Sunday, November 22, 2026

ಪ್ರಾಯೋಗಿಕ ಆವೃತ್ತಿ

ಪರಿಶ್ರಮದಿಂದ ಮುನ್ನಡೆದಾಗ ಸಾಧನೆಯ ಹಾದಿ ಸುಲಭ: ಡಾ.ಸಮರ್ಥಂ ನಾಗಭೂಷಣಂ

ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣಬೇಕು. ಗುರಿಯೂ ಅಷ್ಟೇ ದೊಡ್ಡದಾಗಿರಬೇಕು. ಆತ್ಮವಿಶ್ವಾಸ, ಪರಿಶ್ರಮದಿಂದ ಮುನ್ನಡೆದಾಗ ಸಾಧನೆಯ ಹಾದಿ ಸುಲಭವಾಗುತ್ತದೆ ಎಂದು ಭಾರತದ ಹಿರಿಯ ವಾಣಿಜ್ಯೋದ್ಯಮಿ ಡಾ.ಸಮರ್ಥಂ ನಾಗಭೂಷಣಂ ಅಭಿಪ್ರಾಯಪಟ್ಟರು.

ಮಂಡ್ಯನಗರದ ಪಿಇಎಸ್ ತಾಂತ್ರಿಕ ಕಾಲೇಜಿನ ಡಾ.ಹೆಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ನಡೆದ ಮೊದಲ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವಿಂದು ತಂತ್ರಜ್ಞಾನ ಯುಗದಲ್ಲಿದ್ದೇವೆ. ತಂತ್ರಜ್ಞಾನದ ಬೆಳವಣಿಗೆ ನಾಗಾಲೋಟದಲ್ಲಿದೆ. ಅದಕ್ಕೆ ತಕ್ಕಂತೆ ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ದೇಹಾರೋಗ್ಯವನ್ನು ಸಮತೋಲದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ. ಮಾನವೀಯ ಮೌಲ್ಯಗಳು, ಉತ್ತಮ ವ್ಯಕ್ತಿತ್ವ ನಡವಳಿಕೆಯನ್ನು ರೂಢಿಸಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ತಂದೆ-ತಾಯಿಗಳು ಕಷ್ಟಪಟ್ಟು ದುಡಿಯುತ್ತಾರೆ. ಅವರು ದುಡಿದು ಕಳಿಸುವ ಹಣವನ್ನು ವ್ಯರ್ಥವಾಗದಂತೆ ಉಪಯೋಗಿಸಿಕೊಳ್ಳಿ. ಹಣಕ್ಕಾಗಿ ಮತ್ತೊಬ್ಬರ ಮೇಲೆ ಅವಲಂಬನೆಯಾಗದೆ ಸ್ವತಂತ್ರವಾಗಿ ದುಡಿಯುವ ಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು.
ತಾಂತ್ರಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳೂ ಮೂಲಸೌಕರ್ಯಗಳೊಂದಿಗೆ ಬೆಳವಣಿಗೆ ಸಾಧಿಸಿವೆ. ಕಳೆದ ೩೦ ವರ್ಷಗಳಲ್ಲಿ ಹವಾಮಾನ, ಕೃಷಿ ತಂತ್ರಜ್ಞಾನ, ರೋಬೊಟಿಕ್, ಸಂಪರ್ಕ ತಂತ್ರಜ್ಞಾನ ಹೀಗೆ ಎಲ್ಲ ಕ್ಷೇತ್ರಗಳೂ ನಿರೀಕ್ಷೆಗೂ ಮೀರಿದ ಬೆಳವಣಿಗೆ ಸಾಧಿಸಿವೆ. ಅವಕಾಶಗಳ ಬಾಗಿಲು ಮುಕ್ತವಾಗಿ ತೆರೆದುಕೊಂಡಿವೆ. ಅವುಗಳನ್ನು ಉಪಯೋಗಿಸಿಕೊಂಡು ದೇಶಕ್ಕೆ ಏನಾದರೊಂದು ಕೊಡುಗೆ ನೀಡುವುದಕ್ಕೆ ವಿದ್ಯಾರ್ಥಿಗಳು ಕಟಿಬದ್ಧರಾಗುವಂತೆ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಬೌದ್ಧಿಕ ಸಾಮರ್ಥ್ಯದೊಂದಿಗೆ ಕೌಶಲ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ತಾಂತ್ರಿಕ ಪದವಿ ಪಡೆದು ಉದ್ಯೋಗ ಗಳಿಸುವುದಷ್ಟೇ ನಿಮ್ಮ ಗುರಿಯಾಗಿರಬಾರದು. ಸಂಶೋಧನಾಸಕ್ತಿಯನ್ನು ರೂಢಿಸಿಕೊಂಡು ಹೆಚ್ಚಿನ ಅನ್ವೇಷಣೆಯಲ್ಲಿ ತೊಡಗಿ ಮಹತ್ವದ್ದೇನಾದರೂ ಸಾಧಿಸುವಂತೆ ತಿಳಿಸಿದರು.

ಇಸ್ರೋ ವಿಜ್ಞಾನಿ ಟಿ.ರವಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಓದಿದವರೂ ಸಾಧಕರಾಗಬಹುದು. ಆ ಕೀಳರಿಮೆಯಿಂದ ಹೊರಬರಬೇಕು. ಓದು, ಪರಿಶ್ರಮ, ಜ್ಞಾನದ ಬೆಳವಣಿಗೆ ಮುಖ್ಯವೇ ಹೊರತು ಮಾಧ್ಯಮವಲ್ಲ. ನೀವು ಇಲ್ಲಿಯವರೆಗೆ ಏನಾಗಿದ್ದಿರಿ ಎನ್ನುವುದಕ್ಕಿಂತ ಮುಂದೇನಾಗಬೇಕು ಎಂಬ ಬಗ್ಗೆ ಆಲೋಚಿಸಿ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಹೇಳಿದರು.

ಮತ್ತೋರ್ವ ಇಸ್ರೋ ವಿಜ್ಞಾನಿ ಕಮ್ರಾನ್ ಅಹಮದ್ ಅವರು, ವಿದ್ಯಾಭ್ಯಾಸಕ್ಕೆ ನೆರವಾದ ತಂದೆ-ತಾಯಿ, ವಿದ್ಯೆ ಹೇಳಿಕೊಟ್ಟ ಗುರುಗಳನ್ನು ಎಂದಿಗೂ ಮರೆಯಬಾರದು. ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ನಿಮ್ಮ ಏಳಿಗೆಗೆ ಕಾರಣರಾದ ಅವರನ್ನು ಗೌರವದಿಂದ ಕಾಣಬೇಕು. ವಿದ್ಯಾರ್ಥಿ ಜೀವನದಿಂದಲೇ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಗಳಾಗಿರುವ ಹಾಗೂ ಚಂದ್ರಯಾನ-3ರ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪಿ.ವಾಸುದೇವರಾವ್, ಟಿ.ರವಿ, ಕಮ್ರಾನ್ ಅಹಮದ್ ಅವರನ್ನು ಪಿಇಎಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಅಭಿನಂದಿಸಲಾಯಿತು. ಹಿರಿಯ ವಾಣಿಜ್ಯೋದ್ಯಮಿ ಡಾ.ಸಮರ್ಥಂ ನಾಗಭೂಷಣಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಪ್ರಾಂಶುಪಾಲ ಡಾ.ಹೆಚ್.ಎಂ.ನಂಜುಂಡಸ್ವಾಮಿ, ಉಪ ಪ್ರಾಂಶುಪಾಲ ಡಾ.ಎಸ್.ವಿನಯ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ