ನಮ್ಮ ಪೂರ್ವಜರು ಉಳಿಸಿಕೊಂಡು ಬಂದಿದ್ದ ಆಚಾರ- ವಿಚಾರಗಳು ಮತ್ತು ಹಳೆಯ ಸಂಸ್ಕೃತಿ ನಶಿಸಿ ಹೋಗುತ್ತಿದ್ದು, ಯುವಪೀಳಿಗೆ ಆಧುನಿಕತೆಗೆ ತಕ್ಕಂತೆ ಬದಲಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಯುವಕರಲ್ಲಿ ಅರಿವು ಮೂಡಿಸಿ ಹಿರಿಯ ಆಚಾರ- ವಿಚಾರಗಳನ್ನು ಉಳಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ಗೌಡ ಅಭಿಪ್ರಾಯಪಟ್ಟರು.
ಶನಿವಾರ ಮಂಡ್ಯ ನಗರದ ಗಾಂಧಿಭವನದಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್, ಹಿರಿಯ ಸಹಕಾರಿ ಧುರೀಣ ಎನ್.ರಾಜು ಸಂಸ್ಮರಣ ಅಭಿಮಾನಿ ಬಳಗ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜೀವನಯಾತ್ರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಯುವಪೀಳಿಗೆಯಿಂದ ನಮ್ಮ ಹಳೆಯ ಸಂಸ್ಕೃತಿ ನಶಿಸಿ, ಪಾಶ್ಚಿಮಾತ್ಯ ಪದ್ಧತಿ ಹೆಚ್ಚಾಗುತ್ತಿದೆ. ಆದರೆ ಪ್ರಸ್ತುತ ಎನ್.ರಾಜು ಕುರಿತು ಲೇಖಕ ಲೋಕೇಶ್ ಚಂದಗಾಲು ರಚಿಸಿರುವ ಜೀವನಯಾತ್ರಿ ಪುಸ್ತಕದಲ್ಲಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಗ್ಗೆ ಪುಸ್ತಕ ಮಾಹಿತಿಯನ್ನು ಕಲೆ ಹಾಕಿದೆ ಎಂದು ಶ್ಲಾಘಿಸಿದರು.
ಸಹಕಾರಿ ಕ್ಷೇತ್ರದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಎನ್.ರಾಜಣ್ಣ ಕಾರ್ಯನಿರ್ವಹಿಸಿ ಹೆಸರು ಸಂಪಾದಿಸಿದರು. ಜೊತೆಗೆ ಮನ್ಮುಲ್ ನಿರ್ದೇಶಕರಾಗಿಯೂ ಉತ್ತಮ ಕಾರ್ಯನಿರ್ವಹಣೆ ಮಾಡಿದ ಅವರು, ಕಾವೇರಿ ಹೋರಾಟ ಹಾಗೂ ಗಾಂಧಿ ಭವನ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಸಹಕಾರ, ಹೋರಾಟ ಕ್ಷೇತ್ರದಲ್ಲಿ ಎನ್.ರಾಜಣ್ಣ ಅವರದ್ದು ಮಹತ್ವದ ಹೆಸರಾಗಿದೆ. ಮಂಡ್ಯ ಜಿಲ್ಲೆಯಲ್ಲಿ ತನ್ನದೇ ಆದ ಚಾಪು ಮೂಡಿದ್ದ ದಿ.ರಾಜಣ್ಣ ಅವರು ದಿ.ಜಿ.ಮಾದೇಗೌಡರ ಒಡನಾಡಿಯಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡಿದ್ದಾರೆ. ನನ್ನ ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರಗಳ ಏಳ್ಗೆಗೆ ಅವರ ಪಾತ್ರವೂ ಇದೆ. ಇಂತಹ ಶ್ರೇಷ್ಟ ವ್ಯಕ್ತಿತ್ವದ ಮನುಷ್ಯ ಬೇಗ ಅಗಲಿದ್ದು, ಬಹಳ ಬೇಸರದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಲೇಖಕ ಲೋಕೇಶ್ ಚಂದಗಾಲು ಅವರು ಎನ್.ರಾಜಣ್ಣ ಕುರಿತು ರಚಿಸಿರುವ ಜೀವನಯಾತ್ರಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಮೇಲುಕೋಟೆ ಜಿ.ಪಂ. ಮಾಜಿ ಸದಸ್ಯ ಕೆ.ಬಿ.ನರಸಿಂಹೇಗೌಡ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಹಕಾರ ಇಲಾಖೆಯ ನಿವೃತ್ತ ನಿರ್ದೇಶಕ ಪಿ.ರಾಮಕೃಷ್ಣೇಗೌಡ, ಲೇಖಕ ಲೋಕೇಶ್ ಚಂದಗಾಲು, ಅವಿನಾಶ್ ಗ್ರಾಫಿಕ್ಸ್ನ ಎನ್.ನಾಗರಾಜು, ರಾಜು ರವರ ಧರ್ಮಪತ್ನಿ ಸಾವಿತ್ರಮ್ಮ ಉಪಸ್ಥಿತರಿದ್ದರು.




