ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಬೆಂಬಲಿಸಿ ಚಿತ್ರನಟ ದರ್ಶನ್ ಅಭಿಮಾನಿಗಳು, ರಾಜಸ್ತಾನ ಸಮಾಜ, ಮಂಗಳಮುಖಿಯರು ಪ್ರತಿಭಟಿಸಿದರು.
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ದರ್ಶನ್ ಸೇನಾ ಸಮಿತಿ ಸಹಯೋಗದಲ್ಲಿ ಮೆರವಣಿಗೆ ಹೊರಟ ದರ್ಶನ್ ತೂಗುದೀಪ್ ಅಭಿಮಾನಿಗಳು, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿ ನಾವು ಎಂದೆಂದಿಗೂ ರೈತಪರ ಎಂದರು.

ಕೇಂದ್ರ- ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಧಿಕ್ಕಾರದ ಘೋಷಣೆ ಜತೆಗೆ ಗೋವಿಂದ.. ಗೋವಿಂದ ಕೆಆರ್ಎಸ್ನಲ್ಲಿ ನೀರೆಲ್ಲ ಖಾಲಿ ಗೋವಿಂದ, ನಿಲ್ಲಿಸಿ, ನಿಲ್ಲಿಸಿ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಿ ಎಂದು ಕೂಗಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ವಿರೋಧಿಸಿ ರಾಜಸ್ತಾನ ಸಮಾಜದ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಗಳಮುಖಿಯರ ಪ್ರತಿಭಟನೆ
ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಕಾವೇರಿ ಹೋರಾಟಗಾರರ ಜತೆ ಸೇರಿದ ಮಂಗಳಮುಖಿಯರು ಖಾಲಿ ಬಿಂದಿಗೆ ಪ್ರದರ್ಶಿಸಿ, ರೈತರಿಗೆ ಆಗಿರುವ ಅನ್ಯಾಯ ಖಂಡಿಸಿದರು. ಎಸ್ಡಿಪಿಐ ಕಾರ್ಯಕರ್ತರು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿ ಹಲವು ತಾಸು ಪ್ರತಿಭಟನೆ ನಡೆಸಿದರು. ಮಂಡ್ಯ ಜಿಲ್ಲಾ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಚಿನ್ನದ ಅಂಗಡಿಯ ಕೆಲಸಗಾರರು ಪೇಟೆ ಬೀದಿಯಿಂದ ಬೈಕ್ ಜಾತಾ ನಡೆಸಿ ಕಾವೇರಿ ಹೋರಾಟ ಬೆಂಬಲಿಸಿದರು.




