿಂದೆಯೇ ಪ್ರಯಾಣ ಆರಂಭ ಮಾಡಿದ್ದೆವು, ಈಗ ನಾವು ನಮ್ಮ ಪ್ರತಿಜ್ಞೆಯನ್ನು ಸಂಪೂರ್ಣವಾಗಿ ಅಥವಾ ಪೂರ್ಣ ಪ್ರಮಾಣದಲ್ಲಿ ನನಸು ಮಾಡಿಕೊಳ್ಳುವ ಸಮಯ ಬಂದಿದೆ. ಮಧ್ಯರಾತ್ರಿಯ ಹೊತ್ತು ಜಗತ್ತು ನಿದ್ರಿಸುವ ಸಮಯದಲ್ಲಿ ಬದುಕು ಮತ್ತು ಸ್ವಾತಂತ್ರ್ಯದ ಘಳಿಗೆಯನ್ನು ಕಣ್ತುಂಬಿಕೊಳ್ಳಲು ಭಾರತ ಎಚ್ಚರಗೊಂಡಿದೆ. ಜಗತ್ತಿನ ಇತಿಹಾಸದಲ್ಲಿ ಇದೊಂದು ಅಪರೂಪದ ಕ್ಷಣ. ನಾವು ಹಳೆಯದರಿಂದ ಹೊಸ ಯುಗಕ್ಕೆ ಕಾಲಿಡುತ್ತಿದ್ದೇವೆ. ನೂರಾರು ವರ್ಷಗಳ ಕಾಲ ನಲುಗಿದ್ದ ಈ ದೇಶದ ಆತ್ಮ ಈಗ ಬಿಡುಗಡೆಗೊಂಡು ನಿಟ್ಟುಸಿರು ಬಿಟ್ಟು ಸ್ವಂತ ದನಿಯಲ್ಲಿ ಮಾತಮಾಡುತ್ತಿದೆ. ಗಡಿಯಾರ ಹನ್ನೆರಡು ಹೊಡೆಯುತ್ತಿದ್ದಂತೆ, ಸಂವಿಧಾನ ಸಭೆಯ ಎಲ್ಲಾ ಸದಸ್ಯರು ಈ ಕೆಳಗಿನ ಪ್ರತಿಜ್ಞೆಯನ್ನು ತೆಗೆದುಕೊಂಡರು:
“ಭಾರತದ ಜನರು, ತ್ಯಾಗ, ಬಲಿದಾನ ಮತ್ತು ನೋವುಗಳನ್ನು ಸಹಿಸಿಕೊಂಡು ಸ್ವಾತಂತ್ರ್ಯವನ್ನು ಪಡೆದುಕೊಂಡಿರುವ ಈ ಹೊತ್ತಿನಲ್ಲಿ, ಸಂವಿಧಾನ ರಚನಾ ಸಭೆಯ ಸದಸ್ಯನಾದ ನಾನು, ನನ್ನ ಕೊನೆಗಾಲದವರೆಗೂ ಈ ಪ್ರಾಚೀನ ಭೂಮಿಯಾದ ಭಾರತ ಮತ್ತು ಅದರ ಜನರ ಸೇವೆಗೆ ವಿನಮ್ರತೆಯಿಂದ ಅರ್ಪಿಸುತ್ತೇನೆ. ಜಗತ್ತಿನಲ್ಲಿ ತಾಯಿ ಭಾರತಿಗೆ ಅರ್ಹ ಮತ್ತು ಗೌರವಾನ್ವಿತ ಸ್ಥಾನವನ್ನು ತಂದುಕೊಡಲಾಗುವುದು.
ವಿಶ್ವ ಶಾಂತಿ ಮತ್ತು ಮಾನವ ಕುಲದ ಕಲ್ಯಾಣವನ್ನು ಉತ್ತೇಜಿಸಲು ಈ ದೇಶದ ಬೆಂಬಲ ಸದಾ ಇರುವಂತೆ ನೋಡಿಕೊಳ್ಳುತ್ತೇವೆ ಮೇಲೆ ಹೇಳಿದ ಮಾತುಗಳು ಕಳೆದ ಏಳೂವರೆ ದಶಕಗಳಲ್ಲಿ ಪಕ್ಷಾತೀತವಾಗಿ ನಮ್ಮ ದೇಶದ ಸಂಸದರ ಸಾಮೂಹಿಕ ಮತ್ತು ಸಮರ್ಪಿತ ಪ್ರಯತ್ನದಿಂದಾಗಿ ಸಂಭವಿಸಿದೆ ಎಂದು ನಾನು ಈ ಸಂದರ್ಭದಲ್ಲಿ ಒತ್ತಿ ಹೇಳುತ್ತೇನೆ ನಮ್ಮ ಭಾರತ ದೇಶದ ಶ್ರೀಮಂತ ಪರಂಪರೆಯು ಪ್ರಪಂಚದಲ್ಲೇ ಪ್ರಬಲವಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳವಣಿಗೆಗೆ ಹೊಂದಲು ಬಲವಾದ ಅಡಿಪಾಯ ರೂಪಿಸಿದೆ. ಸಂಸತ್ ಭವನದ ಪ್ರತಿಯೊಂದು ಮೂಲೆ ಮೂಲೆಯೂ ಕಳೆದ 75 ವರ್ಷಗಳಲ್ಲಿ ನಮ್ಮ ಸಂಸದೀಯ ಪ್ರಜಾಪ್ರಭುತ್ವದ ವಿಕಾಸಕ್ಕೆ ಸಾಕ್ಷಿಯಾಗಿದೆ.
ನಾವು ಇಂದು ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳಿ ಹೊಸ ಸಂಸತ್ತಿನ ಕಟ್ಟಡಕ್ಕೆ ತೆರಳುತ್ತಿರುವ ಹೊತ್ತು. ನಾನು ಭಾರವಾದ ಹೃದಯ ಮತ್ತು ದುಃಖದಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ನಾವು ಖಂಡಿತವಾಗಿಯೂ ಹೊಸ ಸಂಸತ್ತಿನ ಕಟ್ಟಡದಲ್ಲಿ ನಮ್ಮ ಸಂಸದೀಯ ಕರ್ತವ್ಯಗಳನ್ನು ಮುಂದುವರೆಸುತ್ತೇವೆ, ಆದರೆ ಹಳೆಯ ಸಂಸತ್ ಭವನದ ಭಾಂದವ್ಯ ಮತ್ತು ನೆನಪುಗಳನ್ನು ಮರೆಯಲು ಅಸಾಧ್ಯ. ಸಾಂವಿಧಾನಿಕ ಮೌಲ್ಯಗಳು ಮತ್ತು ಆದರ್ಶಗಳನ್ನು ಎತ್ತಿಹಿಡಿಯುವುದರಲ್ಲಿಯೇ ಸಂಸತ್ತಿನ ಯಶಸ್ಸು ಅಡಗಿರುವುದು. ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಮೂಲಭೂತ ತತ್ವವಾಗಿದೆ. ನಾವೆಲ್ಲಾ ಸಂಸತ್ತಿನ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ಪಾಲಿಸುವ ಶಪಥ ಮಾಡಬೇಕು ಇದರಿಂದ ದೇಶದ ಬೆಳವಣಿಗೆ ಪರಿಣಾಮಕಾರಿಯಾಗುತ್ತದೆ. ಹಾಗೂ ಸಾಂವಿಧಾನಿಕ ಮೌಲ್ಯ ಮತ್ತು ಸಂಸದೀಯ ಸಂಪ್ರದಾಯಗಳನ್ನು ಅನುಸರಿಸಲು ಮತ್ತು ಸಂರಕ್ಷಿಸಲು ನಾವು ಬದ್ಧರಾಗಿರಬೇಕು ಎಂದು ಖರ್ಗೆ ಹೇಳಿದರು.




