ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಡ್ಯ ನಗರದ ಸಂಜಯ ವೃತ್ತದಿಂದ ಮೆರವಣಿಗೆ ಹೊರಟ ದಸಂಸ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಕಾವೇರಿ ನದಿ ನೀರು ವಿಚಾರದಲ್ಲಿ 1924 ರಲ್ಲಿ ಆದ ಒಪ್ಪಂದದ ಕರಾರು 1974ಕ್ಕೆ ಮುಗಿದಿದ್ದರೂ ಕೇಂದ್ರಮ ರಾಜ್ಯ ಸರ್ಕಾರ ಮತ್ತು ನ್ಯಾಯಾಲಯಗಳು ಅದೇ ಒಪ್ಪಂದಕ್ಕೆ ಶರಣಾಗಿರುವುದು ಯಾವ ನ್ಯಾಯ ? ಸಂವಿಧಾನ ಬಾಹಿರ ಅವೈಜ್ಞಾನಿಕ ತೀರ್ಪುಗಳಿಂದ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರು ನಿರ್ವಹಣಾ ಸಮಿತಿಯನ್ನು ಅಮಾನ್ಯ ಮಾಡಬೇಕು, ಸಂವಿಧಾನದ ಅನುಚ್ಛೇದ 262 ರಂತೆ ಅಂತರ ರಾಜ್ಯ ಜಲವಿವಾದ ಇತ್ಯರ್ಥಕ್ಕೆ ಕಾವೇರಿ ಸಂಕಷ್ಟ ಸೂತ್ರ ರೂಪಿಸಬೇಕು, ಅಂತರ ರಾಜ್ಯ ಜಲ ವಿವಾದ ಪರಿಹಾರ ಕಾಯ್ದೆಗೆ ನಿಯಮ ರೂಪಿಸಬೇಕು, ಭಾರತದ ಸಮಗ್ರ ನದಿ ನೀರು ನಿರ್ವಹಣೆಗೆ ರಾಷ್ಟ್ರೀಯ ವೈಜ್ಞಾನಿಕ ಜಲನೀತಿ ರೂಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಸಂವಿಧಾನದಲ್ಲಿನ ರಾಜ್ಯ ಪಟ್ಟಿಯಲ್ಲಿರುವ ನೀರಾವರಿ ವಿಷಯದಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಬೇಕು ಅದೇ ರೀತಿ ವಿಶೇಷ ಅಧಿವೇಶನ ಕರೆದು ಕಾವೇರಿ ನೀರು ಸಂರಕ್ಷಣಾ ನಿರ್ಣಯ ಕೈಗೊಳ್ಳುವ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಬೇಕು, ಕಾವೇರಿ ಸಂಕಷ್ಟ ಸೂತ್ರ ಮತ್ತು ರಾಷ್ಟ್ರೀಯ ವೈಜ್ಞಾನಿಕ ಜಲನೀತಿ ರೂಪಿಸಲು ಒತ್ತಾಯಿಸುವ ಮೂಲಕ ಕರ್ನಾಟಕದ ಜನತೆಗೆ ಆಗುತ್ತಿರುವ ಅನ್ಯಾಯ ತಡೆಯಲು ಮುಂದಾಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ,ಕೆ.ಎಂ ಶ್ರೀನಿವಾಸ್, ಬಾಲರಾಜ್, ಆನಂದ ನೇತೃತ್ವ ವಹಿಸಿದ್ದರು.




