ದೆಹಲಿಯಲ್ಲಿ ನಡೆದ ಕಾವೇರಿ ನದಿ ನೀರು ಪ್ರಾಧಿಕಾರದ ಸಭೆಯಲ್ಲಿ ಅ.16 ರಿಂದ 31ರವರೆಗೆ ಪ್ರತಿನಿತ್ಯ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿರುವುದನ್ನು, ರಾಜ್ಯ ಸರ್ಕಾರ ಸಾರಸಗಟಾಗಿ ತಿರಸ್ಕರಿಸಬೇಕೆಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಪ್ರಾಧಿಕಾರದ ಆದೇಶ ಹೊರ ಬಿದ್ದ ಬೆನ್ನಲ್ಲೇ ಕಾವೇರಿ ಹೋರಾಟಗಾರರು ಆಕ್ರೋಶ ಹೊರಹಾಕಿದ್ದು, ಪ್ರತಿ ಬಾರಿಯೂ ನಿರಂತರ ನೀರು ಹರಿಸುವಂತೆ ಸೂಚಿಸುತ್ತಿರುವ ಸಮಿತಿ ಅಧಿಕಾರಿಗಳು ಕಾವೇರಿ ಕೊಳ್ಳದ ಜಲಾಶಯಗಳ ಪರಿಸ್ಥಿತಿಯನ್ನು ಅವಲೋಕಿಸದೆ ತೀರ್ಮಾನ ಕೈಗೊಳ್ಳುತ್ತಿರುವುದು ಅವೈಜ್ಞಾನಿಕ ಎಂದು ಆಕ್ರೋಶ ಹೊರ ಹಾಕಿದರು.
ಹೋರಾಟಗಾರ್ತಿ ಸುನಂದ ಜಯರಾಂ ಮಾತನಾಡಿ, ರಾಜ್ಯ ಸರ್ಕಾರ ಸಮಿತಿಯ ಸೂಚನೆಯನ್ನು ಒಪ್ಪದೆ ತಿರಸ್ಕರಿಸಲು ಮುಂದಾಗಬೇಕು,, ಒಂದು ಬಾರಿ ನೀರು ಬಿಡುವುದಿಲ್ಲ ಎಂದು ನಿರ್ಧಾರ ಕೈಗೊಳ್ಳುವ ಮೂಲಕ ಕಾನೂನು ಭಂಗಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದುವರೆಗೂ ನೀರು ಬಿಟ್ಟಿದ್ದು ಸಾಕಾಗಿದೆ, ಕುಡಿಯುವ ನೀರನ್ನಾದರೂ ಇರಿಸಿಕೊಳ್ಳಿ, ಕಾವೇರಿ ನದಿ ನೀರು ಸಂರಕ್ಷಣೆಗಾಗಿ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ನಿರ್ಣಯ ಕೈಗೊಳ್ಳಬೇಕು ಆ ಮೂಲಕ ರಾಜ್ಯದ ಜನರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಮೇಲ್ಮನವಿ ಸಲ್ಲಿಸಿದ್ದು, ಏನಾಯಿತು ?
ಕಾವೇರಿ ವಿಚಾರವಾಗಿ ಪ್ರಧಾನಿಗಳ ಬೇಟಿಗೆ ಕಾಲಾವಕಾಶ ಕೇಳಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳಿತ್ತು, ಆದರೆ ಪ್ರಧಾನಿಯವರನ್ನು ಭೇಟಿಯಾಗಲಿಲ್ಲ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು ಏನಾಯಿತು ? ಎಂಬುದರ ಬಗ್ಗೆ ಜನತೆಗೆ ತಿಳಿಸಿಲ್ಲ, ಇತ್ತ ಅಧಿವೇಶನವನ್ನು ಕರೆಯುತ್ತಿಲ್ಲ, ರಾಷ್ಟ್ರಪತಿಯವರನ್ನು ಭೇಟಿಯಾಗಿ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿಲ್ಲ ಎಂದು ಅವರು ದೂರಿದರು.
ಚುನಾಯಿತ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಲ್ಲ, ಇವರ ಬೇಜವಾಬ್ದಾರಿ ವರ್ತನೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ, ಸಂಸದರು ಎಲ್ಲಿ ಹೋಗಿದ್ದಾರೆ, ಏನು ಮಾಡುತ್ತಿದ್ದಾರೆ ಇವರೆಲ್ಲರೂ ಒಗ್ಗೂಡಿ ಪ್ರಧಾನಿ ಬಳಿ ಹೋಗದೆ ಸುಮ್ಮನಿದ್ದಾರೆ, ಪ್ರಧಾನಮಂತ್ರಿಯೂ ಸಹ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಕಾವೇರಿ ವಿಚಾರದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು, ಹೋರಾಟದ ಮುಂದಿನ ನಡೆ ಬಗ್ಗೆ ರೈತ, ಕನ್ನಡಪರ, ಪ್ರಗತಿಪರ ಹಾಗೂ ದಲಿತ, ಜನಪರ ಸಂಘಟನೆಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.




