ಶಿವಶರಣೆ ಅಮ್ಮಯ್ಯಮ್ಮ ದುರ್ಗೇಗೌಡ ಪ್ರತಿಷ್ಠಾನದ ವತಿಯಿಂದ ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಗ್ರಾಮದ ದಂಡಿನಮ್ಮ ಲಕ್ಷ್ಮಿದೇವಿ ದೇವಸ್ಥಾನದ ಮೈದಾನದಲ್ಲಿ ಮೂರನೆಯ ಶಿವಾರಾಧನಾ ಶರಣ ಮೇಳ, ವಚನರತ್ನ ಪ್ರಶಸ್ತಿ ಪ್ರದಾನ, ಜಿಲ್ಲಾ ಮಟ್ಟದ ತತ್ವಪದ ಸ್ಪರ್ಧೆಯು ಅ.27ರಂದು ನಡೆಯಲಿದೆ ಎಂದು ಮೇಳದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಶಂಕರ ಹಲ್ಲೇಗೆರೆ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ದಿವ್ಯ ಸಾನಿಧ್ಯವನ್ನು ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸುವರು. ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಮೇಳ ಉದ್ಘಾಟಿಸುವರು. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು. ಮೈಸೂರು ಬಸವ ಜ್ಞಾನ ಮಂದಿರದ ಅಧ್ಯಕ್ಷೆ ಡಾ.ಮಾತೆ ಬಸವಾಂಜಲಿದೇವಿ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಇದೆ ಸಂದರ್ಭದಲ್ಲಿ ಡಾ.ಶಂಕರ್ ಹಲ್ಲೇಗೆರೆ ಅವರ ‘ಹಲ್ಲೇಗೆರೆಯ ತತ್ವಗಳು’ ಭಾಗ 1 ಮತ್ತು 2 ಪುಸ್ತಕಗಳನ್ನು ಶ್ರೀ ಚೈತ್ಯನ್ಯ ಮಹಾಸ್ವಾಮಿ, ಬಸವ ಬೃಂಗೇಶ್ವರ ಮಹಾಸ್ವಾಮಿಗಳು ಬಿಡುಗಡೆ ಮಾಡುವರು. ಶಿವಾನಂದಪುರಿ ಮಹಾಸ್ವಾಮಿ ಉಪಸ್ಥಿತರಿರುವರು. ಸಾಹಿತಿ ಡಾ.ಭೈರಮಂಗಲ ರಾಮೇಗೌಡ ಪುಸ್ತಕ ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಪತ್ರಕರ್ತರಾದ ವಸಂತಕುಮಾರ್, ವಿದ್ಯಾಶಂಕರ್ ಉಪಸ್ಥಿತರಿದ್ದರು.




